ಭಾನುವಾರ, ಆಗಸ್ಟ್ 25, 2019
24 °C
ಕಳೆ ತೆಗೆಯುವ, ಬಿತ್ತನೆ ಕಾರ್ಯ ಏಕಕಾಲಕ್ಕೆ ಆರಂಭ

ಎತ್ತು, ಕೂಲಿ ಕಾರ್ಮಿಕರ ಕೊರತೆ

Published:
Updated:
Prajavani

ಕೂಡ್ಲಿಗಿ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗದಿಗೆದರಿವೆ. ಬಿತ್ತನೆ ಮಾಡುವುದು, ಫಸಲುಗಳಲ್ಲಿ ಕಳೆ ತೆಗೆಯುವುದು, ಗೊಬ್ಬರ ಹಾಕುವ ಕೆಲಸ ಏಕಕಾಲದಲ್ಲಿ ಆರಂಭವಾಗಿದ್ದು, ಕೂಲಿಕಾರರು ಸಿಗದೇ ರೈತರು ಪರದಾಡುವಂತಾಗಿದೆ.

ಕೂಲಿ ಕಾರ್ಮಿಕರ ಕೊರತೆಯಿಂದ, ಎರಡು ಮೂರು ರೈತ ಕುಟುಂಬಗಳು ಸೇರಿ ಒಬ್ಬರ ಹೊಲದ ಕೆಲಸ ಮುಗಿದ ನಂತರ ಮತ್ತೊಬ್ಬರ ಹೊಲದಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ಕಸಬಾ ಹೋಬಳಿ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಒಂದು ವಾರದಿಂದ ಸಾಕಷ್ಟು ಮಳೆಯಾಗಿದ್ದು, ಶೇಂಗಾ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಹಿಂದಿನ ತಿಂಗಳು ಬಿತ್ತನೆ ಮಾಡಿದ್ದ ಮೆಕ್ಕೆ ಜೋಳ, ಸಜ್ಜೆ, ರಾಗಿ, ಮೆಣಸಿನಕಾಯಿ ಗಿಡ ಸೇರಿದಂತೆ ಕೆಲವು ಬೆಳೆಗಳಲ್ಲಿ ಎಡೆ ಹೊಡೆಯುವ ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಬೇಡಿಕೆಯೂ ಹೆಚ್ಚಾಗಿದೆ. ಕಾರ್ಮಿಕರು ಸಹಜವಾಗಿಯೇ ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ.

ಬೀಜ, ಗೊಬ್ಬರ, ಬೇಸಾಯ, ಕೂಲಿಗಾಗಿ ಸಾವಿರಾರು ರೂಪಾಯಿಗಳನ್ನು ಬಿತ್ತನೆ ಸಮಯಕ್ಕೆ ಹೊಂದಿಸಿಟ್ಟುಕೊಳ್ಳಬೇಕು. ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಕೂಲಿ ಹೆಚ್ಚುತ್ತಿದ್ದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಳೆ ತೆಗೆಯಲು ಮಹಿಳಾ ಕಾರ್ಮಿಕರಿಗೆ ದಿನವೊಂದಕ್ಕೆ ₹120ರಿಂದ ₹160, ಕೂರಿಗೆ, ಕುಂಟೆ, ಎಡೆ ಹೊಡೆಯಲು ₹200 ಕೊಡಬೇಕು. ಜೊತೆಗೆ ಕೆಲವು ಕಡೆ ಊಟ, ಉಪಾಹಾರವನ್ನೂ ಕೊಡಬೇಕು. ಬೆಳಿಗ್ಗೆ 9ಕ್ಕೆ ಬಂದರೆ ಸಂಜೆ 4 ಗಂಟೆಯ ತನಕ ಅವರು ಕೆಲಸ ಮಾಡುತ್ತಾರೆ. ‘ಇಷ್ಟೊಂದು ಕೂಲಿ ಕೊಟ್ಟು ಹೊಲ ಮಾಡುವ ಬದಲು ಕೂಲಿ ಮಾಡುವುದೇ ಉತ್ತಮ ಎನಿಸುತ್ತಿದೆ’ ಎಂದು ಈಚಲಬೊಮ್ಮನಹಳ್ಳಿ ರೈತ ಮಹಿಳೆ ಅಂಜಿನಮ್ಮ ಅಭಿಪ್ರಾಯಪಟ್ಟರು.

ಕೂಡ್ಲಿಗಿ, ಕೊಟ್ಟೂರು ಹೋಬಳಿಗಳಲ್ಲಿ ಜೂನ್ ತಿಂಗಳಲ್ಲಿ ಬಹುತೇಕ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಹೊಸಹಳ್ಳಿ ಹಾಗೂ ಗುಡೇಕೋಟೆ ಹೋಬಳಿಗಳಲ್ಲಿ ಶೇ 80ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡುತ್ತಿದ್ದು, ಇದೀಗ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಕೂಲಿಕಾರರ ಸಮಸ್ಯೆ ನಡುವೆಯೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಎತ್ತುಗಳಿಗೂ ಬೇಡಿಕೆ: ‌ಪೈರಿನಲ್ಲಿ ಎಡೆಕುಂಟೆ ಹೊಡೆಯಲು ಹಾಗೂ ಉಳಿದ ಜಮೀನುಗಳಲ್ಲಿ ಬಿತ್ತನೆ ಮಾಡಲು ಎತ್ತುಗಳ ಸಂಖ್ಯೆ ಕಡಿಮೆ ಇದ್ದು, ಸಕಾಲದಲ್ಲಿ ಸಿಗುತ್ತಿಲ್ಲ. ಅದರಿಂದ ಒಂದು ದಿನದ ಬಿತ್ತನೆಗೆ ಒಂದು ಜೋಡಿ ಎತ್ತು, ಪರಿಕರ, ಕಾರ್ಮಿಕ ಸೇರಿ ₹600 ಇದ್ದ ಬಾಡಿಗೆ ದರ ಏಕಾಏಕಿ ₹1 ಸಾವಿರಕ್ಕೆ ಏರಿದೆ.

‘ಬಾಡಿಗೆ ಎಷ್ಟೇ ಹೆಚ್ಚಾದರೂ, ಕೂಲಿ ಕೊಟ್ಟು ಕಳೆ ತೆಗೆಸುವುದು, ಬಿತ್ತನೆ ಮಾಡಿಸುವ ಕೆಲಸ ಮಾಡಲೇಬೇಕು’ ಎನ್ನುತ್ತಾರೆ ಶಿವಪುರ ಗೊಲ್ಲಹಟ್ಟಿಯ ಬಾಲಪ್ಪ.

Post Comments (+)