ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಅಸಮಾನತೆ ತೊಲಗುವುದೇ?

ವಿಭಜನೆಯಿಂದ ಬಳ್ಳಾರಿ ಪೂರ್ವ ಬಡವಾಯ್ತೆ...
Last Updated 28 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ವಿಭಜನೆಯಿಂದಾಗಿ ಬಳ್ಳಾರಿಯು ಬಡವಾಯಿತೇ? ಇಲ್ಲವೇ?, ಬಳ್ಳಾರಿ ಪೂರ್ವಭಾಗವು ನಿಜವಾಗಿಯೂ ಶ್ರೀಮಂತವಾಗಿತ್ತೇ? ಎಂಬ ಚರ್ಚೆಯು ಈಗ ಮುನ್ನೆಲೆಗೆ ಬಂದಿದೆ. ವಿಭಜನೆಯ ಬಳಿಕವೂ ಎರಡೂ ಜಿಲ್ಲೆಗಳ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಯಲ್ಲಿ ಅಸಮಾನತೆ ಮುಂದುವರಿಯುವುದೇ ಎಂಬ ಆತಂಕಿತ ಅನುಮಾನವೂ ಹಲವರಲ್ಲಿ ಮೂಡಿದೆ.

‘ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಭಜನೆಯನ್ನು ಸಮರ್ಥಿಸಿಕೊಳ್ಳುವ ಜನಪ್ರತಿನಿಧಿಗಳು, ಬಳ್ಳಾರಿಯನ್ನು ಒಂದು ಸುಸಜ್ಜಿತ ಜಿಲ್ಲಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವತ್ತ ಅಗತ್ಯವಿರುವಷ್ಟು ಗಮನವನ್ನು ಹರಿಸಲೇ ಇಲ್ಲ’ ಎಂಬ ಅಸಮಾಧಾನವೂ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಮುಖಂಡರಿಂದ ಹೊರಬಿದ್ದಿದೆ.

‘ವಿಭಜನೆಯಿಂದ ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗುತ್ತದೆ ಎಂಬುದು ಸುಳ್ಳು. ಆದರೆ ಪ್ರಾದೇಶಿಕ ಸಂಪನ್ಮೂಲಗಳ ಸಮರ್ಥ ಬಳಕೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಆದರೆ ಆ ಪ್ರಯತ್ನ ಅಖಂಡ ಜಿಲ್ಲೆಯಲ್ಲಿ ನಡೆದಿಲ್ಲ’ ಎಂಬ ದೂರುಗಳೂ ಇವೆ.

‘ಬಳ್ಳಾರಿಯ ಪೂರ್ವಭಾಗ ಅಭಿವೃದ್ಧಿಯಾಗಿದೆ ಎಂಬ ಪಶ್ಚಿಮದವರ ತಿಳಿವಳಿಕೆ ಕೇವಲ ಭ್ರಮೆಯಷ್ಟೇ’ ಎಂಬ ಪ್ರತಿಪಾದನೆಯೂ ಆರಂಭವಾಗಿದೆ.

ಆರಂಭದಿಂದಲೂ ಅಭಿವೃದ್ಧಿಯಲ್ಲಿ ಹಿಂದುಳಿದ ಪಶ್ಚಿಮ ತಾಲ್ಲೂಕುಗಳು ವಿಜಯನಗರ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಅಭಿವೃದ್ಧಿ ಕಾಣಬಲ್ಲವೇ? ಎಂಬ ಪ್ರಶ್ನೆಯೂ ಮೂಡಿದ್ದು,ಆ ಬಗ್ಗೆ ಅಲ್ಲಿನ ಜನ ಆಶಾವಾದಿಗಳಾಗಿರುವುದು ವಿಶೇಷ.

ಅದರೊಂದಿಗೆ ಪಶ್ಚಿಮ ತಾಲ್ಲೂಕುಗಳನ್ನು ಬಳ್ಳಾರಿ ನಾಯಕರು ಬಹಳ ಗಂಭೀರವಾಗಿ ಪರಿಗಣಿಸಿದ್ದೇ ಬಲು ಅಪರೂಪ ಎಂಬ ಆರೋಪಗಳೂ ಪ್ರಕಟವಾಗಿದೆ. ಇವೆಲ್ಲವೂ ಫೇಸ್‌ಬುಕ್‌ ಮತ್ತು ವಾಟ್ಸ್‌ ಅಪ್‌ ಸಾಮಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಗಳನ್ನೂ ಹುಟ್ಟುಹಾಕಿದೆ.

ಬಳ್ಳಾರಿಗೆ ಮೋಸ: ವಿಭಜನೆಯನ್ನು ವಿರೋಧಿಸುವ ಮಂದಿ, ಬಳ್ಳಾರಿಯು ದಶಕಗಳಿಂದ ಹಲವು ಸೌಲಭ್ಯ, ಅವಕಾಶಗಳಿಂದ ವಂಚಿತವಾಗಿತ್ತು ಎಂಬುದರ ಕಡೆಗೂ ಗಮನ ಸೆಳೆಯುತ್ತಿದ್ದಾರೆ.

‘ಬಳ್ಳಾರಿಗೆ ವಿಭಾಗೀಯ ಸ್ಥಾನ ದೊರಕಬೇಕಿತ್ತು. ಆದರೆ ಅದು ಕಲಬುರ್ಗಿಗೆ ದಕ್ಕಿತು. ಗುಂತಕಲ್‌ನಲ್ಲಿರುವ ಬೃಹತ್‌ ರೈಲ್ವೆ ಜಂಕ್ಷನ್‌ ಕೂಡ ಬಳ್ಳಾರಿಗೆ ಸಿಗಬೇಕಿತ್ತು. ಅದೂ ಸಿಗಲಿಲ್ಲ. ಇದೆಲ್ಲ ರಾಜಕೀಯ ಮೇಲಾಟ’ ಎಂದು ನಗರದ ನಿವಾಸಿ ರಾಜಶೇಖರ್‌ ವಿಷಾದಿಸುತ್ತಾರೆ.

‘ಜಿಲ್ಲೆಯ ಅಭಿವೃದ್ಧಿಗೆ ಬಹಳ ಹಿಂದಿನಿಂದ ಸರ್ಕಾರಗಳು ರೂಪಿಸಿದ ಯೋಜನೆಗಳ ಅನುಷ್ಠಾನದ ಬಗ್ಗೆ ವಿಭಜನೆಯರ ಪರ ವಿರುದ್ಧ ಇರುವವರಿಬ್ಬರೂ ಚಿಂತಿಸುತ್ತಿಲ್ಲ. ಇನ್ನು ಅಭಿವೃದ್ಧಿ ಹೇಗೆ ಸಾಧ್ಯ’ ಎಂಬುದು ಲೇಖಕ ಪಿ.ಆರ್‌.ವೆಂಕಟೇಶ್‌ ಅವರ ಪ್ರತಿಪಾದನೆ.

‘ಹರಪನಹಳ್ಳಿ ಅಭಿವೃದ್ಧಿಗೆ ಆಗತ್ಯವಾದ ನೀರಾವರಿ ಯೋಜನೆ, ಬಳ್ಳಾರಿ, ಹಗರಿಬೊಮ್ಮನಹಳ್ಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದಿದೆ. ಹಡಗಲಿಗೆ ಅಗತ್ಯವಿರುವ ಪುಷ್ಪ ಸಂಸ್ಕರಣೆ ಘಟಕ ಇಲ್ಲ. ಕೃಷಿಗೆ ಪೂರಕವಾದ ಕೈಗಾರಿಕೆಗಳಿಲ್ಲ. ಶೇಂಗಾ ಬೆಳೆಗಾರರಿಗೆ ಅನುಕೂಲಕರವಾಗಿದ್ದ ಎಣ್ಣೆ ಘಟಕವೂ ಮಲಗಿದೆ. ಗಂಧದೆಣ್ಣೆ, ಮೆಕ್ಕೆಜೋಳ ಕೈಗಾರಿಕೆ ಘಟಕಗಳ ಸ್ಥಾಪನೆ ಪ್ರಸ್ತಾಪ ಕಣ್ಮರೆಯಾಗಿದೆ’ ಎಂದು ಅವರು ವಿಷಾದಿಸುತ್ತಾರೆ.

‘ಪೂರ್ವದ ಅಭಿವೃದ್ಧಿ ಭ್ರಮೆ’

‘ಜಿಲ್ಲೆಯ ಪೂರ್ವಭಾಗ ಬಹಳ ಅಭಿವೃದ್ಧಿಯಾಗಿದೆ ಎನ್ನುವುದು ದೊಡ್ಡ ಭ್ರಮೆ’ ಎನ್ನುತ್ತಾರೆ ಲೇಖಕಪಿ.ಆರ್‌.ವೆಂಕಟೇಶ್‌.
‘ಬಳ್ಳಾರಿ ನಗರದ ಜೋಡಿ ರಸ್ತೆಗಳನ್ನು ನೋಡಿ ಈ ಭ್ರಮೆಗೆ ಒಳಗಾಗಿರಬೇಕು. ಆದರೆ ಜಿಲ್ಲಾ ಕೇಂದ್ರದ ಕೊಳಚೆ ಪ್ರದೇಶದ ಜೀವನ ನರಕಕ್ಕೆ ಸಮವಾಗಿದೆ. ಈ ಭಾಗದ ಹಳ್ಳಿಗಳು ಸಂಪೂರ್ಣ ಹಿಂದುಳಿದಿವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸಾಂಸ್ಕೃತಿಕ ವಿಭಜನೆ ಸಾಧ್ಯವೇ?

ವಿಭಜನೆಯ ಅಭಿವೃದ್ಧಿ ಆಯಾಮದ ಕುರಿತು ಬಹಳ ಮಂದಿ ಚರ್ಚೆ ನಡೆಸುತ್ತಿದ್ದರೆ, ಕೆಲವರು ಮಾತ್ರ ಅದರ ಸಾಂಸ್ಕೃತಿಕ ಆಯಾಮದ ಕಡೆಗೂ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

‘ಇರುವ ಎರಡು ಕಣ್ಣು, ಕಿವಿ, ಕೈ,ಕಾಲುಗಳು ಬೇರೆಯಾಗಿಯೂ ಸಹಜವಾಗಿ ವರ್ತಿಸಬಲ್ಲವು. ಆದರೆ ಒಂದೇ ಇರುವ ಹೃದಯ!!!?’ ಎಂದು ಕಂಪ್ಲಿ ಮೂಲದ ಲೇಖಕ ಆನಂದ ಋಗ್ವೇದಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಆಡಳಿತಾತ್ಮಕವಾಗಿ ದೊಡ್ಡದಾದ ಜಿಲ್ಲೆಯನ್ನು ವಿಭಜಿಸುವುದು ಸೂಕ್ತ. ಆದರೆ ಸಾಂಸ್ಕೃತಿಕವಾಗಿ!? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು’ ಎಂದಿದ್ದಾರೆ.

***
ವಿಭಾಗೀಯ ಕೇಂದ್ರವಾಗಬೇಕಿದ್ದ ಬಳ್ಳಾರಿ ಈಗ ವಿಭಜನೆಯಾಗಿ ಇನ್ನಷ್ಟು ಬಡವಾಗಿದೆ.

–ರಾಜಶೇಖರ್‌, ಬಳ್ಳಾರಿ

ಕೇಂದ್ರ ಸ್ಥಾನ ಯಾವುದಾದರೂ ಸರಿಯೇ.ವಿಜಯನಗರ ಜಿಲ್ಲೆ ನಮಗೆ ಬೇಕೇಬೇಕು’

ಸುಧಾ ಚಿದಾನಂದಗೌಡ, ಲೇಖಕಿ , ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT