ಶುಕ್ರವಾರ, ನವೆಂಬರ್ 22, 2019
23 °C

ಚಿನ್ಮಯಸಾಗರ ಅಂತ್ಯಕ್ರಿಯೆ; ಹರಿದುಬಂದ ಭಕ್ತ ಸಾಗರ

Published:
Updated:
Prajavani

ಮೋಳೆ: ‘ಜಂಗಲ್‌ವಾಲೆ ಬಾಬಾ’ ಎಂದು ಖ್ಯಾತರಾಗಿದ್ದ ಜೈನ ಮುನಿ ಚಿನ್ಮಯಸಾಗರ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಜುಗೂಳ ಗ್ರಾಮದಲ್ಲಿ ನಡೆಯಿತು. ರಾಜ್ಯದವರೂ ಸೇರಿದಂತೆ ಉತ್ತರ ಭಾರತದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಯಮಸಲ್ಲೇಖನ ವ್ರತ ಕೈಗೊಂಡಿದ್ದ ಚಿನ್ಮಯಸಾಗರ ಅವರು, ಶುಕ್ರವಾರ ಸಂಜೆ ಸಮಾಧಿ ಮರಣ ಹೊಂದಿದ್ದರು. ಗ್ರಾಮದಲ್ಲಿರುವ ಮುನಿಶ್ರೀ ಅವರ ಪೂವಾಶ್ರಮದ ಮನೆ ಸಮೀಪ ಇರುವ ಹೊಲದಲ್ಲಿ ಆಚಾರ್ಯರು, ಮುನಿಶ್ರೀಗಳು, ಭಟ್ಟಾರಕರು ಮತ್ತು ಭಕ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೇರವೇರಿತು. ರಾಜಸ್ಥಾನ ಕೋಟಾದ ವಿನೋದಕುಮಾರ ಜೈನ್‌ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಗ್ರಾಮದಲ್ಲಿ ಮೆರವಣಿಗೆ: ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. 10 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ವಾದ್ಯಗಳೊಂದಿಗೆ, ಆನೆ, ಕುದುರೆಗಳು ಪಾಲ್ಗೊಂಡಿದ್ದವು.

ಗಣ್ಯರ ಅಂತಿಮ ನಮನ: ಮುನಿಶ್ರೀಗಳ ಅಂತಿಮ ಯಾತ್ರೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ದುರ್ಯೋಧನ ಐಹೊಳೆ, ಮುಖಂಡರಾದ ಪ್ರಕಾಶ ಹುಕ್ಕೇರಿ, ರಾಜು ಕಾಗೆ, ಕೆ.ಪಿ.ಮಗೆಣ್ಣವರ, ಕಿರಣಕುಮಾರ ಪಾಟೀಲ, ದೂಧ್‌ಗಂಗಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲ, ರಾಜ್ಯ ಎಂಜಿನಿಯರ್‌ಗಳ ಸಂಘದ ಉಪಾಧ್ಯಕ್ಷ ಅರುಣಕುಮಾರ ಯಲಗುದ್ರಿ, ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)