ಪ್ರಾಮಾಣಿಕವಾಗಿ ಮೈತ್ರಿ ಧರ್ಮ ನಿಭಾಯಿಸುವೆ: ದೀಪಕ್‌ ಕುಮಾರ್‌ ಸಿಂಗ್‌

ಮಂಗಳವಾರ, ಏಪ್ರಿಲ್ 23, 2019
31 °C

ಪ್ರಾಮಾಣಿಕವಾಗಿ ಮೈತ್ರಿ ಧರ್ಮ ನಿಭಾಯಿಸುವೆ: ದೀಪಕ್‌ ಕುಮಾರ್‌ ಸಿಂಗ್‌

Published:
Updated:
Prajavani

ಹೊಸಪೇಟೆ: ‘ಕಾಂಗ್ರೆಸ್‌ ಪಕ್ಷದೊಂದಿಗೆ ವೈಯಕ್ತಿಕವಾಗಿ ಎಷ್ಟೇ ಮುನಿಸಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಮೈತ್ರಿ ಧರ್ಮ ನಿಭಾಯಿಸುವೆ’ ಎಂದು ಜೆ.ಡಿ.ಎಸ್‌. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘28 ವರ್ಷ ಕಾಂಗ್ರೆಸ್‌ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದೆ. ಆದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಬೇರೆಯವರಿಗೆ ಮಣೆ ಹಾಕಿತು. ನಾನು ಅನಿವಾರ್ಯವಾಗಿ ಪಕ್ಷದಿಂದ ಹೊರಬರಬೇಕಾಯಿತು. ಈಗ ರಾಜ್ಯದಲ್ಲಿ ಜೆ.ಡಿ.ಎಸ್.–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಎರಡೂ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸುತ್ತೇವೆ. ಜೆ.ಡಿ.ಎಸ್‌. ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಮಿತ್ರ ಪಕ್ಷದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರ ಪ್ರಚಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಏ.10ರಂದು ವಡಕರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಗ್ರಪ್ಪನವರ ಪರ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ಶೀಘ್ರದಲ್ಲೇ ನಗರದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆಯಲಿದ್ದು, ಅದರಲ್ಲಿ ಜೆ.ಡಿ.ಎಸ್‌. ಮುಖಂಡರು, ಕಾರ್ಯಕರ್ತರು ಭಾಗವಹಿಸುತ್ತೇವೆ. ಒಂದುವೇಳೆ ಜಂಟಿ ಪ್ರಚಾರಕ್ಕೆ ಕರೆದರೆ ಹೋಗುತ್ತೇವೆ’ ಎಂದು ವಿವರಿಸಿದರು.

‘ಉಗ್ರಪ್ಪನವರು ಎಲ್ಲರ ಜತೆ ಮುಕ್ತವಾಗಿ ಬೆರೆಯುತ್ತಾರೆ. ಕಾನೂನು ಪಂಡಿತರಾಗಿದ್ದಾರೆ. ಉತ್ತಮ ವಾಗ್ಮಿ. ಅವರು ಸಂಸತ್ತಿಗೆ ಆರಿಸಿ ಹೋದರೆ ಜಿಲ್ಲೆಗೆ ನ್ಯಾಯ ಸಿಗಬಹುದು. ಅಭಿವೃದ್ಧಿಯ ವೇಗ ಹೆಚ್ಚಾಗಬಹುದು. ಹೀಗಾಗಿ ಮತದಾರರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್‌ನ ಕೆಲ ಹಿರಿಯ ಮುಖಂಡರು ನನ್ನನ್ನು ಸಂಪರ್ಕಿಸಿ ಪುನಃ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅವರ ಆಹ್ವಾನವನ್ನು ನಾನು ತಿರಸ್ಕರಿಸಿದ್ದೇನೆ. ಪಕ್ಷ ಕಟ್ಟಿ ಬೆಳೆಸಿದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ಮರಳಿ ಆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಜೆ.ಡಿ.ಎಸ್‌. ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸುತ್ತೇನೆ. ಸ್ಥಾನಮಾನಕ್ಕಾಗಿ ಎಂದೂ ಕೆಲಸ ಮಾಡಿದವನು ನಾನಲ್ಲ. ನನಗೆ ವಹಿಸಿದ ಕೆಲಸ ನಾನು ನಿಷ್ಠೆಯಿಂದ ಮಾಡುವೆ. ಸ್ಥಾನಮಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟದ್ದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !