ಬಹುಬೆಳೆ ಬೆಳೆದರಷ್ಟೇ ಹೆಚ್ಚು ಲಾಭದಾಯಕ

7
ಬರಪೀಡಿತ ರೈತರಿಗೆ ಯಶಸ್ವಿ ಯುವ ರೈತ ಅಜ್ಜಪ್ಪ ಸಲಹೆ

ಬಹುಬೆಳೆ ಬೆಳೆದರಷ್ಟೇ ಹೆಚ್ಚು ಲಾಭದಾಯಕ

Published:
Updated:
Prajavani

ಬಳ್ಳಾರಿ: ‘ಎಲ್ಲರೂ ಬೆಳೆಯುತ್ತಾರೆ ಎಂದು ಒಂದೇ ಬೆಳೆಯನ್ನು ಇರುವಷ್ಟೂ ಭೂಮಿಯಲ್ಲಿ ಬೆಳೆದರೆ ಮಾರುಕಟ್ಟೆ ಸಿಕ್ಕುವುದಿಲ್ಲ. ಇರುವಷ್ಟು ಭೂಮಿಯಲ್ಲಿ ಭಿನ್ನ ಬೆಳೆಗಳನ್ನು ಸಾಧ್ಯವಾದಷ್ಟೂ ಬೆಳೆಯಬೇಕು. ಗ್ರಾಹಕರ ನಾಡಿಮಿಡಿತ ಅರಿತು ಬೆಳೆಯಬೇಕು. ರೈತ ಮೊದಲು ತನಗಾಗಿ ಬೆಳೆದುಕೊಳ್ಳಬೇಕು. ನಂತರ ಇತರರಿಗಾಗಿ ಬೆಳೆಯಬೇಕು...’

–ಸುಕೋ ಬ್ಯಾಂಕ್‌ ಬೆಳ್ಳಿ ಹಬ್ಬದಲ್ಲಿ ಸುಕೃತ ಕೃಷಿ ಪ್ರಶಸ್ತಿ ಪಡೆದ 34 ವಯಸ್ಸಿನ ಯುವರೈತ, ಬೆಳಗಾವಿಯ ಸುನ್ನಾಳದ ಅಜ್ಜಪ್ಪ ಹನುಮಂತಪ್ಪ ಕುಲಗೋಡ್‌ ಅವರ ಸ್ಪಷ್ಟ ನಿಲುವು ಇದು.

ಐಟಿಐ ಓದಿ ಮೋಟರ್‌ ರಿವೈಂಡಿಂಗ್‌ ಅಂಗಡಿ ಇಟ್ಟಿದ್ದ ಅವರು ರೈತರ ಬವಣೆಗಳನ್ನು ನೋಡಿ ಕೃಷಿ ಕ್ಷೇತ್ರಕ್ಕೆ ಬಂದವರು. ಪ್ರಶಸ್ತಿ ಸ್ವೀಕರಿಸಲು ನಗರಕ್ಕೆ ಶನಿವಾರ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

*ಕೃಷಿ ಕ್ಷೇತ್ರದಲ್ಲಿ ನಿಮ್ಮ ಪ್ರಯೋಗವೇನು?
ನನ್ನ ತಂದೆ–ತಾಯಿಯಂತೆ ನಾನೂ 6.25 ಎಕರೆಯಲ್ಲಿ ತರಕಾರಿಗಳನ್ನೇ ಬೆಳೆಯುತ್ತಿದ್ದೇನೆ. ನನ್ನ ತಂದೆ 16 ಬಗೆಯ ತರಕಾರಿ ಬೆಳೆಯು ತ್ತಿದ್ದರು. ನಾನು 20 ಬಗೆಯ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದೇನೆ.

*ನೀರು ಪೂರೈಕೆ ಹೇಗೆ?
ಜಮೀನಿನಲ್ಲಿ ಒಂದು ಕೊಳವೆಬಾವಿ ಯಿದೆ. ಜಮೀನು ಸುತ್ತ ಬೀಳುವ ಮಳೆ ನೀರೆಲ್ಲವೂ ಜಮೀನಿಗೇ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ.

*ನಿಮ್ಮ ಬಳಿ ಎಷ್ಟು ಕೆಲಸಗಾರರಿದ್ದಾರೆ?
ಯಾರೂ ಇಲ್ಲ. ನನ್ನ ತಂದೆ–ತಾಯಿ, ನಾನು ನನ್ನ ಪತ್ನಿ, ನನ್ನ ಸಹೋದರ ಹಾಗೂ ಅವರ ಪತ್ನಿ ಎಲ್ಲ ಸೇರಿ ತರಕಾರಿ ಬೆಳೆಯುತ್ತೇವೆ.

*ತರಕಾರಿ ಹೇಗೆ ಮಾರಾಟ ಮಾಡುತ್ತೀರಿ?
ನಮ್ಮ ಗ್ರಾಹಕರ ವಾಟ್ಸ್‌ ಆಪ್‌ ಗ್ರೂಪ್‌ ಇದೆ. ಅವರು ತಮಗೆ ಬೇಕಾದ ತರಕಾರಿಗಳ ಪಟ್ಟಿ ಕೊಡುತ್ತಾರೆ. ಅದರಂತೆ ಕಳಿಸುತ್ತೇವೆ. ನಮ್ಮ ಬಳಿ ಇರುವ ತರಕಾರಿ ಪಟ್ಟಿ ಕೊಡುತ್ತೇವೆ. ಬೇಕಾದವರು ಖರೀದಿಸುತ್ತಾರೆ. ಕೆಲವರು ನಮ್ಮ ಬಳಿಗೇ ಬಂದು ಖರೀದಿಸುತ್ತಾರೆ. ಕೆಲವು ಮಾರುಕಟ್ಟೆಗಳಿಗೆ ನಾವೇ ಪೂರೈಸುತ್ತಿದ್ದೇವೆ. ಹುಬ್ಬಳ್ಳಿ, ರಾಮದುರ್ಗ, ಧಾರವಾಡಕ್ಕೆ ತರಕಾರಿ ಮಾರುತ್ತೇವೆ.

*ತರಕಾರಿ ಜೊತೆಗೆ ಏನೇನು ಬೆಳೆಯುತ್ತೀರಿ?
ಹಣ್ಣುಗಳನ್ನು ಬೆಳೆಯುತ್ತೇವೆ. ಅರಿಶಿನ ಬೆಳೆದು ಪುಡಿ ಮಾಡಿ ಮಾರುತ್ತೇವೆ. ಅರಿಶಿನದ ಬದಲು ಕುಂಕುಮ ತಯಾರಿಸಿದರೆ ಹೆಚ್ಚು ಲಾಭವಿರುವುದರಿಂದ ಆ ಕಡೆಗೆ ಗಮನ ಹರಿಸುತ್ತಿದ್ದೇವೆ.

*ಬಹುಬೆಳೆ ಹೇಗೆ ಲಾಭದಾಯಕ?
ಒಂದೇ ಬೆಳೆಯನ್ನು ಎಲ್ಲರೂ ಬೆಳೆದರೆ ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿ ದರ ಕುಸಿಯುತ್ತದೆ. ಬಹುಬೆಳೆ ಬೆಳೆದರೆ ಬೇಡಿಕೆ ಹೆಚ್ಚು. ನಮ್ಮ ಗ್ರಾಹಕರು ಯಾರು? ಅವರಿಗೆ ಏನು ಬೇಕು? ಎಂದೂ ರೈತ ಅರಿಯಬೇಕು. ಅಂಥ ಸಮೀಕ್ಷೆಯನ್ನು ನಾನು ಮಾಡಿಯೇ ತರಕಾರಿ ಬೆಳೆಯುತ್ತಿರುವೆ.

*ನಿಮ್ಮ ಇನ್ನಿತರ ಚಟುವಟಿಕೆಗಳೇನು?
ಪ್ರತಿ ತಿಂಗಳ ಕೊನೇ ಭಾನುವಾರ ಎಲ್ಲ ರೈತರು ಸೇರಿ ಜಿಲ್ಲೆಯ ಯಾರದ್ದಾದರೂ ರೈತರ ಜಮೀನಿಗೆ ಬುತ್ತಿ ಸಮೇತ ಹೋಗಿ ಚರ್ಚಿಸುತ್ತೇವೆ. ಆ ರೈತರಿಗೆ ಏಕೆ ನಷ್ಟವಾಗಿದೆ? ಪರಿಹಾರವೇನು? ಎಂಬುದನ್ನು ಹುಡುಕುತ್ತೇವೆ.

* ಗೋಸಂವರ್ಧನೆ ಕೇಂದ್ರದ ಬಗ್ಗೆ ತಿಳಿಸಿ
ನಮ್ಮ ಗ್ರಾಮದಲ್ಲಿ ದೇಸಿ ಆಕಳ ಸಂತತಿಯನ್ನು ಉಳಿಸಬೇಕು ಎಂದು ಹಿಂದಿನ ವರ್ಷ ನವೆಂಬರ್‌ನಲ್ಲಿ ರಾಮಾಂಜನೇಯ ದೇಸಿ ಗೋ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಿದೆವು. ದಿನವೂ 40 ಲೀಟರ್‌ ದೇಸಿ ಗೋವಿನ ಹಾಲು ಖರೀದಿಸಿ ತುಪ್ಪ, ಹಾಲು, ಮೊಸರು ತಯಾರಿಸಿ ಮಾರುತ್ತಿದ್ದೇವೆ. ದೇಸಿ ಗೋವಿನ ಗಂಜಲವನ್ನೂ ಲೀಟರಿಗೆ ₹ 10 ಮಾರುತ್ತಿದ್ದೇವೆ.

*ಬರಗಾಲವನ್ನು ರೈತರು ಯಶಸ್ವಿಯಾಗಿ ಎದುರಿಸುವುದು ಹೇಗೆ?
ಏಕಬೆಳೆ ಪದ್ಧತಿಯಿಂದ ದೂರ ಬರಬೇಕು. ನೀರಿನ ಸದ್ಬಳಕೆ, ಯಾವ ಕಾಲದಲ್ಲಿ ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬ ತಿಳಿವಳಿಕೆ. ಮಾರುಕಟ್ಟೆಯನ್ನು–ಗ್ರಾಹಕ ರನ್ನು ಗುರುತಿಸುವುದು. ಅವರ ಬೇಡಿಕೆಗೆ ತಕ್ಕಂತೆ ಬೆಳೆಯುವುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !