ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೂಚನೆ

ಪಠ್ಯ ಪೂರ್ಣಗೊಳಿಸುವುದು ಕಷ್ಟವೆಂದ ಕ್ಷೇತ್ರ ಶಿಕ್ಷಣಾಧಿಕಾರಿ
Last Updated 9 ಮಾರ್ಚ್ 2021, 12:57 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ನೆಪ ಹೇಳಬಾರದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ತಾಕೀತು ಮಾಡಿದರು.

ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿಯ 22ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಫಲಿತಾಂಶ ಬಂದಿಲ್ಲ. ಈ ಸಲವಾದರೂ ಅದು ಸುಧಾರಣೆ ಕಾಣಬೇಕು’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ‘ಈ ವರ್ಷ ಪಠ್ಯ ಪೂರ್ಣಗೊಳಿಸುವುದು ಕಷ್ಟ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಬರುತ್ತೇವೆ ಎಂದು ಭರವಸೆ ಕೊಡುವುದು ಸಹ ಕಷ್ಟ. ಆದರೆ, ಎಲ್ಲ ಶಾಲೆಗಳಲ್ಲಿ ಆದಷ್ಟು ಬೇಗ ಪಠ್ಯ ಪೂರ್ಣಗೊಳಿಸಲು ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಫಲಿತಾಂಶದಲ್ಲಿ ಉತ್ತಮ ಸಾಧನೆಗೆ ಶಿಕ್ಷಕರು ಶ್ರಮಿಸುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುವ ಕುರಿತಂತೆ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಇತ್ತೀಚೆಗೆ ಈ ಸಂಬಂಧ ಎಲ್ಲ ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಶೀಘ್ರದಲ್ಲಿ ವಿದ್ಯಾರ್ಥಿ ವೇತನ ಪಾವತಿಸಲಾಗುವುದು’ ಎಂದು ಭರವಸೆ ನೀಡಿದರು.

ಕಾಡ್ಗಿಚ್ಚು ತಡೆಗೆ ಕ್ರಮ:

ಅರಣ್ಯ ಇಲಾಖೆಯ ಅಧಿಕಾರಿ ರಾಘವೇಂದ್ರ ಮಾತನಾಡಿ. ‘ಇನ್ನೇನು ಬೇಸಿಗೆ ಶುರುವಾಗಿದೆ. ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಬಹುದು. ಪ್ರತಿ ಅರಣ್ಯ ವಲಯಗಳಲ್ಲಿ ಅರಣ್ಯ ಸಂರಕ್ಷಕರನ್ನು ಕಾವಲುಗಾರರಾಗಿ ನೇಮಿಸಲಾಗಿದೆ. ಕಾಡ್ಗಿಚ್ಚಿಗೆ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಬಹುದು. ರಾತ್ರಿ ವೇಳೆ ರೈತರು ಹೊಲಗಳಲ್ಲಿ ಮಲಗಬಾರದು. ಎಚ್ಚರಿಕೆ ವಹಿಸುವಂತೆ ತಿಳಿಸಲಾಗುತ್ತಿದೆ’ ಎಂದು ಹೇಳಿದರು.

ಚಿಲಕನಹಟ್ಟಿ ಗ್ರಾ.ಪಂ ಗ್ರಾಮ ಸೇರಿಸಿ:

‘ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ವ್ಯಾಪ್ತಿಗೆ ತಾಲ್ಲೂಕಿನ ಮರಿಯಮ್ಮನಹಳ್ಳಿ, ವ್ಯಾಸನಕೆರೆ, ವೆಂಕಟಾಪುರ ಸೇರಿದಂತೆ ಸುತ್ತಮುತ್ತಲಿನ 9 ಗ್ರಾಮಗಳನ್ನು ನಗರಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯ್ದೆ ಅನ್ವಯ ಭೂ ಉಪಯೋಗದ ನಕಾಶೆಯನ್ನು ತಯಾರಿಸಿ ಮಾ.30ರ ಒಳಗೆ ಆಕ್ಷೇಪಣೆಗೆ ಪ್ರಕಟಣೆ ಹೊರಡಿ‌ಸಿದೆ. ಆದರೆ, ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಕೈಬಿಟ್ಟಿರುವುದು ಸರಿಯಲ್ಲ’ ಎಂದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌. ರಾಜಪ್ಪ ಅಸಮಾಧಾನ ಹೊರಹಾಕಿದರು.

‘ಚಿಲಕನಹಟ್ಟಿ ‌ಪಂಚಾಯಿತಿ ವ್ಯಾಪ್ತಿಯ ಹಾರುವನಹಳ್ಳಿ, ತಿಮ್ಮಲಾಪುರ, ತಾಳೆಬಸಾಪುರ ಹಾಗೂ ತಾಳೆಬಸಾಪುರ ತಾಂಡಾ ಅನ್ನು ಸೇರಿಸಬೇಕು. ಈ ವಿಷಯ ಹುಡಾ ಅಧ್ಯಕ್ಷರ ಗಮನಕ್ಕೆ ತಂದು ಸರಿಪಡಿಸಬೇಕು’ ಎಂದು ರಾಜಪ್ಪ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT