ಅಭಿವೃದ್ಧಿಗೆ ಮಾನವ, ಪ್ರಾಕೃತಿಕ ಸಂಪನ್ಮೂಲ ಅಗತ್ಯ

7
ಸಂಪದ ಕಾರ್ಯಾಗಾರ

ಅಭಿವೃದ್ಧಿಗೆ ಮಾನವ, ಪ್ರಾಕೃತಿಕ ಸಂಪನ್ಮೂಲ ಅಗತ್ಯ

Published:
Updated:
Deccan Herald

ಬಳ್ಳಾರಿ: ಒಂದು ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲದ ಜತೆಗೆ ಪ್ರಾಕೃತಿಕ ಸಂಪತ್ತು ಕೂಡ ಅತ್ಯಗತ್ಯವಾಗಿದೆ. ಈ ಎರಡೂ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡರೆ ದೇಶ ಅಭಿವೃದ್ಧಿಪಥದತ್ತ ಸಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಹೇಳಿದರು.

ಜಿಲ್ಲಾಡಳಿತ, ಕೈಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಂಯುಕ್ತಶ್ರಾಯದಲ್ಲಿ ನಗರದ ಅಲ್ಲಂ ಹೋಟೆಲ್‌ನಲ್ಲಿ ಮಂಗಳವಾರ ಉದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ ಸಂಪದ ಕಾರ್ಯಾಗಾರಕ್ಕೆ ಚಾಲನೆ ಮತ್ತು ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಜಿಲ್ಲೆಯಲ್ಲಿ ₹646 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ನಮ್ಮವರಿಂದಲೇ ಬಂಡವಾಳ ಹೂಡಿಕೆಯಾದರೆ, ನಾವು ಬೇರೆ ದೇಶದವರ ಮುಂದೆ ಕೈಚಾಚುವ ಅವಶ್ಯಕತೆ ಇರುವುದಿಲ್ಲ. ಚೀನಾ, ಜಪಾನ್ ಹಾಗೂ ವಿಸ್ತೀರ್ಣದಲ್ಲಿ ನಮಗಿಂತ ಚಿಕ್ಕದಾಗಿರುವ ರಾಷ್ಟ್ರಗಳು ಅಭಿವೃದ್ಧಿಯಲ್ಲಿ ನಮ್ಮನ್ನೂ ಮೀರಿಸಿವೆ. ನಾವೂ ಕೂಡ ಆ ನಿಟ್ಟಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಸಂಪದ ಯೋಜನೆಯನ್ನು ಕೇಂದ್ರ ಸರ್ಕಾರ ಬಳ್ಳಾರಿಯಿಂದಲೇ ಆರಂಭಿಸುತ್ತಿದೆ. ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆಗೆ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ. ಜಿಲ್ಲೆಯು ಸಾಕಷ್ಟು ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ದೇಶದ ದೊಡ್ಡ ಸಂಪತ್ತಾಗಿರುವ ಯುವಕರಲ್ಲಿನ ಜ್ಞಾನ ಮತ್ತು ಕೌಶಲಗಳನ್ನು ಬಳಸಿಕೊಂಡು ಉದ್ದಿಮೆ ಪ್ರಾರಂಭಿಸಲು ಪ್ರೋತ್ಸಾಹಿಸಬೇಕು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸುತ್ತದೆ. ವಿವಿಧ ರೀತಿಯ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವ ಉದ್ದಿಮೆದಾರರಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ಕಲ್ಪಿಸಲಾಗುವುದು ಎಂದರು.

ಭತ್ತ, ಮೆಣಸಿನಕಾಯಿ, ಕಬ್ಬು, ಅಂಜೂರ, ದಾಳಿಂಬೆ, ಬಾಳೆ, ಶೇಂಗಾ, ಹತ್ತಿ, ಈರುಳ್ಳಿ, ಮೆಕ್ಕೆಜೋಳ, ಪಪ್ಪಾಯಿ ಹೀಗೆ ಎಲ್ಲಾ ಪ್ರಮುಖ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಇವುಗಳನ್ನು ನೇರವಾಗಿ ಮಾರಾಟ ಮಾಡಿದರೆ, ರೈತರು ಮತ್ತು ಗ್ರಾಹಕರಿಗೆ ನಷ್ಟ ಉಂಟಾಗುತ್ತದೆ. ಅದನ್ನೇ ಸಂಸ್ಕರಣೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ದೊರಕಲಿದೆ. ನಾವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಶ್ರಮದಿಂದ ದುಡಿಯಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ ಭೂಮಿಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದರೂ ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಆದ್ದರಿಂದ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕಿದೆ. ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದಾಗಿದೆ ಎಂದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 125ಕ್ಕೂ ಹೆಚ್ಚು ಉದ್ದಿಮೆದಾರರು ಮತ್ತು ರೈತರಿಗೆ ಕೃಷಿ ಸಂಸ್ಕರಣೆ ಉದ್ದಿಮೆಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್ ಅವರು ಮಾಹಿತಿ ನೀಡಿದರು. ಸಂಪದ ಯೋಜನೆ ಮತ್ತು ಕಾಯ್ದೆ ಬಗ್ಗೆ ಕರ್ನಾಟಕ ಆಹಾರ ನಿಗಮದ ಜಂಟಿ ನಿರ್ದೇಶಕಿ ಅಂಬಿಕಾ, ಕೃಷಿ ಉದ್ದಿಮೆ ಅಭಿವೃದ್ಧಿ ನೀತಿ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥ ಗೌಡ ಮಾಹಿತಿ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಿ.ಕೆ.ನಾಗರಾಜ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಿದಾನಂದ ಇದ್ದರು.

 ಆಹಾರ ಸಂಸ್ಕಣಾ ಘಟಕ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಮುಂಡರಗಿ ಲೇಔಟ್‌ನಲ್ಲಿ 40 ಎಕರೆ ಜಾಗ ಮೀಸಲಿಟ್ಟಿದ್ದು, ₹45 ಕೋಟಿ ವೆಚ್ಚದಲ್ಲಿ ಅಲ್ಲಿಪುರ ಕೆರೆಯಿಂದ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ
ಡಾ.ವಿ.ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !