ಐಸಿಸಿ ಸಭೆ ಡೋಲಾಯಮಾನ

7
ಹೊಸ ಸರ್ಕಾರ ಬಂದರೂ ಪುನರ್‌ ರಚನೆಯಾಗದ ನೀರಾವರಿ ಸಲಹಾ ಸಮಿತಿ

ಐಸಿಸಿ ಸಭೆ ಡೋಲಾಯಮಾನ

Published:
Updated:
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದು–ಪ್ರಜಾವಾಣಿ ಚಿತ್ರ

ಹೊಸಪೇಟೆ: ಹೊಸ ಸರ್ಕಾರ ರಚನೆಯಾದರೂ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ.) ಪುನರ್‌ ರಚನೆಯಾಗಿಲ್ಲ. ಇದರಿಂದಾಗಿ ಐ.ಸಿ.ಸಿ. ಸಭೆ ನಡೆಯುವುದು ಕಗ್ಗಂಟ್ಟಾಗಿ ಪರಿಣಮಿಸಿದೆ.

ನೂತನ ಸರ್ಕಾರ ರಚನೆಯಾದ ತಕ್ಷಣವೇ ಐ.ಸಿ.ಸಿ. ಪುನರ್‌ ರಚನೆ ಮಾಡುವುದು ವಾಡಿಕೆ. ಆದರೆ, ಈ ಸಲ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ ಸಮಿತಿ ರಚನೆಯಾಗಿಲ್ಲ. ಸಮಿತಿ ರಚನೆಯಾಗದೆ ಸಭೆ ನಡೆಸಲು ಬರುವುದಿಲ್ಲ.

ಸಮಿತಿಯು ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ನೀರಾವರಿ ತಜ್ಞರು ಹಾಗೂ ರೈತ ಮುಖಂಡರನ್ನು ಒಳಗೊಂಡಿರುತ್ತದೆ. ಆದರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಯಿಂದ ಯಾರೊಬ್ಬರೂ ಸಚಿವರಾಗಿಲ್ಲ. ಇದು ಕೂಡ ಸಮಿತಿ ರಚನೆ ಆಗದೇ ಇರುವುದಕ್ಕೆ ಮುಖ್ಯ ಕಾರಣವಾಗಿದೆ.

ಸಮಿತಿ ರಚನೆಗೊಂಡ ನಂತರ ಜನಪ್ರತಿನಿಧಿಗಳು, ರೈತರನ್ನು ಒಳಗೊಂಡ ಸಭೆ ನಡೆಸಿ, ಮುಂಗಾರು ಹಂಗಾಮಿಗೆ ಜುಲೈ ಎರಡನೇ ವಾರದ ನಂತರ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಇತ್ತೀಚೆಗೆ ತುಂಗಭದ್ರಾ ಸಮೀಪದ ಮುನಿರಾಬಾದ್‌ನ ಜಲಸಂಪನ್ಮೂಲ ಇಲಾಖೆಯ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಶಂಕರೇಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದಷ್ಟು ಶೀಘ್ರ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.

‘ಐ.ಸಿ.ಸಿ. ಸಭೆಯಲ್ಲಿ ತೀರ್ಮಾನ ಆಗುವವರೆಗೆ ನೀರು ಹರಿಸಲು ಬರುವುದಿಲ್ಲ. ಜನಪ್ರತಿನಿಧಿಗಳು, ರೈತರ ಸಮ್ಮುಖದಲ್ಲೇ ಸಭೆ ನಡೆಸಬೇಕು. ಕೂಡಲೇ ಸಮಿತಿ ಪುನರ್‌ ರಚಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಶಂಕರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಿತಿ ಪುನರ್‌ ರಚನೆ ವಿಚಾರವಾಗಿ ಜುಲೈ ಎರಡನೇ ವಾರದ ವರೆಗೆ ಕಾದು ನೋಡಲಾಗುವುದು. ಬಳಿಕ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆದು, ಕಾಲುವೆಗಳಿಗೆ ನೀರು ಹರಿಸಲು ಅನುಮತಿ ಪಡೆಯಲಾಗುವುದು. ನೀರು ಹರಿಸುವಂತೆ ರೈತರು ಒತ್ತಡ ಹಾಕುತ್ತಿದ್ದಾರೆ’ ಎಂದು ಹೇಳಿದರು.

‘ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಹೀಗಾಗಿ ಸಮಿತಿ ರಚನೆಯಾಗಿಲ್ಲ. ರೈತರ ಬಗ್ಗೆ ನಿಜವಾದ ಕಾಳಜಿ ಯಾರಿಗೂ ಇಲ್ಲ. ಚುನಾವಣೆ ಸಂದರ್ಭದಲ್ಲಷ್ಟೇ ಮೊಸಳೆ ಕಣ್ಣೀರು ಸುರಿಸುತ್ತಾರೆ. ಮೂರು ಜಿಲ್ಲೆಗಳ ಶಾಸಕರು ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿದರೆ ಸಮಿತಿ ರಚನೆಯಾಗುವುದು ದೊಡ್ಡ ವಿಷಯವಲ್ಲ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !