ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯದ ವರೆಗೆ ಹೋಟೆಲ್‌ ಬುಕ್‌

ಅತಿ ಗಣ್ಯರು, ಗಣ್ಯರಿಂದ ಸರ್ಕಾರಿ ಅತಿಥಿ ಗೃಹಗಳಲ್ಲಿ ಕೊಠಡಿಗಳಿಗೆ ಲಾಬಿ
Last Updated 25 ಡಿಸೆಂಬರ್ 2019, 14:12 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿ ಕಣ್ತುಂಬಿಕೊಳ್ಳಲು ವಿವಿಧ ಭಾಗದ ಪ್ರವಾಸಿಗರು ಯೋಜನೆ ಹಾಕಿಕೊಂಡಿರುವುದರಿಂದ ನಗರ ಹಾಗೂ ತಾಲ್ಲೂಕು ಸುತ್ತಮುತ್ತಲಿನ ಹೋಟೆಲ್‌ಗಳು ವರ್ಷಾಂತ್ಯದ ವರೆಗೆ ಮುಂಗಡವಾಗಿ ಬುಕ್‌ ಆಗಿವೆ.

ಬಹುತೇಕ ಹೋಟೆಲ್‌ಗಳ ಶೇ 90ರಷ್ಟು ಕೊಠಡಿಗಳನ್ನು ಪ್ರವಾಸಿಗರು ಆನ್‌ಲೈನ್‌ನಲ್ಲಿಯೇ ಬುಕ್‌ ಮಾಡಿಕೊಂಡಿದ್ದಾರೆ. ಇನ್ನುಳಿದವುಗಳನ್ನು ಮಧ್ಯವರ್ತಿಗಳು, ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳ ಮೂಲಕ ಕಾಯ್ದಿರಿಸಿದ್ದಾರೆ. ಸರ್ಕಾರಿ ಅತಿಥಿ ಗೃಹಗಳು, ಹಂಪಿ ಸುತ್ತಮುತ್ತಲಿನ ರೆಸಾರ್ಟ್‌, ಹೋಂ ಸ್ಟೇಗಳು ಕೂಡ ಅದಕ್ಕೆ ಹೊರತಾಗಿಲ್ಲ.

ನಗರದ ಅಮರಾವತಿ ಅತಿಥಿ ಗೃಹ, ತುಂಗಭದ್ರಾ ಜಲಾಶಯದ ‘ವೈಕುಂಠ’ ಅತಿಥಿ ಗೃಹಗಳಲ್ಲಿ ಅತಿ ಗಣ್ಯರು, ಗಣ್ಯರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ‘ವೈಕುಂಠ’ದಲ್ಲಿ ಹನ್ನೆರಡು ಕೊಠಡಿಗಳಿವೆ. ಆದರೆ, 30ಕ್ಕೂ ಅಧಿಕ ಅರ್ಜಿಗಳು ಬಂದಿವೆ. ರಾಷ್ಟ್ರಪತಿ ಭವನದ ಸಿಬ್ಬಂದಿ, ಹೈಕೋರ್ಟ್‌ ನ್ಯಾಯಮೂರ್ತಿಗಳು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ಅವರ ಸಂಬಂಧಿಕರ ಅರ್ಜಿಗಳು ಅದರಲ್ಲಿ ಸೇರಿವೆ.

ಕೊಠಡಿಗಳನ್ನು ಕಾಯ್ದಿರಿಸಲು ಒಬ್ಬರಿಗಿಂತ ಒಬ್ಬರು ಪ್ರಭಾವಿಗಳ ಮೊರೆ ಹೋಗಿ ಶಿಫಾರಸು ಪತ್ರಗಳನ್ನು ತಂದಿದ್ದಾರೆ. ಇದು ಅತಿಥಿ ಗೃಹದ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದೆ. ‘ಸಾಮಾನ್ಯವಾಗಿ ಮೊದಲು ಬಂದವರಿಗೆ ಅತಿಥಿ ಗೃಹದಲ್ಲಿ ಆದ್ಯತೆ ಕೊಡಲಾಗುತ್ತದೆ. ಆದರೆ, ರಾಷ್ಟ್ರಪತಿ ಕಚೇರಿ, ನ್ಯಾಯಾಲಯ, ಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ. ಬೇರೆಯವರು ಮುಂಚಿತವಾಗಿಯೇ ಕೊಠಡಿ ಕಾಯ್ದಿರಿಸಿದ್ದಾರೆ. ಬೇರೆ ಕಡೆಗೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದರೆ, ಜಗಳವಾಡುತ್ತಿದ್ದಾರೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅತಿಥಿಗೃಹದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಲು ಸಾಲು ರಜೆಗಳು ಬಂದಾಗ, ವರ್ಷಾಂತ್ಯದ ಸಂದರ್ಭದಲ್ಲಿ ಪ್ರತಿ ವರ್ಷ ಹೀಗೆಯೇ ಆಗುತ್ತದೆ. ಆದರೆ, ಈ ಸಲ ಎಂದಿಗಿಂತ ಕೊಠಡಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಒಬ್ಬರಿಗಿಂತ ಒಬ್ಬರು ಪ್ರಭಾವಿಗಳು ಆಗಿರುವುದರಿಂದ ಯಾರಿಗೂ ಕೂಡ ಏನು ಹೇಳುವಂತಿಲ್ಲ. ಏನಾದರೂ ಹೇಳಿದರೆ ನಿಮ್ಮನ್ನು ನೋಡಿಕೊಳ್ಳುವುದಾಗಿ ಹೆದರಿಸುತ್ತಾರೆ’ ಎಂದು ಅಸಹಾಯಕತೆ ತೋಡಿಕೊಂಡರು.

ಹಂಪಿಗೆ ಭೇಟಿ ಕೊಡಲು ಇದು ಸೂಕ್ತ ಸಮಯ. ಶಾಲಾ–ಕಾಲೇಜಿನ ಮಕ್ಕಳು ಶೈಕ್ಷಣಿಕ ಪ್ರವಾಸ, ಹೊಸ ವರ್ಷಾಚರಣೆ ಆಚರಿಸಲು ದೇಶ–ವಿದೇಶದ ಜನ ಬಂದರೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವವರು ಉಳಿದ ರಜೆ ಮುಗಿಸಲು ಬರುತ್ತಾರೆ. ಹೀಗೆ ಎಲ್ಲರೂ ಒಟ್ಟಿಗೆ ಬರುತ್ತಿರುವುದರಿಂದ ಎಲ್ಲಾ ಹೋಟೆಲ್‌ಗಳಲ್ಲಿ ಕೊಠಡಿಗಳು ಬುಕ್‌ ಆಗಿವೆ. ದುಬಾರಿ ಬೆಲೆಯ ಐಷಾರಾಮಿ ಹೋಟೆಲ್‌ಗಳಲ್ಲಿಯೂ ಕೊಠಡಿಗಳು ಸಿಗುತ್ತಿಲ್ಲ.

‘ಈ ವರ್ಷ ಎರಡು ವಾರಗಳ ಮುಂಚೆಯೇ ಪ್ರವಾಸಿಗರು ಡಿ. 31ರ ವರೆಗೆ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ನಿತ್ಯ ಅನೇಕರು ಬಂದು ಬಂದು ಕೇಳಿಕೊಂಡು ಹೋಗುತ್ತಿದ್ದಾರೆ. ಎಲ್ಲಾ ಹೋಟೆಲ್‌ಗಳಲ್ಲಿಯೂ ಇದೇ ಸ್ಥಿತಿ ಇದೆ’ ಎಂದು ನಗರದ ಕಲ್ಲೇಶ್ವರ ಹೋಟೆಲ್‌ ಮಾಲೀಕ ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT