ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮನ ಭಕ್ತಿಗೆ ವಶವಾದ ಭಕ್ತರು, ದಾಖಲೆ ಸಂಖ್ಯೆಯಲ್ಲಿ ಹನುಮ ಮಾಲಾ ಧಾರಣೆ

ಸಂಪೂರ್ಣ ಕೇಸರೀಕರಣಗೊಂಡ ನಗರ
Last Updated 18 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಹನುಮನ ಜನ್ಮಸ್ಥಳವೆಂದೇ ಪ್ರತೀತಿ ಪಡೆದಿರುವ ತಾಲ್ಲೂಕಿನ ಹಂಪಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಸಂಭ್ರಮ ಮನೆ ಮಾಡಿದೆ.

ಅಲ್ಲಿನ ಸಂಭ್ರಮ ಬೇರೆ ಕಡೆಯೂ ವ್ಯಾಪಿಸಿದೆ. ನಗರ ಹಾಗೂ ತಾಲ್ಲೂಕಿನ ಕಮಲಾಪುರ ಪಟ್ಟಣ ಸಂಪೂರ್ಣ ಕೇಸರೀಕರಣಗೊಂಡಿರುವುದೇ ಅದಕ್ಕೆ ಸಾಕ್ಷಿ. ಎಲ್ಲ ಕಟ್ಟಡ, ವಾಹನಗಳ ಮೇಲೆ ಹನುಮನ ಚಿತ್ರವಿರುವ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಎಲ್ಲೆಡೆ ಕೇಸರಿ ವಸ್ತ್ರ ತೊಟ್ಟ ಹನುಮ ಮಾಲಾಧಾರಿಗಳು ಕಂಡು ಬರುತ್ತಿದ್ದಾರೆ. ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಭಕ್ತರು ಹನುಮ ಮಾಲೆ ಧರಿಸಿ ವ್ರತ ಕೈಗೊಂಡಿರುವುದು ಸಂಭ್ರಮ ಇಮ್ಮಡಿಗೊಳಿಸಿದೆ.

ಏಳು ವರ್ಷಗಳ ಹಿಂದೆ ಆರಂಭಗೊಂಡ ಹನುಮ ಮಾಲಾ ವ್ರತಾಚರಣೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗಷ್ಟೇ ಸೀಮಿತವಾಗಿತ್ತು. ಈಗ ಅದರ ಹರವು ವಿಸ್ತಾರಗೊಂಡಿದೆ. ರಾಜ್ಯದ ವಿವಿಧ ಕಡೆಗಳಿಂದ ಜನ ಅಂಜನಾದ್ರಿಗೆ ಬಂದು ಮಾಲೆ ಧರಿಸುತ್ತಿದ್ದಾರೆ.

ಪ್ರಸಕ್ತ ವರ್ಷ ರಾಜ್ಯದಲ್ಲಿ 32,000 ಜನ ಹನುಮ ಮಾಲೆ ಧರಿಸಿದ್ದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ಭಕ್ತರ ಸಂಖ್ಯೆ 20,000 ಇದೆ. ಜಿಲ್ಲೆಯಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 8,000 ಜನ ಮಾಲಾಧಾರಿಗಳಾಗಿ ವ್ರತ ಆಚರಿಸುತ್ತಿದ್ದಾರೆ. ಒಂದು, ಐದು, 11, 21 ಹಾಗೂ 45 ದಿನದ ವ್ರತ ಕೈಗೊಳ್ಳುವ ಆಯ್ಕೆ ಭಕ್ತರಿಗೆ ನೀಡಲಾಗಿದೆ.

ವ್ರತಾಚರಣೆ ಸಂದರ್ಭದಲ್ಲಿ ಮಾಲಾಧಾರಿಗಳು ತಾಮಸ ಆಹಾರ ಸೇವಿಸುವುದಿಲ್ಲ. ಮಾಂಸಾಹಾರ ತಿನ್ನುವುದಿಲ್ಲ. ಸುರ್ಯೋದಯ ಹಾಗೂ ಸುರ್ಯಾಸ್ತಕ್ಕೂ ಮುನ್ನ ಸ್ನಾನ ಮಾಡಿ, ಕೇಸರಿ ವಸ್ತ್ರ ಧರಿಸುತ್ತಾರೆ. ನಂತರ ತುಳಸಿ ಮಣಿ ಧರಿಸಿ ಪೂಜೆ ನೆರವೇರಿಸುತ್ತಾರೆ. ಚಾಪೆ ಮೇಲೆ ಮಲಗುತ್ತಾರೆ. ವ್ರತ ಕೈಗೊಂಡಷ್ಟು ದಿನ ಸರಳ ಜೀವನ ನಡೆಸುತ್ತಾರೆ. ರಾಮ ಹಾಗೂ ಹನುಮನ ಸ್ತುತಿ ಮಾಡುತ್ತಾರೆ. ಒಳ್ಳೆಯ ವಿಚಾರಗಳನ್ನು ಕೇಳುವುದರ ಜತೆಗೆ ಒಳ್ಳೆಯ ವಿಷಯಗಳನ್ನೇ ಮಾತನಾಡುತ್ತ, ಬಾಯಿ ಶುದ್ಧವಾಗಿ ಇಟ್ಟುಕೊಳ್ಳುತ್ತಾರೆ. ವ್ರತ ಮುಗಿಸಿದ ನಂತರ ಎಲ್ಲ ಮಾಲಾಧಾರಿಗಳು ಡಿ. 21ರಂದು ಅಂಜನಾದ್ರಿಗೆ ತೆರಳಿ, ಸಾಮೂಹಿಕವಾಗಿ ಮಾಲೆಯನ್ನು ವಿಸರ್ಜಿಸುತ್ತಾರೆ.

‘ಹನುಮ ಹುಟ್ಟಿದ ಸ್ಥಳ ಹಾಗೂ ಆಂಜನೇಯನ ಮಹಿಮೆ ಜನರಿಗೆ ಈಗ ಅರ್ಥವಾಗುತ್ತಿದೆ. ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಹನುಮ ಮಾಲಾ ನಿರ್ವಹಣೆ ಸಮಿತಿ ಸಂಘಟನಾ ಪ್ರಮುಖರಲ್ಲಿ ಒಬ್ಬರಾಗಿರುವ ಅನಿಲ್‌ ಜೋಷಿ.

‘ಏಳು ವರ್ಷಗಳ ಹಿಂದೆ ಹನುಮ ಮಾಲಾ ಆರಂಭವಾದಾಗ 1,400 ಜನರಷ್ಟೇ ಮಾಲೆ ಧರಿಸಿದ್ದರು. ಹೋದ ವರ್ಷ ರಾಜ್ಯದಾದ್ಯಂತ ಸುಮಾರು 20,000ಕ್ಕೂ ಅಧಿಕ ಜನ ವ್ರತ ಕೈಗೊಂಡಿದ್ದರು. ಈ ವರ್ಷ ಆ ಸಂಖ್ಯೆ 32,000ಕ್ಕೆ ಏರಿದೆ. ರಾಜ್ಯವಷ್ಟೇ ಅಲ್ಲ, ನೆರೆಯ ತೆಲಂಗಾಣ, ಆಂಧ್ರದಿಂದ ಜನ ಬರುತ್ತಿದ್ದಾರೆ’ ಎಂದು ಹೇಳಿದರು.

‘ಅಂಜನಾದ್ರಿ ಬೆಟ್ಟ ಹನುಮನ ಜನ್ಮಸ್ಥಳವೊಂದೆ ಅಲ್ಲ. ರಾಮ–ಆಂಜನೇಯ ಸಮಾಗಮ ಆಗಿರುವ ಸ್ಥಳ. ಚಾತುರ್ಮಾಸದಲ್ಲಿ ರಾಮ ನಾಲ್ಕು ತಿಂಗಳು ಅಲ್ಲಿಯೇ ಇದ್ದ. ಅಂಜನಾದ್ರಿ ಬೆಟ್ಟ, ಋಷ್ಯಶೃಂಗ ಪರ್ವತ, ಋಷಿಮುಖ ಪರ್ವತ, ಮಾತಂಗ ಪರ್ವತ, ಪಂಪಾ ಸರೋವರಕ್ಕೆ ಶ್ರೀರಾಮ ಭೇಟಿ ಕೊಟ್ಟಿರುವ ಕುರುಹುಗಳಿವೆ. ವೇದಗಳಲ್ಲಿ ಈ ಕುರಿತು ಉಲ್ಲೇಖವಿದೆ’ ಎಂದು ಮಾಹಿತಿ ನೀಡಿದರು.

‘ಜಾತಿ, ಮತ, ಪಂಥವಿಲ್ಲದೆ ಯಾರು ಬೇಕಾದರೂ ಮಾಲೆ ಧರಿಸಬಹುದು. ಇದು ಸಾಮರಸ್ಯದ ಪ್ರತೀಕ. ಹೀಗಾಗಿಯೇ ಎಲ್ಲ ಮತದ ಸ್ವಾಮೀಜಿಗಳು ಬೆಂಬಲಿಸುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಕೇಸರಿ ಧರ್ಮ ಧ್ವಜಗಳನ್ನು ಭಕ್ತರು ಕಟ್ಟಡ, ವಾಹನಗಳ ಮೇಲೆ ಕಟ್ಟಿದ್ದಾರೆ. ಈ ಹಿಂದೆ ದೇವಾನುದೇವತೆಗಳು ರಥದ ಮೇಲ್ಭಾಗದಲ್ಲಿ ಹನುಮನ ಚಿತ್ರವಿರುವ ಕೇಸರಿ ಧ್ವಜ ಕಟ್ಟಿಕೊಳ್ಳುತ್ತಿದ್ದರು’ ಎಂದು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT