ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಕ್ ಯಾರ್ಡ್‌ನಲ್ಲೇ ಅಕ್ರಮ ಮರಳು ದಂಧೆ?

ಮರಳು ಸಾಗಾಣೆ; ಅಧಿಕಾರಿಗಳ ಜಾಣ ಕುರುಡು
Last Updated 9 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆ ಈಗ ಭಿನ್ನ ಸ್ವರೂಪ ತಾಳಿದೆ. ದಂಧೆಕೋರರು ಸರ್ಕಾರಿ ಸ್ಟಾಕ್ ಯಾರ್ಡ್ ಮೂಲಕವೇ ಮರಳು ದೋಚಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ಟಾಕ್ ಯಾರ್ಡ್‌ನಲ್ಲಿ ಒಂದು ಲಾರಿಗೆ ಪರ್ಮಿಟ್ ಪಡೆದು ಮೂರ್ನಾಲ್ಕು ಬಾರಿ ಮರಳು ಸಾಗಣೆ ಮಾಡಲಾಗುತ್ತಿದೆ. 12 ಟನ್ ಮರಳು ಸಾಗಣೆಗೆ ಪರವಾನಗಿ ಪಡೆದು 20 ಟನ್ ವರೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಸ್ಟಾಕ್ ಯಾರ್ಡ್ ನಲ್ಲಿ ಗುಡ್ಡಗಳ ಮಾದರಿಯಲ್ಲಿ ಸಂಗ್ರಹವಾಗಿರುವ ಮರಳು ಅನಧಿಕೃತ ಲೆಕ್ಕದಲ್ಲೇ ಕರಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ಆರು ಮರಳು ಬ್ಲಾಕ್ ಗಳನ್ನು ಗುರುತಿಸಿದೆ. ಹಿರೇಬನ್ನಿಮಟ್ಟಿಯಲ್ಲಿ ನಾಲ್ಕು, ಕೊಂಬಳಿ, ಹಕ್ಕಂಡಿಯಲ್ಲಿ ತಲಾ ಒಂದು ಬ್ಲಾಕ್ ನಲ್ಲಿ ಮರಳು ಗಣಿಗಾರಿಕೆಗೆ ಟೆಂಡರ್ ಮೂಲಕ ಅನುಮತಿ ನೀಡಿದೆ. ಇದೇ ಸ್ಥಳಗಳಲ್ಲಿ ಮರಳು ವಿತರಣೆಗೆ ಸ್ಟಾಕ್ ಯಾರ್ಡ್ ಗಳನ್ನು ತೆರೆಯಲಾಗಿದ್ದು, ಕೊಂಬಳಿ, ಹಕ್ಕಂಡಿ, ಹಿರೇಬನ್ನಿಮಟ್ಟಿಯ ಒಂದು ಯಾರ್ಡ್ ನಲ್ಲಿ ಮರಳು ವಿತರಣೆ ನಡೆಯುತ್ತಿದೆ.

ಕ್ಯಾಮೆರಾ ಕಣ್ಣಿಗೆ ಮರಳು: ಸ್ಟಾಕ್ ಯಾರ್ಡ್‌ನಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಪರ್ಮಿಟ್ ಹೊಂದಿದ ವಾಹನ ಎರಡನೇ ಬಾರಿ ಸ್ಟಾಕ್ ಯಾರ್ಡ್ ಗೆ ಬಂದಾಗ ಕ್ಯಾಮೆರಾ ಬಂದ್ ಮಾಡಿ ಮರಳು ತುಂಬಿಸಲಾಗುತ್ತದೆ. ಮುಂಡರಗಿ ತಾಲ್ಲೂಕು ಸಿಂಗಟಾಲೂರು ಸ್ಟಾಕ್ ಯಾರ್ಡ್ ಗಳಲ್ಲೇ ಈ ರೀತಿಯ ಅಕ್ರಮಗಳು ಹೆಚ್ಚಾಗಿ ನಡೆದಿವೆ ಎಂಬ ಬಲವಾದ ಆರೋಪ ಕೇಳಿ ಬಂದಿವೆ.

‘ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಸ್ಟಾಕ್ ಯಾರ್ಡ್ ಗಳು ಬಂದ್ ಆಗಿದ್ದರೆ ಸಿಂಗಟಾಲೂರು ಯಾರ್ಡ್ ಗಳ ಮೂಲಕ ಹಗಲು ರಾತ್ರಿ ಮರಳು ಸಾಗಾಟ ನಡೆದಿದೆ. ದಂಧೆಕೋರರು ಅಲ್ಲಿಂದ ಜಿರೋ ಪಾಸ್ ಮೂಲಕ ಹೂವಿನಹಡಗಲಿ ಭಾಗಕ್ಕೆ ಮರಳು ತಂದು ಸ್ಥಳೀಯರಿಗೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳಿಗೆ ಇದೆಲ್ಲಾ ತಿಳಿದಿದ್ದರೂ ಕ್ರಮ ಜರುಗಿಸಿಲ್ಲ’ ಎಂದು ಸ್ಥಳೀಯರಾದ ವೀರಭದ್ರ, ಬಸವರಾಜ ದೂರಿದ್ದಾರೆ.

ಈ ಮೊದಲು ಪ್ರತಿ ಟನ್ ಮರಳಿಗೆ ₹920 ದರ ಇತ್ತು. ಈಚೆಗೆ ಸರ್ಕಾರ ಮರಳು ದರ ಪರಿಷ್ಕರಿಸಿ ₹1,150 ಕ್ಕೆ ಹೆಚ್ಚಿಸಿದೆ. ಆರು ಚಕ್ರದ ಲಾರಿಗೆ 11.8 ಟನ್ , 10 ಚಕ್ರದ ಲಾರಿಗೆ 18 ಟನ್ ಮರಳು ತುಂಬಲು ಅವಕಾಶವಿದೆ. ಪ್ರತಿ ಲಾರಿಗೆ ₹6 ರಿಂದ ₹8 ಸಾವಿರ ಹೆಚ್ಚುವರಿ ಹಣ ಪಡೆದು ನಿರ್ದಿಷ್ಟ ಮಿತಿಯನ್ನು ಮೀರಿ ಮರಳು ತುಂಬಿ ಸಾಗಿಸಲಾಗುತ್ತದೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇದೆ ಎಂಬುದು ಸ್ಥಳೀಯರ ಆಪಾದನೆ.

ಸದ್ಯ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನದಿಯಲ್ಲಿ ಮರಳು ಎತ್ತಲು ಈಗ ಸಾಧ್ಯವಿಲ್ಲ. ಹೀಗಾಗಿ ದಂಧೆಕೋರರು ಸ್ಟಾಕ್ ಯಾರ್ಡ್ ಮೂಲಕವೇ ಮರಳು ದೋಚಿ ಮಹಾನಗರಗಳಿಗೆ ಸಾಗಿಸುತ್ತಿದ್ದಾರೆ.

ಈಚೆಗೆ ಮರಳು ಸಾಗಣೆದಾರರಿಗೆ ಲಂಚದ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶೀಲ್ದಾರ್ ವಿಜಯಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT