ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗಳಗಿ ಸೇತುವೆ ಕುಸಿಯುವ ಆತಂಕ

ಮಳೆಗೆ ಕೊಚ್ಚಿಹೋದ ಸಿಮೆಂಟ್‌; ಶಿಥಿಲಗೊಂಡ ಸೇತುವೆಯಲ್ಲಿ ನೀರು ಸಂಗ್ರಹ
Last Updated 14 ಅಕ್ಟೋಬರ್ 2019, 21:49 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಇಂಗಳಗಿ ಗ್ರಾಮದ ಸಂಪರ್ಕ ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಗ್ರಾಮದಿಂದ ಬಳ್ಳಾರಿ–ಅಂಕೋಲ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಸೇತುವೆ ಇದ್ದು, ಸೂಕ್ತ ನಿರ್ವಹಣೆ ಇಲ್ಲದೆ ಅದು ಸಂಪೂರ್ಣ ಹಾಳಾಗಿದೆ.

ಸೇತುವೆ ಮೇಲಿನ ಸಿಮೆಂಟ್‌ ಸಂಪೂರ್ಣ ಕಿತ್ತುಕೊಂಡು ಹೋಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಸ್ವಲ್ಪ ಮಳೆ ಬಂದರೂ ಸೇತುವೆ ತುಂಬೆಲ್ಲ ನೀರು ಆವರಿಸಿಕೊಳ್ಳುತ್ತದೆ. ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗುತ್ತದೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದ್ದು,ಗ್ರಾಮದಿಂದ ಹೆದ್ದಾರಿಗೆ ಮೂರು ಕಿ.ಮೀ. ಅಂತರವಿದೆ. ನಗರ ಸೇರಿದಂತೆ ತೋರಣಗಲ್ಲು, ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗಕ್ಕೆ ಗ್ರಾಮಸ್ಥರು ಇದೇ ಮಾರ್ಗದ ಮೂಲಕ ಓಡಾಡುತ್ತಾರೆ. ಒಂದುವೇಳೆ ಈ ಭಾಗದಲ್ಲಿ ಸಂಪರ್ಕ ಕಡಿತಗೊಂಡರೆ ಗ್ರಾಮಸ್ಥರು ಸುತ್ತು ಬಳಸಿಕೊಂಡು ನಗರಕ್ಕೆ ಬರಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದಲ್ಲದೇ ಆರ್ಥಿಕ ಹೊರೆಯೂ ಬೀಳುತ್ತದೆ.

‘ಗ್ರಾಮದ ಅನೇಕ ಜನ ಜಿಂದಾಲ್‌ ಸೇರಿದಂತೆ ಇತರ ಕಡೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಎಲ್ಲರೂ ಇದೇ ಮಾರ್ಗದ ಮೂಲಕ ನಿತ್ಯ ಓಡಾಡುತ್ತಾರೆ. ಅಷ್ಟೇ ಅಲ್ಲ, ಗದ್ದೆಗಳಿಗೆ ಇದೇ ಸೇತುವೆ ಮೇಲಿನಿಂದ ಹಸು, ಕುರಿಗಳನ್ನು ಮೇಯಿಸಲು ಕರೆದೊಯ್ಯುತ್ತಾರೆ. ಗ್ರಾಮಕ್ಕೆ ಈ ಸೇತುವೆಯೇ ಪ್ರಮುಖ ಕೊಂಡಿಯಾಗಿದೆ. ಅದನ್ನು ನಿರ್ಲಕ್ಷಿಸಿದ ಪರಿಣಾಮ ಕುಸಿದು ಬೀಳುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ನಾಗರಾಜ.

‘ಸೇತುವೆ ಹಾಳಾಗಿರುವುದರ ಕುರಿತು ಈ ಹಿಂದೆ ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಆದರೆ, ಯಾರೊಬ್ಬರೂ ಇದುವರೆಗೆ ಸ್ಪಂದಿಸಿಲ್ಲ. ಸೇತುವೆ ಬಿದ್ದರೆ ಹೊಸ ಸೇತುವೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಈಗಿರುವ ಸೇತುವೆ ದುರಸ್ತಿ ಮಾಡಿದರೆ ಮತ್ತೆ ಅನೇಕ ವರ್ಷ ಬಾಳಿಕೆ ಬರುತ್ತದೆ. ಆರ್ಥಿಕ ಹೊರೆಯೂ ಬೀಳುವುದಿಲ್ಲ’ ಎಂದು ಹೇಳಿದರು.

‘ಗ್ರಾಮಸ್ಥರ ಎರಡು ಪ್ರಮುಖ ಬೇಡಿಕೆಗಳಿವೆ. ಒಂದು ಸೇತುವೆ ದುರಸ್ತಿಗೊಳಿಸುವುದು. ಗ್ರಾಮದ ಕೆರೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಿ, ತುಂಗಭದ್ರಾ ಕಾಲುವೆಯಿಂದ ನೀರು ತುಂಬಿಸುವುದು. ಚುನಾವಣೆ ಸಂದರ್ಭದಲ್ಲಿ ಮುಖಂಡರು ಈ ಎರಡೂ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಅದನ್ನು ಮರೆತು ಹೋಗುತ್ತಾರೆ. ಯಾವ ಮುಖಂಡರ ಮಾತಿನ ಮೇಲೆ ಭರವಸೆ ಉಳಿದಿಲ್ಲ’ ಎಂದು ಗ್ರಾಮದ ಹುಲುಗಪ್ಪ ಅಸಹಾಯಕರಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT