ಭಾನುವಾರ, ಜೂನ್ 20, 2021
20 °C
150 ಅಡಿ ಎತ್ತರದಲ್ಲಿ‌ ಹಾರಾಡಿದ ತಿರಂಗಾ

2021ರಲ್ಲಿ ವಿಜಯನಗರ ಜಿಲ್ಲೆ ಖಚಿತ: ಸಚಿವ ಆನಂದ್ ಸಿಂಗ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ರೋಟರಿ ವೃತ್ತ ದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ 150  ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.

ಬೆಳಿಗ್ಗೆ 6.15ಕ್ಕೆ ಅರಣ್ಯ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಇದಕ್ಕೂ ಮುನ್ನ ಅವರು ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಗೌರವ ಸಲ್ಲಿಸಿದರು.

ತುಂತುರು ಮಳೆಯ ನಡುವೆಯೇ ಬೆಳಗಿನ ಜಾವ 5.30ಕ್ಕೆ ಅಪಾರ ಜನ ಸೇರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವರು, 'ವಿಜಯನಗರ ಕ್ಷೇತ್ರ ಇಂದು ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದೆ. 2021ರಲ್ಲಿ ವಿಜಯನಗರ ಜಿಲ್ಲೆ ಆಗುವುದು ಖಚಿತ. ಅದರೊಂದಿಗೆ ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಆ ಸಂದರ್ಭದ ಸವಿನೆನಪಿನಲ್ಲಿ ನಗರದ ಮುನ್ಸಿಪಲ್ ಮೈದಾನದಲ್ಲಿ ದೇಶದಲ್ಲೇ ಅತಿ ಎತ್ತರದ ರಾಷ್ಟ್ರ ಧ್ವಜ ಹಾರಿಸಲಾಗುವುದು' ಎಂದು ಭರವಸೆ ವ್ಯಕ್ತಪಡಿಸಿದರು.

ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ದೇಶಕ್ಕಾಗಿ ಪ್ರಾಣ ಕೊಟ್ಟಿರುವ ಸ್ವಾತಂತ್ರ್ಯ ಸೇನಾನಿ ಗಳ ಬಗ್ಗೆ ನಮ್ಮ ಹೊಸ ಪೀಳಿಗೆಗೆ ತಿಳಿಸಿ ಅವರಲ್ಲಿ ಪ್ರೇರಣೆ ತುಂಬಬೇಕು ಎಂದು ಹೇಳಿದರು.

ಆನಂದ್ ಸಿಂಗ್ ಅವರು ಸ್ವಂತ ₹50ಲಕ್ಷ ಭರಿಸಿ ಧ್ವಜ ಸ್ತಂಭ ನಿರ್ಮಿಸಿದ್ದಾರೆ. ಈ ವೃತ್ತದಲ್ಲಿ ವಿವಿಧ ಸಮುದಾಯದವರು ಅವರ ಧಾರ್ಮಿಕ ಮುಖಂಡರ ಪುತ್ಥಳಿ ಸ್ಥಾಪಿಸಲು ತೆರೆ ಮರೆಯಲ್ಲಿ ಪ್ರಯತ್ನಿಸುತ್ತಿದ್ದರು. ಈಗ ಅದಕ್ಕೆ‌ ತೆರೆ ಬಿದ್ದಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ತಹಶೀಲ್ದಾರ್ ಎಚ್. ವಿಶ್ವನಾಥ್, ನಗರಸಭೆ ಪೌರಾಯುಕ್ತೆ‌ಪಿ. ಜಯಲಕ್ಷ್ಮಿ, ಡಿವೈಎಸ್ಪಿ ವಿ.ರಘುಕುಮಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು