ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಕೆಲಸಕ್ಕೆ ಸಣ್ಣ ತ್ಯಾಗ ಮಾಡಿ

ವೀರಶೈವ ಲಿಂಗಾಯತರಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ
Last Updated 2 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಿ.ಎಸ್‌. ಯಡಿಯೂರಪ್ಪನವರು ಐದು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕಾದರೆ ವೀರಶೈವ ಲಿಂಗಾಯತರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು. ದೊಡ್ಡ ಕೆಲಸಕ್ಕಾಗಿ ಸಮಾಜದವರು ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ ಮಾಡಿದರು.

ವಿಜಯನಗರ ಕ್ಷೇತ್ರ ಉಪಚುನಾವಣೆ ನಿಮಿತ್ತ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತರ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ರಾಜಕಾರಣದಲ್ಲಿ ಎಲ್ಲರಿಗೂ ಅಧಿಕಾರ, ಅವಕಾಶಗಳ ಆಸೆ ಇರುತ್ತದೆ. ಒಮ್ಮೊಮ್ಮೆ ಸಿಗುವುದು ಕಷ್ಟ. ಯಾರೋ ನಮ್ಮವರೇ ಒಬ್ಬರಿಗೆ ಆ ಅವಕಾಶ ಬಂದರೆ ಸಮಾಧಾನ ಪಡಬೇಕು. ಎಲ್ಲರಿಗೂ ಅವಕಾಶ ಸಿಕ್ಕರೆ ಅದು ಪ್ರಜಾಪ್ರಭುತ್ವ ಅನಿಸಿಕೊಳ್ಳುವುದಿಲ್ಲ’ ಎಂದರು.

‘ಯಡಿಯೂರಪ್ಪನವರ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಚುನಾವಣೆ. ಜಿಂದಾಲ್‌ ಭೂ ಪರಭಾರೆ ವಿಚಾರದಲ್ಲಿ ಆನಂದ್‌ ಸಿಂಗ್‌ ರಾಜೀನಾಮೆ ಕೊಟ್ಟರು. ಇತರೆ 16 ಜನ ರಾಜೀನಾಮೆಗೂ ಇವರದಕ್ಕೂ ಸಂಬಂಧವೇ ಇಲ್ಲ. ಆದರೆ, ಅವರಿಂದ ಸರ್ಕಾರ ಬಂದಿದೆ. ಯಡಿಯೂರಪ್ಪನವರು ಇಂದು ಮುಖ್ಯಮಂತ್ರಿಯಾದರೆ ಅದಕ್ಕೆ ಆನಂದ್‌ ಸಿಂಗ್‌ ಹಾಗೂ ಇತರೆ ಅನರ್ಹ ಶಾಸಕರ ಋಣ ಸಮಾಜದವರ ಮೇಲಿದೆ. ಅದನ್ನು ತೀರಿಸುವ ಸಂದರ್ಭ ನಮಗೆ ಬಂದಿದೆ’ ಎಂದು ಹೇಳಿದರು.

‘ಯಡಿಯೂರಪ್ಪನವರು ಲಿಂಗಾಯತದ ದೊಡ್ಡ ಶಕ್ತಿ. ಎಲ್ಲಾ ನಮಗೆ ಬೇಕು ಎಂದು ಬಯಸುವ ಸಮಾಜ ನಮ್ಮದ್ದಲ್ಲ. ಎಲ್ಲರನ್ನೂ ಇಂಬಿಟ್ಟುಕೊಂಡು ಲೋಕ ಉದ್ಧಾರ ಮಾಡಿದ ಬಸವಣ್ಣನ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಕೈಬಲಪಡಿಸುವ ಅಗತ್ಯವಿದೆ. ಹಳೆ ಮೈಸೂರಿನಲ್ಲಿ ನಮ್ಮ ಸಮಾಜದವರು ನಿತ್ಯ ಎದುರಿಸುವ ಯಾತನೆ ಏನೆಂಬುದು ನನಗೆ ಗೊತ್ತು. ಇಂತಹ ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ. ಅದನ್ನು ಕೈಚೆಲ್ಲಿ ಕೊಳ್ಳಬಾರದು’ ಎಂದು ಕೋರಿದರು.

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ‘ನಾನು ಉಪಚುನಾವಣೆ ನಡೆಯುತ್ತಿರುವ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿರುವೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಇರಬೇಕೆಂದು ಜನ ಮಾತನಾಡುತ್ತಿದ್ದಾರೆ. ಹೀಗಾಗಿ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಶತಃಸಿದ್ಧ’ ಎಂದು ಹೇಳಿದರು.

‘ಮೈತ್ರಿ ಸರ್ಕಾರದ ದುರಾಡಳಿತವನ್ನು ರಾಜ್ಯದ ಜನ ನೋಡಿದ್ದಾರೆ. ಒಂದು ಮನೆಗೆ ಒಬ್ಬನೇ ಯಜಮಾನ ಇರಬೇಕು. ಅನೇಕ ಜನ ಇದ್ದರೆ ಏನಾಗುತ್ತದೆ ಎನ್ನುವುದನ್ನು ಕಣ್ಣಾರೆ ಕಂಡಿದ್ದೀರಿ. ಹಾಗಾಗಿ ಈ ರಾಜ್ಯಕ್ಕೆ ಸ್ಥಿರ, ಮನೆಗೆ ಒಬ್ಬನೇ ಯಜಮಾನ ಇರುವಂತೆ ಮಾಡಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ‘ಈ ರಾಜ್ಯದಲ್ಲಿನ ವೀರಶೈವ ಲಿಂಗಾಯತ ಮಠಗಳು, ಶಿಕ್ಷಣ ಸಂಸ್ಥೆಗಳು ಕೊಟ್ಟಿರುವಷ್ಟು ಕೊಡುಗೆ ಯಾರೂ ನೀಡಿಲ್ಲ. ಅವುಗಳು ಶಿಕ್ಷಣ ಕೊಡದಿದ್ದರೆ ರಾಜ್ಯ 200 ವರ್ಷ ಹಿಂದಿರುತ್ತಿತ್ತು’ ಎಂದು ಹೇಳಿದರು.

ಶಾಸಕರಾದ ಹಾಲಪ್ಪ ಆಚಾರ್, ಶಿವರಾಜ ಪಾಟೀಲ, ವೆಂಕಾರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಶರಣಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಶಂಕರ್, ಮುಖಂಡರಾದ ಶಂಕರ್‌ ಮೇಟಿ, ನೇಮರಾಜ ನಾಯ್ಕ, ಗುತ್ತಿಗನೂರು ವಿರೂಪಾಕ್ಷಗೌಡ, ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT