ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸಂಭ್ರಮದಿಂದ ಈದ್‌–ಉಲ್‌–ಫಿತ್ರ್‌

ಸಾಮೂಹಿಕ ಪ್ರಾರ್ಥನೆಯೊಂದಿಗೆ ಉಪವಾಸ ಅಂತ್ಯ
Last Updated 5 ಜೂನ್ 2019, 15:43 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಈದ್‌–ಉಲ್‌–ಫಿತ್ರ್‌ ಹಬ್ಬವನ್ನು ಮುಸ್ಲಿಮರು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ಶ್ವೇತ ವರ್ಣದ ಶುಭ್ರ ಬಟ್ಟೆ ಧರಿಸಿ, ತಲೆ ಮೇಲೆ ಟೋಪಿ ಹಾಕಿಕೊಂಡು ಸಾಮೂಹಿಕವಾಗಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಿದರು. ಇದಕ್ಕೂ ಮುನ್ನ ವಿವಿಧ ಬಡಾವಣೆಗಳ ಜನ ತಂಡೋಪ ತಂಡವಾಗಿ ಈದ್ಗಾ ಮೈದಾನಗಳತ್ತ ಹೆಜ್ಜೆ ಹಾಕಿದರು. ಕೆಲವರು ಕಾಲ್ನಡಿಗೆಯಲ್ಲಿ ಬಂದರೆ, ಮತ್ತೆ ಕೆಲವು ಜನ ದ್ವಿಚಕ್ರ ವಾಹನ, ಕಾರುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಾರ್ಥನೆಗೂ ಮುನ್ನ ಈದ್ಗಾಕ್ಕೆ ಬಂದು ಸೇರಿದರು.

ದಾರಿಯುದ್ದಕ್ಕೂ ಮಂತ್ರ ಪಠಣ, ದೇವರನ್ನು ಸ್ತುತಿಸುತ್ತ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಇದರಿಂದಾಗಿ ಇಡೀ ನಗರ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿತ್ತು. ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆಯೊಂದಿಗೆ ಸತತ ಒಂದು ತಿಂಗಳಿಂದ ಆಚರಿಸಿಕೊಂಡು ಬಂದಿದ್ದ ರಂಜಾನ್‌ ಉಪವಾಸವನ್ನು ಕೊನೆಗೊಳಿಸಿದರು. ನಂತರ ಕುಟುಂಬ ಸದಸ್ಯರೆಲ್ಲ ಸೇರಿಕೊಂಡು ಮನೆಯಲ್ಲಿ ತಯಾರಿಸಿದ ಶಾವಿಗೆ ಪಾಯಸ, ರಸಗುಲ್ಲಾ, ಬಿರಿಯಾನಿ ಸವಿದರು. ಅಷ್ಟೇ ಅಲ್ಲ, ನೆರೆಹೊರೆಯವರನ್ನು ಆಹ್ವಾನಿಸಿ, ಹಬ್ಬದ ಊಟ ಬಡಿಸಿದರು. ಕೆಲವೆಡೆ ಹಿಂದೂ ಧರ್ಮೀಯರು ಹಬ್ಬದಲ್ಲಿ ಭಾಗವಹಿಸಿ ಸೌಹಾರ್ದತೆ ಮೆರೆದರು.

ತಾಲ್ಲೂಕಿನ ಕಮಲಾಪುರ, ಬೈಲುವದ್ದಿಗೇರಿ, ವ್ಯಾಸನಕೆರೆ, ಸಂಕ್ಲಾಪುರ, ರಾಮಸಾಗರ, ಹೊಸೂರು, ಮುದ್ಲಾಪುರ, ಮಲಪನಗುಡಿ, ಕಡ್ಡಿರಾಂಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

ನಗರದ ಚಿತ್ತವಾಡ್ಗಿಯ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್‌ ಸಮಿತಿ ಅಧ್ಯಕ್ಷ ಸೈಯದ್‌ ಖಾದರ್‌ ರಫಾಯಿ, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಫಯೂಮ್‌ ಬಾಷಾ, ಕೆ. ಬಡಾವಲಿ, ಗೌಸ್‌ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

ಪ್ರಾರ್ಥನೆಯಲ್ಲಿ ಭಾಗವಹಿಸಲು ವಿವಿಧ ಕಡೆಗಳಿಂದ ಒಟ್ಟಿಗೆ ಜನ ಬಂದದ್ದರಿಂದ ಹಾಗೂ ಪ್ರಾರ್ಥನೆ ಮುಗಿದ ಬಳಿಕ ಜನ ಈದ್ಗಾ ಮೈದಾನದಿಂದ ಹೊರಬಂದ ವೇಳೆ ಅಂಬೇಡ್ಕರ್‌ ವೃತ್ತ, ಬಸವ ಕಾಲುವೆ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸುಗಮ ವಾಹನ ಸಂಚಾರಕ್ಕಾಗಿ ಸಂಚಾರ ಪೊಲೀಸರು ಪರದಾಟ ನಡೆಸಿದರು. ಈದ್ಗಾ ಮೈದಾನದ ಸುತ್ತ ಬೆಳಿಗ್ಗೆಯಿಂದಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸಾರ್ವಜನಿಕರ ವಾಹನಗಳ ಓಡಾಟದ ಮೇಲೆ ನಿರ್ಬಂಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT