ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೊನೆಗೂ ನಗರಸಭೆ ಭ್ರಷ್ಟರ ‘ತಲೆದಂಡ’

ಜಿಲ್ಲಾಡಳಿತದಿಂದ ಮೂವರ ಅಮಾನತು; ಮೂವರ ಅಮಾನತಿಗೆ ಶಿಫಾರಸು
Last Updated 18 ಜೂನ್ 2022, 4:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ನಗರಸಭೆಯಲ್ಲಿ ನಡೆಯಿತೆನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರ ತಲೆದಂಡವಾಗಿದೆ. ಈ ಮೂಲಕ ಜಿಲ್ಲಾಡಳಿತವು ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಮುಂದಾಗಿದೆ.

ನಗರಸಭೆಯಲ್ಲಿ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ತಡೆಯಬೇಕೆಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಮೇಲಿಂದ ಮೇಲೆ ಒತ್ತಾಯಿಸುತ್ತ ಬಂದಿದ್ದವು. ಆದರೆ, ಅದು ಫಲ ನೀಡಿರಲಿಲ್ಲ. ಆದರೆ, ಇತ್ತೀಚೆಗೆ ಕೆಲ ನಗರಸಭೆಯ ಸಿಬ್ಬಂದಿ ಅಕ್ರಮದಲ್ಲಿ ಶಾಮಿಲಾಗಿರುವುದರ ಬಗ್ಗೆ ಸ್ವತಃ ನಗರಸಭೆಯ ಪೌರಾಯುಕ್ತರೇ ಠಾಣೆಗೆ ದೂರು ಕೊಟ್ಟಿದ್ದರು. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ಹಾಗೂ ಅದನ್ನು ಬೆಂಬಲಿಸುತ್ತಿದ್ದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ.

ಮೊದಲ ಹಂತದಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ನಗರಸಭೆಯ ಮೂವರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ನಗರಸಭೆಯ ಎಸ್‌. ಸುರೇಶ್‌ (ಎಸ್‌.ಡಿ.ಎ), ಜಿ. ನೀಲಕಂಠಸ್ವಾಮಿ (ಪ್ರಭಾರ ಆರ್‌.ಐ) ಹಾಗೂ ಕೆ. ರಮೇಶ (ಪ್ರಭಾರ ಬಿಲ್‌ ಕಲೆಕ್ಟರ್‌) ಅವರನ್ನು ಅಮಾನತುಗೊಳಿಸಿದ್ದಾರೆ. ಎಸ್‌. ಅಜಿತ್‌ ಸಿಂಗ್‌ (ಕಂದಾಯ ಅಧಿಕಾರಿ), ದಳವಾಯಿ ಮಂಜುನಾಥ (ಎಫ್‌.ಡಿ.ಎ) ಹಾಗೂ ನಾಗರಾಜ (ನಿವೃತ್ತ ಆರ್‌.ಐ) ವಿರುದ್ಧ ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.

ಆಗಿದ್ದೇನು?: ತಾಲ್ಲೂಕಿನ ಸಂಕ್ಲಾಪುರ ಗ್ರಾಮದ ಸರ್ವೇ ನಂಬರ್‌ 148 ಸರ್ಕಾರಿ ಜಮೀನನ್ನು 1999ರಿಂದ 2022ರ ಅವಧಿಯಲ್ಲಿ ಹೊಸಪೇಟೆ ನಗರಸಭೆ, ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿ, ನಗರಸಭೆಯ ದಾಖಲೆಗಳಲ್ಲಿ 1ರಿಂದ 7 ಜನರ ಹೆಸರಿಗೆ ಅಕ್ರಮ ಖಾತೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಸದರಿ ಅಧಿಕಾರಿ/ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಗರಸಭೆ ಪೌರಾಯುಕ್ತ ರಮೇಶ ಬಿ.ಎಸ್‌. ಅವರು ಮೇ 25ರಂದು ಪಟ್ಟಣ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರು.

ನಗರಸಭೆಯ ಕೇಸ್‌ ವರ್ಕರ್‌ಗಳಾದ ಎಸ್‌. ಸುರೇಶ್‌, ಮಂಜುನಾಥ ದಳವಾಯಿ, ಬಿಲ್ ಕಲೆಕ್ಟರ್‌ ಜಿ. ನೀಲಕಂಠ ಸ್ವಾಮಿ, ಕಂದಾಯ ಅಧಿಕಾರಿ ಎಸ್‌. ಅಜಿತ್‌ ಸಿಂಗ್‌, ಕಂದಾಯ ಇನ್‌ಸ್ಪೆಕ್ಟರ್‌ ನಾಗರಾಜ, ಪ್ರಭಾರ ಕರವಸೂಲಿಗಾರ ರಮೇಶ್‌, ನಿವೃತ್ತ ಅಧಿಕಾರಿ ಬಿ.ಸಿ. ಪೂಜಾರ್‌ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಏಳು ಜನರು ಸೇರಿಕೊಂಡು ಮಲ್ಲಿಕಾರ್ಜುನ, ಡಿ. ವೇಣುಗೋಪಾಲ್‌, ಜೇಟ್‌ ರಾಮ್‌ ಎಂಬುವರ ಹೆಸರಿಗೆ ಹೊಸಪೇಟೆಯ ಸರ್ವೇ ನಂಬರ್‌ 302/ಬಿ2 0.82 ಸೇಂಟ್ಸ್‌ ಸರ್ಕಾರಿ ಜಮೀನು ಮಾಡಿಕೊಡಲು ನಗರಸಭೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ. ಏಳು ಜನರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಕೋರಿದ್ದರು. ಕೆಲವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಡಿ.ಸಿ ಕ್ರಮ ಜರುಗಿಸಿದ್ದಾರೆ.

ಅಮಾನತುಗೊಂಡವರ ವಿವರ

ಎಸ್‌. ಸುರೇಶ್‌ (ಎಸ್‌.ಡಿ.ಎ)

ಜಿ. ನೀಲಕಂಠಸ್ವಾಮಿ (ಪ್ರಭಾರ ಆರ್‌.ಐ)

ಕೆ. ರಮೇಶ (ಪ್ರಭಾರ ಬಿಲ್‌ ಕಲೆಕ್ಟರ್‌)

ಅಮಾನತಿಗೆ ಶಿಫಾರಸುಗೊಂಡವರ ವಿವರ

ಎಸ್‌. ಅಜಿತ್‌ ಸಿಂಗ್‌ (ಕಂದಾಯ ಅಧಿಕಾರಿ)

ದಳವಾಯಿ ಮಂಜುನಾಥ (ಎಫ್‌.ಡಿ.ಎ)

ನಾಗರಾಜ (ನಿವೃತ್ತ ಆರ್‌.ಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT