ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಮಿತೆ’ಗೆ ಅಖಂಡ ಬಳ್ಳಾರಿ ಜಪ!

ಹಂಪಿ, ತುಂಗಭದ್ರಾ ಅಣೆಕಟ್ಟೆ ಬಳ್ಳಾರಿ ನಕಾಶೆಯಿಂದ ಹೋಗುವ ಭೀತಿ
Last Updated 30 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಅಸ್ಮಿತೆ ಉಳಿಸಿಕೊಳ್ಳುವ ಸಲುವಾಗಿಯೇ ಅಖಂಡ ಬಳ್ಳಾರಿ ಜಪ ಮಾಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಜಿಲ್ಲೆ ವಿಭಜನೆಗೊಂಡು ವಿಜಯನಗರ ಹೆಸರಿನಲ್ಲಿ ಹೊಸ ಜಿಲ್ಲೆಯ ಉದಯವಾದರೆ, ಜಗತ್ತಿನ ಭೂಪಟದಲ್ಲಿ ತನ್ನದೇ ಆದ ವಿಶೇಷ ಮಹತ್ವ ಹೊಂದಿರುವ ವಿಶ್ವ ಪಾರಂಪರಿಕ ತಾಣ ಹಂಪಿ ತನ್ನ ನಕಾಶೆಯಿಂದ ಕಳೆದುಕೊಳ್ಳುವ ಭೀತಿ ಬಳ್ಳಾರಿಯವರದ್ದು.

ಅಷ್ಟೇ ಅಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಜೀವನಾಡಿ ತುಂಗಭದ್ರಾ ಜಲಾಶಯ, ರಾಜ್ಯದ ಏಕೈಕ ಸಂಶೋಧನಾ ವಿಶ್ವವಿದ್ಯಾಲಯದ ಖ್ಯಾತಿ ಹೊಂದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ, ಉತ್ತರ ಕರ್ನಾಟಕದಲ್ಲೇ ಬಹುದೊಡ್ಡದಾದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಹಗರಿಬೊಮ್ಮನಹಳ್ಳಿಯ ಅಂಕಸಮುದ್ರ ಪಕ್ಷಿಧಾಮ, ಭತ್ತದ ಕಣಜ ಎಂದೇ ಕರೆಸಿಕೊಳ್ಳುವ ಕಂಪ್ಲಿ, ಮಲ್ಲಿಗೆ ಖ್ಯಾತಿಯ ಹೂವಿನಹಡಗಲಿ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರಣಕ್ಕಾಗಿ ಖ್ಯಾತಿ ಗಳಿಸಿರುವ ಕೊಟ್ಟೂರು ಉದ್ದೇಶಿತ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ. ಅದೇ ರೀತಿ ಭೌಗೋಳಿಕವಾಗಿ ಬಳ್ಳಾರಿಗಿಂತ ಹೊಸಪೇಟೆಗೆ ಹತ್ತಿರವಾಗಿರುವ ಕೂಡ್ಲಿಗಿ, ಹರಪನಹಳ್ಳಿಯು ಇದರ ವ್ಯಾಪ್ತಿಗೆ ಸೇರುತ್ತವೆ.

ಯಥೇಚ್ಛ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಸಂಡೂರು, ಭತ್ತ ಬೆಳೆಯುವ ಸಿರುಗುಪ್ಪ, ಕುರುಗೋಡು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ. ಬಳ್ಳಾರಿಯ ಕೋಟೆ, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ದರೋಜಿ ಕರಡಿದಾಮ ಅದರ ತೆಕ್ಕೆಗೆ ಹೋಗುತ್ತವೆ. ಆದರೆ, ಬಹುಮುಖ್ಯವಾದ ಸ್ಥಳಗಳೆಲ್ಲ ನೂತನ ಜಿಲ್ಲೆಯ ಪಾಲಾಗಲಿದ್ದು, ಆಗ ಬಳ್ಳಾರಿಯ ಅಸ್ಮಿತೆ ಗೌಣವಾಗುತ್ತದೆ. ಇದೇ ವಿಷಯ ಈಗ ಅಲ್ಲಿನವರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಅಖಂಡ ಬಳ್ಳಾರಿಯ ಮಂತ್ರ ಜಪಿಸುತ್ತಿದ್ದಾರೆ.

ಈ ಕಾರಣಕ್ಕಾಗಿಯೇ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಜಿ. ಕರುಣಾಕರ ರೆಡ್ಡಿ, ತುಂಗಭದ್ರಾ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ವಿರೋಧಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

‘ಹೊಸ ಜಿಲ್ಲೆಯ ಉದಯವಾದರೆ ತುಂಗಭದ್ರಾ ಜಲಾಶಯದ ನೀರಿನ ಹಂಚಿಕೆ ವಿಚಾರದಲ್ಲಿ ಎರಡೂ ಜಿಲ್ಲೆಯ ರೈತರ ನಡುವೆ ಜಗಳಗಳು ಆಗಬಹುದು. ಇದಷ್ಟೇ ಅಲ್ಲ, ಎಲ್ಲ ಪ್ರಮುಖ ಸ್ಥಳಗಳು ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೋದರೆ ಬಳ್ಳಾರಿ ಆರ್ಥಿಕವಾಗಿ ಹಿಂದೆ ಬೀಳಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ತುಂಗಭದ್ರಾ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ದರೂರು ಪುರುಷೋತ್ತಮಗೌಡ.

‘ಈಗಾಗಲೇ ಪ್ರಮುಖ ಕಚೇರಿಗಳೆಲ್ಲ ಹೊಸಪೇಟೆಯಲ್ಲಿ ಇವೆ. ಒಂದು ಕಡೆ ಹಂಪಿ, ಮತ್ತೊಂದು ಕಡೆ ನದಿ, ಬೆಟ್ಟ ಗುಡ್ಡಗಳಿರುವುದರಿಂದ ಹೊಸಪೇಟೆ ಬೆಳವಣಿಗೆಗೆ ಸೂಕ್ತ ಸ್ಥಳವಲ್ಲ’ ಎಂದಿದ್ದಾರೆ.

‘ಈ ಹಿಂದೆ ಬಳ್ಳಾರಿಯನ್ನು ಆಂಧ್ರ ಪ್ರದೇಶಕ್ಕೆ ಸೇರಿಸುವ ಹುನ್ನಾರ ನಡೆದಿತ್ತು. ಆದರೆ, ಸ್ಥಳೀಯರ ಹೋರಾಟದಿಂದ ಅದು ಮೈಸೂರು ರಾಜ್ಯಕ್ಕೆ ಸೇರಿತು. ಆ ಆಶಯಕ್ಕೆ ಧಕ್ಕೆ ಬರಬಾರದು ಎಂದರೆ ಅಖಂಡ ಬಳ್ಳಾರಿ ಹಾಗೆಯೇ ಉಳಿದುಕೊಳ್ಳಬೇಕು’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ.

ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಪ್ರತಿಕ್ರಿಯಿಸಿ, ‘ಪ್ರಜ್ಞಾಪೂರ್ವಕ ಹಾಗೂ ಭಾವನಾತ್ಮಕ ದೃಷ್ಟಿಯಿಂದ ವಿಜಯನಗರ ಜಿಲ್ಲೆ ಮಾಡಲೇಬೇಕು. ವಿಜಯನಗರಕ್ಕೆ ಸುದೀರ್ಘ ಚರಿತ್ರೆ ಹಾಗೂ ಅಸ್ಮಿತೆ ಇದೆ’ ಎಂದರು.

‘ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ತಾಲ್ಲೂಕುಗಳು ಬಹಳ ದೂರದಲ್ಲಿವೆ. ಅಲ್ಲಿನ ಜನರ ಸವಲತ್ತು, ಸಮಗ್ರ ಅಭಿವೃದ್ಧಿಗೆ ವಿಜಯನಗರ ಜಿಲ್ಲೆ ರಚನೆ ಸೂಕ್ತವಾದುದು’ ಎಂದು ಪ್ರತಿಪಾದಿಸುತ್ತಾರೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ನಿಂಬಗಲ್‌ ರಾಮಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT