ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಸ್ವಯಂ ಪ್ರೇರಣೆಯಿಂದ ದರ್ಗಾ, ಮಸೀದಿ ಮಳಿಗೆಗಳ ತೆರವು

ಸಂಜೆ ನೋಟಿಸ್‌, ಬೆಳಿಗ್ಗೆ ತೆರವು
Last Updated 19 ಫೆಬ್ರುವರಿ 2020, 9:20 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿಯ 21 ಮಳಿಗೆಗಳ ತೆರವು ಕಾರ್ಯ ಬುಧವಾರ ನಡೆಯಿತು.

ದರ್ಗಾಕ್ಕೆ ಹೊಂದಿಕೊಂಡಂತೆ ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತದ ಸಿಬ್ಬಂದಿ ಬೆಳಿಗ್ಗೆ ಜೆಸಿಬಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು. ಅದಕ್ಕೆ ದರ್ಗಾ ಮಸೀದಿ ಕಮಿಟಿಯ ಮುಖಂಡರು ವಿರೋಧ ವ್ಯಕ್ತಪಡಿಸಿದರು.

‘ಸುಪ್ರೀಂಕೋರ್ಟ್‌ ಆದೇಶ ಪ್ರಕಾರ ಧಾರ್ಮಿಕ ಕಟ್ಟಡಗಳ ಅತಿಕ್ರಮಣ ತೆರವುಗೊಳಿಸಲಾಗುತ್ತಿದೆ’ ಎಂದು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟರು. ‘ನಾಲ್ಕು ಅಡಿ ಅತಿಕ್ರಮಣವಿದ್ದು, ಅದನ್ನು ಮಳಿಗೆಗಳವರೇ ತೆರವುಗೊಳಿಸಿಕೊಳ್ಳುತ್ತಾರೆ’ ಎಂದು ಮುಖಂಡರು ಹೇಳಿದ ನಂತರ ಜೆಸಿಬಿಯನ್ನು ವಾಪಸ್‌ ಕಳುಹಿಸಿಕೊಡಲಾಯಿತು.

ನಂತರ ಮಳಿಗೆಗಳವರು ಸಾಮಾನು ಸರಂಜಾಮುಗಳನ್ನು ಬೇರೆಡೆ ಸಾಗಿಸಿ, ಕಟ್ಟಡಗಳನ್ನು ಒಡೆದುಕೊಂಡರು. ದರ್ಗಾ ಮಸೀದಿ ಕಮಿಟಿಯ ಕಾರ್ಯದರ್ಶಿ ಮೊಹಮ್ಮದ್‌ ರಫೀಕ್‌ ಪ್ರತಿಕ್ರಿಯಿಸಿ, ಮಂಗಳವಾರ ಸಂಜೆಯಷ್ಟೇ ನೋಟಿಸ್‌ ಕೊಟ್ಟಿದ್ದಾರೆ. ಬುಧವಾರ ಬೆಳಿಗ್ಗೆ ಏಕಾಏಕಿ ಜೆಸಿಬಿಸಮೇತ ಬಂದು ಕಟ್ಟಡ ಒಡೆಯಲು ಮುಂದಾಗಿದ್ದಾರೆ. ಇದು ಸರಿಯಾದ ಧೋರಣೆಯಲ್ಲ. ಕನಿಷ್ಠ ಒಂದು ವಾರದವರೆಗೆ ಕಾಲಾವಕಾಶ ನೀಡಬೇಕಿತ್ತು. ಅನೇಕ ಜನ ಸಾಲ ಮಾಡಿ ಮಳಿಗೆ ನಡೆಸುತ್ತಿದ್ದಾರೆ. ಏಕಾಏಕಿ ತೆರವುಗೊಳಿಸಿದರೆ ಅವರು ಬೀದಿಗೆ ಬೀಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸುಪ್ರೀಂಕೋರ್ಟ್‌ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ, ಸಮಯ ಕೊಡದೆ ತರಾತುರಿಯಲ್ಲಿ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಇಡೀ ಕಟ್ಟಡಕ್ಕೆ ಹಾನಿಯಾಗಬಾರದೆಂದು ಮಳಿಗೆಗಳವರೇ ತೆರವುಗೊಳಿಸಿಕೊಳ್ಳುತ್ತಿದ್ದಾರೆ. ನಮ್ಮ ವಕ್ಫ್‌ ಬೋರ್ಡ್‌ ದಾಖಲಾತಿಗಳಲ್ಲೇ ತಪ್ಪು ಮಾಹಿತಿ ನಮೂದಾಗಿದೆ. ಅದನ್ನೇ ಇಟ್ಟುಕೊಂಡು ತಾಲ್ಲೂಕು ಆಡಳಿತ ತೆರವುಗೊಳಿಸುತ್ತಿದೆ’ ಎಂದರು.

‘ಸುಪ್ರೀಂಕೋರ್ಟ್‌ ಆದೇಶ ಪಾಲನೆ’

‘ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಮಸೀದಿಗೆ ಹೊಂದಿಕೊಂಡಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲಾಗುತ್ತಿದೆ. ನಿರ್ದಿಷ್ಟ ಗಡುವಿನೊಳಗೆ ತೆರವು ಕಾರ್ಯಾಚರಣೆ ಮುಗಿಸಬೇಕೆಂದು ನ್ಯಾಯಾಲಯವೇ ನಿರ್ದೇಶನ ಕೊಟ್ಟಿದೆ. ಹೀಗಾಗಿ ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಸೀದಿಗೆ ಹೊಂದಿಕೊಂಡಿರುವ ಚರ್ಚ್‌ ಜಾಗ ಕೂಡ ಅತಿಕ್ರಮಿಸಲಾಗಿದೆ. ಈಗಾಗಲೇ ಅವರಿಗೆ ನೋಟಿಸ್‌ ನೀಡಲಾಗಿದ್ದು, ಇಷ್ಟರಲ್ಲೇ ತೆರವು ಮಾಡಲಾಗುವುದು. ಎಲ್ಲೆಲ್ಲಿ ರಸ್ತೆ, ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಲಾಗಿದೆಯೋ ಅವುಗಳನ್ನು ತೆರವುಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT