ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕೋರ್‌ ಜೋನ್‌ಗಿಲ್ಲ ಕಿಮ್ಮತ್ತು

ಸ್ಮಾರಕಗಳ ಪರಿಸರದಲ್ಲಿ ಹೆಚ್ಚಿದ ವಾಣಿಜ್ಯ ಚಟುವಟಿಕೆ; ಕಣ್ಮುಚ್ಚಿ ಕುಳಿತ ಎ.ಎಸ್‌.ಐ.
Last Updated 24 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯ ಕೋರ್‌ ಜೋನ್‌ನಲ್ಲಿ ನಿರಾತಂಕವಾಗಿ ಲೇಔಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಾಗಲಿ (ಎ.ಎಸ್‌.ಐ.), ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವಾಗಲಿ ಅದನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ.

ಹಂಪಿ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ನಂತರ ಹಂಪಿ ಸುತ್ತಮುತ್ತಲಿನ ಪ್ರದೇಶವನ್ನು ನಾಲ್ಕು ವಲಯಗಳಲ್ಲಿ ವಿಂಗಡಿಸಲಾಗಿದೆ. ಹೆರಿಟೇಜ್‌ ಜೋನ್‌, ಕೋರ್‌ ಜೋನ್‌, ಬಫರ್‌ ಜೋನ್‌ ಹಾಗೂ ಪೆರಿಫೆರಲ್‌ ಜೋನ್‌ ಅದರಲ್ಲಿ ಸೇರಿವೆ.

ಇತ್ತೀಚಿನ ಕೆಲವು ವರ್ಷಗಳಿಂದ ಬಫರ್‌ ಜೋನ್‌ನಲ್ಲಿ ನಿರಾತಂಕವಾಗಿ ಹೋಟೆಲ್‌, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ನಿಯಮ ಉಲ್ಲಂಘಿಸಲಾಗಿದೆ. ತಾಲ್ಲೂಕಿನ ಹಳ್ಳಿಕೆರೆ, ಕಮಲಾಪುರ ಹಾಗೂ ಸೀತಾರಾಮ್‌ ತಾಂಡಾಗಳಲ್ಲಿ ಅದನ್ನು ನೋಡಬಹುದು. ಆದರೆ, ಹಂಪಿಯ ಅಪರೂಪದ ಸ್ಮಾರಕಗಳಿಗೆ ಹೊಂದಿಕೊಂಡಂತೆ ಇರುವ ಕೋರ್‌ ಜೋನ್‌ನಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು ನಡೆದಿರಲಿಲ್ಲ. ಈಗ ಅದರ ಮೇಲೂ ಕೆಲವರ ಕೆಂಗಣ್ಣು ಬೀರಿದ್ದು, ಲೇಔಟ್‌ಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

‘ಹಂಪಿಗೆ ಸಂಪರ್ಕ ಕಲ್ಪಿಸುವ ಕಡ್ಡಿರಾಂಪುರ ರಸ್ತೆಯ ಬದಿಯಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಅಡೆತಡೆಯಿಲ್ಲದೆ ಲೇಔಟ್‌ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕೆಲವರು ಇದೇ ಪ್ರದೇಶದಲ್ಲಿ ಹೋಟೆಲ್‌ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ರಾಜಕಾರಣಿಗಳು, ಪ್ರಭಾವಿಗಳು ಇದರಲ್ಲಿ ಶಾಮಿಲಾಗಿರುವುದರಿಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ಆರೋಪಿಸಿದರು.

‘ಹಂಪಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ನಂತರ ದೇಶ–ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸಹಜವಾಗಿಯೇ ಹೋಟೆಲ್‌ ಉದ್ಯಮ ಬೆಳೆಯುತ್ತಿದೆ. ಈಗಾಗಲೇ ಬಫರ್‌ ಜೋನ್‌ನಲ್ಲಿ ನಿಯಮ ಉಲ್ಲಂಘಿಸಿ, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈಗ ಕೋರ್‌ ಜೋನ್‌ ಮೇಲೆ ಕಣ್ಣು ಬಿದ್ದಿದೆ. ಇದರಲ್ಲಿ ಪ್ರಭಾವಿಗಳ ಹಿತಾಸಕ್ತಿ ಅಡಗಿದೆ’ ಎಂದು ಹೇಳಿದರು.

‘ಎರಡ್ಮೂರು ವರ್ಷಗಳ ಹಿಂದೆ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಕಮಲಾಪುರ ಕೆರೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಿಸಲು ಹುನ್ನಾರ ನಡೆಸಲಾಗಿತ್ತು. ರಾತ್ರಿ ವೇಳೆ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಮಾಡಿದ ನಂತರ ಯುನೆಸ್ಕೊ, ಎ.ಎಸ್‌.ಐ.ಗೆ ಛೀಮಾರಿ ಹಾಕಿ, ರಸ್ತೆ ನಿರ್ಮಾಣ ತಡೆದಿತ್ತು. ಮುಂದೆ ಈ ರೀತಿಯ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿತ್ತು. ಹೀಗಿದ್ದರೂ ಅಧಿಕಾರಿಗಳು ಮೈಮರೆತು ಕುಳಿತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT