ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಹೊಡೆತಕ್ಕೆ ಹಸಿರು ಮಾಯ!

Last Updated 26 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರಖರವಾದ ಬಿಸಿಲಿನ ಹೊಡೆತಕ್ಕೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಸಿರು ಸಂಪೂರ್ಣ ಮಾಯವಾಗುವ ಹಂತಕ್ಕೆ ಬಂದಿದೆ.

ಜಲಮೂಲಗಳು ಸಂಪೂರ್ಣ ಬತ್ತಿ ಹೋಗಿವೆ.ಗಿಡ–ಗಂಟೆಗಳು, ಹುಲ್ಲು ಒಣಗಿ ಹೋಗಿದೆ. ಕೆಲವೆಡೆ ದನ–ಕರುಗಳಿಗೆ ಕುಡಿಯಲು ನೀರು, ಮೇವು ಸಿಗುತ್ತಿಲ್ಲ. ಜಿಲ್ಲಾ ಆಡಳಿತ ಅಲ್ಲಲ್ಲಿ ಮೇವಿನ ಬ್ಯಾಂಕ್‌ ತೆರೆದು ಪೂರೈಸುತ್ತಿದೆ. ಆದರೆ, ಅದು ಸಾಲುತ್ತಿಲ್ಲ. ಕೆಲವೆಡೆಗಳಲ್ಲಿ ಜಾನುವಾರುಗಳಿಗೆ ಮೇವು ಸಿಕ್ಕರೂ ಕುಡಿಯುವ ನೀರು ಪೂರೈಸಲು ರೈತರು ಪರದಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳನ್ನು ಗುರುತಿಸಲಾಗಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಅಧಿಕಾರಿಗಳು ಈಗ ಬರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಮುಂದಾಗಿದ್ದಾರೆ.

40ರಿಂದ 41 ಡಿಗ್ರಿ ಸೆಲ್ಸಿಯಸ್‌ ನಡುವೆ ಬಿಸಿಲು ಇರುತ್ತಿದೆ. ಮರ, ಗಿಡಗಳು ಒಣಗಿ ಹೋಗಿದ್ದು, ಅಸ್ಥಿಪಂಜರದಂತೆ ಗೋಚರಿಸುತ್ತಿದೆ. ಗುಡ್ಡಗಳ ಮೇಲಿನ ಹಸಿರು ಕಾಣೆಯಾಗಿದೆ. ತಾಲ್ಲೂಕಿನ ಕಾಕುಬಾಳು–ಜೋಗ, ಜೋಳದರಾಶಿ ಗುಡ್ಡದ ಮೇಲೆ ಆಕಸ್ಮಿಕ ಬೆಂಕಿ ಅನಾಹುತದಿಂದ ಇದ್ದ ಮರ–ಗಿಡಗಳು ಸುಟ್ಟು ಕರಕಲಾಗಿವೆ. ‘ವೈಕುಂಠ‘, ‘ಇಂದ್ರಭವನ‘ ಬೆಟ್ಟಗಳು ಕೂಡ ಹಸಿರು ಕಳೆದುಕೊಳ್ಳುವ ಹಂತಕ್ಕೆ ಬಂದಿವೆ.

ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಅನೇಕ ಕಡೆಗಳಲ್ಲಿ ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಗರದ ನೆಹರೂ ಕಾಲೊನಿಯ ಉದ್ಯಾನಗಳಲ್ಲಿನ ಗಿಡಗಳು ಸಂಪೂರ್ಣ ಒಣಗಿ ನಿಂತಿವೆ. ಟಿ.ಬಿ. ಡ್ಯಾಂ ರಸ್ತೆಯಲ್ಲಿನ ಉದ್ಯಾನದ ಪರಿಸ್ಥಿತಿಯೂ ಭಿನ್ನವಾಗಿಲ್ಲ.ಇನ್ನು ಶ್ರೀರಾಮುಲು ಉದ್ಯಾನದಲ್ಲಿ ಕೆಲ ಗಿಡಗಳು ಒಣಗಿವೆ. ಇದೇ ಪರಿಸ್ಥಿತಿ ಮುಂದುವರೆದು, ಅಕಾಲಿಕ ಮಳೆಯಾಗದಿದ್ದರೆ ನಗರದ ಇನ್ನುಳಿದ ಉದ್ಯಾನಗಳಿಂದ ಹಸಿರು ಸಂಪೂರ್ಣ ಮಾಯವಾಗುವ ಆತಂಕ ಕಾಡುತ್ತಿದೆ.

ಇನ್ನು ಕೆಂಡದಂತಹ ಬಿಸಿಲಿನಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ. ಬೆಳಿಗ್ಗೆ ಏಳರಿಂದ ಸಂಜೆ ಆರರ ವರೆಗೆ ಮನೆಯಿಂದ ಹೊರಗೆ ಹೋಗದಂತಹ ಪರಿಸ್ಥಿತಿ ಇದೆ. ಬಿಸಿ ಗಾಳಿ ಬೀಸುತ್ತಿರುವುದರಿಂದ ಮನೆಯಲ್ಲೂ ಕೂರಲು ಆಗುತ್ತಿಲ್ಲ. ಪದೇ ಪದೇ ವಿದ್ಯುತ್‌ ಕೈ ಕೊಡುತ್ತಿರುವುದರಿಂದ ಜನರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಮಧ್ಯಾಹ್ನ 12 ಗಂಟೆಯ ನಂತರ ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗುತ್ತಿದೆ. ಅಕಾಲಿಕ ಮಳೆ ಬಿದ್ದರೆ ತಾಪಮಾನ ಸ್ವಲ್ಪ ಕಡಿಮೆಯಾಗಬಹುದು ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಆದರೆ, ವರುಣ ಕೃಪೆ ತೋರಿಲ್ಲ. ಮೂರು ವಾರಗಳ ಹಿಂದೆ ಒಮ್ಮೆ ಮಳೆಯಾಗಿದೆ. ಆದರೆ, ಕೆಲವೇ ನಿಮಿಷ ಬಿದ್ದು ಹೋಗಿದ್ದರಿಂದ ಭೂಮಿ ತಂಪಾಗಿಲ್ಲ.

‘ಇಂತಹ ಬಿಸಿಲು ಹಿಂದೆಂದೂ ನೋಡಿರಲಿಲ್ಲ. ಕೆಂಡದ ಪಕ್ಕ ಕೂತ ಅನುಭವವಾಗುತ್ತಿದೆ. ಮಧ್ಯ ವಯಸ್ಕರು ಹೇಗೋ ಇರಬಹುದು. ಆದರೆ, ಮಕ್ಕಳು, ಹಿರಿಯ ನಾಗರಿಕರು, ಗರ್ಭೀಣಿಯರ ಪಾಡು ಹೇಳತೀರದಾಗಿದೆ. ಬೇರೆ ಕಡೆಗಳಲ್ಲಿ ಅನೇಕ ಸಲ ಅಕಾಲಿಕ ಮಳೆಯಾಗಿದೆ. ಅದರಂತೆ ನಮ್ಮ ಭಾಗದಲ್ಲಿ ಮಳೆಯಾದರೆ ತಾಪಮಾನ ಸ್ವಲ್ಪ ಇಳಿಕೆಯಾಗಬಹುದು’ ಎನ್ನುತ್ತಾರೆ ಇಲ್ಲಿನ ಪಟೇಲ್‌ ನಗರದ ಹಿರಿಯ ನಿವಾಸಿ ಫಕೀರಪ್ಪ ಬಸವರಾಜ.

‘ಪ್ರಕೃತಿಯೇ ಮುನಿಸಿಕೊಂಡಿದೆ. ನಾಲ್ಕು ವರ್ಷಗಳಿಂದ ಬರ ಇದೆ. ಹೀಗಿರುವಾಗ ಸರ್ಕಾರ, ಅಧಿಕಾರಿಗಳನ್ನು ದೂಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರು, ಮೇವು ಪೂರೈಸುತ್ತಿದ್ದಾರೆ. ಮನುಷ್ಯನ ಅತಿಯಾದ ಆಸೆಯಿಂದ ಪರಿಸರ ನಾಶವಾಗಿದೆ. ಹೀಗಾಗಿ ವಾತಾವರಣದಲ್ಲಿ ಭಾರಿ ಏರುಪೇರು ಉಂಟಾಗುತ್ತಿದೆ’ ಎಂದು ಪ್ರಾಧ್ಯಾಪಕ ನಂದೀಶ್ವರ ದಂಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT