ಶನಿವಾರ, ಫೆಬ್ರವರಿ 27, 2021
23 °C
ನಗರಸಭೆ ಸಾಮಾನ್ಯ ಸಭೆ

ತೆರಿಗೆ ತುಂಬದ ಟವರ್‌ ವಿದ್ಯುತ್‌ ಕಡಿತ: ಪೌರಾಯುಕ್ತ ವಿ. ರಮೇಶ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ‘ಹಲವು ವರ್ಷಗಳಿಂದ ತೆರಿಗೆ ತುಂಬದ ಮೊಬೈಲ್‌ ಟವರ್‌ಗಳ ಕಂಪನಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು. ಹದಿನೈದು ದಿನಗಳ ಒಳಗೆ ಸಮಂಜಸ ಪ್ರತಿಕ್ರಿಯೆ ನೀಡದಿದ್ದಲ್ಲಿ ಅವುಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದು ಪೌರಾಯುಕ್ತ ವಿ. ರಮೇಶ್‌ ಎಚ್ಚರಿಕೆ ನೀಡಿದರು.

ಬುಧವಾರ ಇಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಚಂದ್ರಕಾಂತ್‌ ಕಾಮತ್‌ ಅವರು ವಿಷಯ ಪ್ರಸ್ತಾಪಿಸಿ, ‘ಅನೇಕ ವರ್ಷಗಳಿಂದ ಮೊಬೈಲ್‌ ಟವರ್‌ ಕಂಪನಿಗಳಿಂದ ತೆರಿಗೆ ಸಂಗ್ರಹಿಸಿಲ್ಲ. ನಗರಸಭೆಗೆ ಬರಬೇಕಾದ ಲಕ್ಷಾಂತರ ರೂಪಾಯಿ ಆದಾಯ ಬಂದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪೌರಾಯುಕ್ತರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ತೆರಿಗೆ ತುಂಬುವವರೆಗೆ ಟವರ್‌ ಇರುವ ಆಸ್ತಿದಾರರಿಗೆ ಫಾರಂ ನಂ. 3 ನೀಡುವುದಿಲ್ಲ. ಟವರ್‌ ಅಳವಡಿಸಿರುವ ಕಟ್ಟಡಗಳ ಸ್ಥಿತಿ ಬಗ್ಗೆ ಕಂಪನಿಗಳೇ ಪ್ರಮಾಣ ಪತ್ರ ಸಲ್ಲಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಅವರನ್ನೇ ಹೊಣೆಗಾರರಾಗಿ ಮಾಡಲಾಗುವುದು’ ಎಂದು ಭರವಸೆ ಕೊಡುವ ಮೂಲಕ ಸದಸ್ಯ ರೂಪೇಶಕುಮಾರ್‌ ಅವರ ಆತಂಕವನ್ನು ದೂರ ಮಾಡಿದರು.

‘ಹಳಬರಿಗೆ ಮಳಿಗೆ ಕೊಡಿ’:

‘ಟೌನ್‌ ರೀಡಿಂಗ್‌ ರೂಂ ಬಳಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಈ ಹಿಂದೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಕೊಡಬೇಕು’ ಎಂದು ಕಾಂಗ್ರೆಸ್‌ ಸದಸ್ಯರಾದ ಬಡಾವಲಿ, ಗೌಸ್‌, ಎಂ.ಎಸ್‌. ರಘು ಆಗ್ರಹಿಸಿದರು.

‘ಟೌನ್‌ ರೀಡಿಂಗ್‌ ರೂಂ ಜಾಗದಲ್ಲಿ ಕೆಲವರು 50 ವರ್ಷಗಳಿಂದ ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಈಗ ನಿರ್ಮಿಸಿರುವ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಅವರಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಬಡಾವಲಿ ಹೇಳಿದರು.

ಅದಕ್ಕೆ ದನಿಗೂಡಿಸಿದ ಗೌಸ್‌, ‘ಆ ಜಾಗದಲ್ಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದವರ ಮನವೊಲಿಸಿ ತೆರವು ಮಾಡಲಾಗಿದೆ. ಅವರನ್ನು ಅಲಕ್ಷಿಸಿ ಬೇರೆಯವರಿಗೆ ಮಳಿಗೆ ಕೊಟ್ಟರೆ ತಪ್ಪಾಗುತ್ತದೆ. ಹಳಬರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದರು.
‘ಸುಮಾರು 40–50 ವರ್ಷಗಳಿಂದ ತೆರಿಗೆ ತುಂಬಿಕೊಂಡು ಅನೇಕ ಜನ ಅಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಮೊದಲು ಮಳಿಗೆಗಳನ್ನು ಹಂಚಿಕೆ ಮಾಡಬೇಕು. ಮಿಕ್ಕುಳಿದವುಗಳನ್ನು ಬೇರೆಯವರಿಗೆ ಕೊಡಬಹುದು’ ಎಂದು ಎಂ.ಎಸ್‌.ರಘು ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ‘ಹೊಸ ಮಳಿಗೆಗಳ ಹರಾಜಿಗೂ ಮುನ್ನ ಕನಿಷ್ಠ ಬಾಡಿಗೆ, ಠೇವಣಿ ನಿಗದಿಪಡಿಸಬೇಕು. ಅದಕ್ಕೆ ಸಭೆ ಒಪ್ಪಿಗೆ ಕೊಡಬೇಕಾಗುತ್ತದೆ. ಒಬ್ಬರಿಗೆ ಐದು ವರ್ಷಗಳ ವರೆಗೆ ಮಳಿಗೆ ಕೊಡಬಹುದು. ಈ ಹಿಂದೆ ಆ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಯಾವ ಮಾನದಂಡದ ಮೇಲೆ ಆದ್ಯತೆ ಕೊಡಬಹುದು ಎಂಬುದನ್ನು ಎರಡ್ಮೂರು ದಿನಗಳಲ್ಲಿ ವಿಶೇಷ ಸಭೆ ಕರೆದು, ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು’ ಎಂದು ತಿಳಿಸಿದರು. ಅದಕ್ಕೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ ಸಹಮತ ವ್ಯಕ್ತಪಡಿಸಿದರು.

ಬೀದಿ ದೀಪ ನಿರ್ವಹಣೆ ಕೊರತೆ:

‘ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಈ ಕುರಿತು ಹಲವು ಸಲ ಲಿಖಿತ ರೂಪದಲ್ಲಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಏಳನೇ ವಾರ್ಡ್‌ ಸದಸ್ಯ ಕುಲ್ಲಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ನೇರವಾಗಿ ಕಚೇರಿಗೆ ಬಂದು ಆನ್‌ಲೈನ್‌ ದೂರು ಕೊಟ್ಟು, ಅದರ ಪ್ರತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಹೀಗಿದ್ದರೂ ಸಮಸ್ಯೆ ದೂರವಾಗಿಲ್ಲ. ಸದಸ್ಯನಾಗಿರುವ ನನ್ನ ದೂರಿಗೆ ಬೆಲೆಯಿಲ್ಲ ಎಂದಾದರೆ ಜನಸಾಮಾನ್ಯರ ಪಾಡೇನು?’ ಎಂದು ಕೇಳಿದರು. ‘ಎಲ್ಲೆಲ್ಲಿ ಸಮಸ್ಯೆಯಾಗಿದೆಯೋ ಆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ’ ಪೌರಾಯುಕ್ತರು ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು