ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ಣ ಮಾಹಿತಿ; ಅಧಿಕಾರಿಗಳಿಗೆ ತರಾಟೆ

Last Updated 5 ಫೆಬ್ರುವರಿ 2021, 11:24 IST
ಅಕ್ಷರ ಗಾತ್ರ

ಹೊಸಪೇಟೆ: ಶುಕ್ರವಾರ ನಗರದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಭೆಗೆಅಪೂರ್ಣ ಮಾಹಿತಿಯೊಂದಿಗೆ ಬಂದಿದ್ದ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್‌ ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಿದ್ದಂತೆ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ಅವರು ವಿವಿಧ ಗ್ರಾಮಗಳ ಶಾಲಾ ಕಟ್ಟಡ ಕಾಮಗಾರಿ ಕುರಿತು ವರದಿ ಕೇಳಿದರು. ಅದಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಅಪೂರ್ಣ ಮಾಹಿತಿ ನೀಡಿದರು. ಅದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ವಿಶ್ವನಾಥ್‌, ‘ಪ್ರತಿ ಸಭೆಯಲ್ಲಿ ಚರ್ಚೆಯಾಗಬೇಕಾದ ಕಾಮಗಾರಿಗಳ ಪೂರಕ ಮಾಹಿತಿ ಇಲ್ಲದೇ ಬರುತ್ತೀರಿ. ಯಾವುದೇ ಪ್ರಗತಿ ಬಗ್ಗೆ ವಿಚಾರಿಸಿದರೂ ಮಾಹಿತಿ ಅಪೂರ್ಣವಾಗಿರುತ್ತದೆ. ಈ ರೀತಿ ತಯಾರಿ ಇಲ್ಲದೆ ಸಭೆಗೆ ಬಂದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು. ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಖುದ್ದು ಅವರೇ ಮುಂದಿನ ಸಭೆಗೆ ಬರಬೇಕು ಎಂದು ತಾಕೀತು ಮಾಡಿದ ಅವರು, ಆದಷ್ಟು ಶೀಘ್ರ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

‘ಇನ್ನೇನು ಕೆಲವೇ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಆದರೆ, ಇದುವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿಲ್ಲ. ಆದಷ್ಟು ಶೀಘ್ರ ಆ ಪ್ರಕ್ರಿಯೆ ಮುಗಿಸಬೇಕು. ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಪ್ರಮುಖ ಅಧಿಕಾರಿಗಳು ಗೈರು:

ಪ್ರಗತಿ ಪರಿಶೀಲನಾ ಸಭೆಗೆ ಸಾರಿಗೆ ಇಲಾಖೆ, ಜೆಸ್ಕಾಂ, ಲೋಕೋಪಯೋಗಿ, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಪ್ರಮುಖ ಅಧಿಕಾರಿಗಳು ಗೈರಾಗಿ, ಅವರ ಕೆಳಹಂತದ ಅಧಿಕಾರಿಗಳನ್ನು ಸಭೆಗೆ ಕಳಿಸಿಕೊಟ್ಟಿದ್ದಕ್ಕೆ ಅಧ್ಯಕ್ಷೆ ನಾಗವೇಣಿ ಬೇಸರ ವ್ಯಕ್ತಪಡಿಸಿದರು.

‘ತುರ್ತು ಸಂದರ್ಭಗಳಲ್ಲಿ ಮಾತ್ರ ಅಧಿಕಾರಿಗಳು ಸಭೆಗೆ ಗೈರಾಗಬಹುದು. ಆದರೆ, ಪ್ರತಿ ಸಭೆಗೂ ಬರುತ್ತಿಲ್ಲ. ಕೆಳಹಂತದ ಅಧಿಕಾರಿಗಳನ್ನು ಕಳಿಸಿಕೊಟ್ಟರೆ ಅವರಿಗೆ ಪೂರ್ಣ ಮಾಹಿತಿ ಇರುವುದಿಲ್ಲ. ಈ ಚಾಳಿ ಬಿಟ್ಟುಬಿಡಬೇಕು. ಇಲ್ಲವಾದಲ್ಲಿ ಗೈರಾದವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ನಾಗವೇಣಿ ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಮಲೇರಿಯಾ, ಡೆಂಗಿ ಪ್ರಕರಣಗಳ ಕುರಿತಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕು. ಈಗಾಗಲೇ ಡೆಂಗಿಯಾದವರಿಗೆ ಉತ್ತಮ ಚಿಕಿತ್ಸೆ ಕೊಡಬೇಕು’ ಎಂದು ತಿಳಿಸಿದರು.

‘ಪೋಲಿಯೊ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಲಾಗಿದೆ’ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮಾಹಿತಿ ನೀಡಿದರು.

‘ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡದಂತೆ ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇಒ ವಿಶ್ವನಾಥ್‌ ಸೂಚಿಸಿದರು.ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT