ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಕಾಲೊನಿಯಲ್ಲಿ ಸೌಕರ್ಯ ಮರೀಚಿಕೆ

Last Updated 9 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಹೊರವಲಯದ ಆಶ್ರಯ ಕಾಲೊನಿಯಲ್ಲಿ ಮೂಲಸೌಕರ್ಯ ಸಂಪೂರ್ಣ ಮರೀಚಿಕೆಯಾಗಿದೆ.

ಕನಿಷ್ಠ ಸವಲತ್ತುಗಳಿಲ್ಲದೆ ಜನ ಬದುಕು ಸಾಗಿಸುತ್ತಿದ್ದಾರೆ. ಅಲ್ಲಿ ಜನ ಜೀವನ ನಡೆಸುತ್ತಿರುವುದು ನೋಡಿದರೆ, ಅವರು ನಿಜವಾಗಲೂ ನಾಗರಿಕ ಸಮಾಜದ ಭಾಗವಾಗಿದ್ದಾರೋ ಅಥವಾ ಇಲ್ಲವೋ ಎಂಬ ಅನುಮಾನ ಎಂತಹವರಿಗೂ ಕಾಡದೇ ಇರದು.

ಕಾಲೊನಿಯಲ್ಲಿ ಸುಡುಗಾಡ ಸಿದ್ಧರು, ಚೆನ್ನದಾಸರು, ಬುಡ್ಗ ಜಂಗಮರು, ಶಿಳ್ಳೆಕ್ಯಾತರು, ಸಿಂಧೋಳದಂತಹ ಸಣ್ಣ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವರಿಗೆ ಆಶ್ರಯ ಮನೆಗಳು ಸಿಕ್ಕರೆ, ಇನ್ನು ಕೆಲವರು ಟೆಂಟ್‌ಗಳಲ್ಲೇ ಜೀವನ ದೂಡುತ್ತಿದ್ದಾರೆ. ಅವರು ವಾಸಿಸುವ ಪ್ರದೇಶದಿಂದ ಹೊರವರ್ತುಲ ರಸ್ತೆ ಹಾದು ಹೋಗಿದ್ದು, ತಾಲ್ಲೂಕು ಹಾಗೂ ಸಂಡೂರು ಸುತ್ತಮುತ್ತಲಿನ ಗಣಿ ಪ್ರದೇಶಗಳಿಂದ ಲಾರಿಗಳು ಅದಿರು ಸಾಗಿಸುತ್ತವೆ. ನಿತ್ಯ ನೂರಾರು ಲಾರಿಗಳು ಸಂಚರಿಸುವುದರಿಂದ ಸದಾ ದೂಳು ಆವರಿಸಿಕೊಂಡಿರುತ್ತದೆ. ದೂಳಿನಿಂದ ಅವರ ಬದುಕು ನರಕವಾಗಿದೆ.

ಕಾಲೊನಿಯಲ್ಲಿ ಚರಂಡಿ, ರಸ್ತೆ, ಬೀದಿ ದೀಪ, ಟೆಂಟ್‌ಗಳಿಗೆ ವಿದ್ಯುತ್‌ ಸಂಪರ್ಕ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಕರ್ಯ ಸೇರಿದಂತೆ ಯಾವ ಸವಲತ್ತುಗಳು ಇಲ್ಲ. ಬಹುತೇಕ ಜನರ ಬಳಿ ಪಡಿತರ ಚೀಟಿ, ಮತದಾರರ ಗುರುತಿನ ಪತ್ರ, ಆಧಾರ್‌ ಕಾರ್ಡ್‌ಗಳಿಲ್ಲ. ಇದರಿಂದಾಗಿ ಸರ್ಕಾರಿ ಸವಲತ್ತುಗಳಿಂದ ಅವರು ವಂಚಿತರಾಗುತ್ತಿದ್ದಾರೆ. ಹೆಚ್ಚಿನವರು ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅವರ ಬದುಕು ಹಸನುಗೊಳಿಸಲು ಏನೂ ಮಾಡಿಲ್ಲ.

‘ಆಶ್ರಯ ಕಾಲೊನಿಯಲ್ಲಿ ಯಾವುದೇ ರೀತಿಯ ಸವಲತ್ತುಗಳಿಲ್ಲ. ಬಳ್ಳಾರಿ ರಸ್ತೆಯಿಂದ ಕಾಲುವೆಯ ವರೆಗೆ ದಾರಿ ಸರಿಯಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದರಿಂದ ಜನ ಬೇರೆಡೆಯಿಂದ ನೀರು ತಂದುಕೊಳ್ಳುತ್ತಾರೆ. ಬೀದಿ ದೀಪಗಳಿಲ್ಲ. ಜನ ಕತ್ತಲಲ್ಲೇ ಬದುಕು ಕಳೆಯುತ್ತಿದ್ದಾರೆ’ ಎನ್ನುತ್ತಾರೆ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ.

‘ಅಪಘಾತಗಳು ಸಂಭವಿಸಿದರೆ, ಹೆರಿಗೆ ನೋವು ಕಾಣಿಸಿಕೊಂಡರೆ ಜನ ಎರಡ್ಮೂರು ಕಿ.ಮೀ. ದೂರದಲ್ಲಿರುವ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಬರಬೇಕು. ತುರ್ತಾಗಿ ಏನಾದರೂ ಘಟಿಸಿದರೆ ಹೊರಜಗತ್ತಿಗೆ ಗೊತ್ತಾಗುವುದೇ ಇಲ್ಲ. ಟೆಂಟ್‌ಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನಗಳನ್ನು ಕೊಡಬೇಕೆಂದು ಹಲವು ಸಲ ಹೋರಾಟ ನಡೆಸಿದ್ದೇವೆ. ಆದರೆ, ಆ ಬೇಡಿಕೆ ಈಡೇರಿಲ್ಲ. ಜನ ಬಿಸಿಲು, ಮಳೆ, ಚಳಿಯಲ್ಲಿ ಟೆಂಟ್‌ನಲ್ಲೇ ಜೀವನ ನಡೆಸುತ್ತಿದ್ದಾರೆ. ಜಿಲ್ಲಾ ಆಡಳಿತ ಈ ಕಡೆಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಜನರ ಬದುಕು ಉತ್ತಮಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT