ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಕಲೆ ಮನ, ಮನೆ ತಲುಪಲಿ

ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೊಲೀಸ್‌ ಪಾಟೀಲ
Last Updated 15 ಮಾರ್ಚ್ 2019, 10:02 IST
ಅಕ್ಷರ ಗಾತ್ರ

ಹೊಸಪೇಟೆ (ಬಸವರಾಜ ಮಲಶೆಟ್ಟಿ ವೇದಿಕೆ): ‘ಜನಪದ ಕಲೆ ನಮ್ಮನೆ ದೀಪ. ಆ ದೀಪ ನಮ್ಮ ಹೃದಯದೊಳಗೆ ಬೆಳಗಿಸಿಕೊಳ್ಳಬೇಕು. ಮನೆಯಿಂದ ಮನೆಗೆ, ಮನದಿಂದ ಮನಕ್ಕೆ ಅದು ಸಂಚರಿಸಬೇಕು. ಆಗ ಕಲಾ ಪ್ರಕಾರಗಳು ಉಳಿಯಲು ಸಾಧ್ಯ’ ಎಂದು ಹಿರಿಯ ಜನಪದ ಕಲಾವಿದ ಪ್ರೊ.ಬಿ.ಆರ್‌. ಪೊಲೀಸ್‌ ಪಾಟೀಲ ಹೇಳಿದರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಕರ್ನಾಟಕ ಕಲಾಭಿಮಾನಿ ಸಂಘದ ಸಹಭಾಗಿತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ 14ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.

‘ಯಕ್ಷಗಾನ ಹೊರತುಪಡಿಸಿದರೆ ಇಂದಿಗೂ ಅನ್ಯ ಕಲೆ, ಕಲಾವಿದರನ್ನು ಸಮಾಜ ಸರಿಯಾಗಿ ಗುರುತಿಸುತ್ತಿಲ್ಲ. ಅದರಲ್ಲೂ ಸುಶಿಕ್ಷಿತರು ಕಲಾ ಪ್ರಕಾರಗಳಿಂದ ವಿಮುಖರಾಗಿದ್ದಾರೆ. ಕಲೆ ಆರಾಧಿಸುವವರು ಇರುವವರೆಗೆ ಕಲೆಗಳು ಜೀವಂತವಾಗಿ ಇರಲು ಸಾಧ್ಯ. ನಮ್ಮ ಬಹುತೇಕ ಕಲೆಗಳು ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡಿವೆ. ಕಾಲಕಾಲಕ್ಕೆ ಅವುಗಳು ಹೊಸ ರೂಪ ಪಡೆದುಕೊಂಡಿವೆ’ ಎಂದರು.

‘ರಂಗಭೂಮಿಯಲ್ಲಿ ಹೊಸ ತಂತ್ರಜ್ಞಾನ ಪ್ರವೇಶ ಮಾಡಿದೆ. ಅದು ಹೊಸ ಹೊಸ ಪ್ರಯೋಗಗಳೊಂದಿಗೆ ಬದಲಾವಣೆಗೆ ಒಳಪಟ್ಟಿದೆ. ಆದರೆ, ಗ್ಯಾಜೆಟ್‌ಗಳಿಂದ ಮಕ್ಕಳು, ಯುವಕರು ನಮ್ಮ ಜಾನಪದ ಕಲೆಗಳಿಂದ ದೂರ ಸರಿಯುತ್ತಿದ್ದಾರೆ. ಕಲೆಗಳ ಬಗ್ಗೆ ಅವರಿಗೆ ಅಭಿರುಚಿ, ತಿಳಿವಳಿಕೆ ಮೂಡಿಸಬೇಕು. ಇಲ್ಲವಾದರೆ ಅವುಗಳು ಮುಂದಿನ ಪೀಳಿಗೆಗೆ ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಯಕ್ಷಗಾನ ಜಗತ್ತಿನಾದ್ಯಂತ ಪಸರಿಸಿದೆ. ಕರಾವಳಿ ಭಾಗದಲ್ಲಿ ವರ್ಷಪೂರ್ತಿ ಪ್ರದರ್ಶನಗಳು ನಡೆಯುತ್ತವೆ. ಬಯಲು ಮತ್ತು ಮನೆಯೊಳಗೂ ಯಕ್ಷಗಾನ ಬೆಳೆದಿದೆ. ಆದರೆ, ಬಯಲಾಟ ಸೇರಿದಂತೆ ಇತರೆ ಕಲಾ ಪ್ರಕಾರಗಳ ಪರಿಸ್ಥಿತಿ ಹಾಗಿಲ್ಲ. ಎಲ್ಲಿ ಕಲೆಯ ಕುರಿತು ಪ್ರೇಕ್ಷಕರಿಗೆ ಒಲವು ಇರುವುದಿಲ್ಲವೋ ಅಲ್ಲಿ ಆ ಕಲೆ ಬೆಳೆಯುವುದಿಲ್ಲ' ಎಂದು ತಿಳಿಸಿದರು.

‘ಶಿವರಾಮ ಕಾರಂತರಂತಹ ದೊಡ್ಡ ಸಾಹಿತಿ ಯಕ್ಷಗಾನಕ್ಕೆ ಹೊಸ ಸ್ವರೂಪ ನೀಡಿದರು. ಹೊರದೇಶಗಳಿಗೂ ಕೊಂಡೊಯ್ದರು. ಅಷ್ಟೇ ಅಲ್ಲ, ಕರಾವಳಿಯ ಅನೇಕ ಜನ ಶ್ರೀಮಂತರು ಯಕ್ಷಗಾನ ಏರ್ಪಡಿಸಲು ನೆರವು ನೀಡುತ್ತಾರೆ. ಆ ಮನಸ್ಸಿನವರು ಉತ್ತರ ಕರ್ನಾಟಕದಲ್ಲಿ ಇಲ್ಲ. ಹೀಗಾಗಿಯೇ ಇಲ್ಲಿ ಕಲೆಗಳು ಸೊರಗುತ್ತಿವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ, ‘ಈ ಹಿಂದೆ ಯಕ್ಷಗಾನ ಒಂದೇ ಕಡೆ ನೆಲೆಸಿತ್ತು. ಈಗ ಅದರ ಹರವು ವಿಸ್ತರಿಸಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಯಕ್ಷಗಾನ ಸೇರಿದಂತೆ ಎಲ್ಲ ಕಲಾ ಪ್ರಕಾರಗಳಿದ್ದವು. ಸಾಮ್ರಾಜ್ಯ ಪತನಗೊಂಡ ನಂತರ ಕಲಾವಿದರು ಚದುರಿ ಹೋದರು. ಅವರ ನಡುವೆ ಪರಸ್ಪರ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ ಎಲ್ಲ ಕಲೆಗಳು ಬೇರೆ ಬೇರೆ ಸ್ವರೂಪದೊಂದಿಗೆ ಬೆಳೆದವು. ಯಕ್ಷಗಾನಕ್ಕೆ ಸಿಕ್ಕಷ್ಟು ಪ್ರೋತ್ಸಾಹ ದೊಡ್ಡಾಟ, ಸಣ್ಣಾಟಗಳಿಗೆ ಸಿಗಲಿಲ್ಲ’ ಎಂದು ಹೇಳಿದರು.

‘ಯಾವುದೇ ಕಲೆ ಬೆಳೆಯಬೇಕಾದರೆ ಜನರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಕರಾವಳಿಯಲ್ಲಿ ಯಕ್ಷಗಾನ ಮನರಂಜನೆಗಷ್ಟೇ ಸೀಮಿತವಾಗಲಿಲ್ಲ. ಅದು ಧಾರ್ಮಿಕ ವಿಧಿ ವಿಧಾನದ ಸ್ವರೂಪ ಪಡೆದಿದೆ. ಅದರ ಮೂಲಕವೇ ದೇವತಾರಾಧನೆ, ಹರಕೆ ತೀರಿಸುತ್ತಾರೆ. ಮೂಡಲಪಾಯ, ಬಯಲಾಟಕ್ಕೂ ಆ ಸಾಧ್ಯತೆಗಳಿವೆ. ಜನ ಮನಸ್ಸು ಮಾಡಬೇಕು’ ಎಂದು ತಿಳಿಸಿದರು.

‘ಕಿರೀಟ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಕರಾವಳಿಯ ಜನ ಯಕ್ಷಗಾನವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಅದರ ಮೇಲೆ ಅಪಾರ ಅಭಿಮಾನ, ಪ್ರೀತಿ ಹೊಂದಿದ್ದಾರೆ. ಆದರೆ, ಉಳಿದ ಕಲೆಗಳ ವಿಷಯದಲ್ಲಿ ಆ ಅಭಿಪ್ರಾಯ ಇಲ್ಲ. ಅಂತಹ ಅಭಿಮಾನ, ಪ್ರೀತಿ ಉಳಿದ ಕಲೆಗಳ ಬಗ್ಗೆಯೂ ಹುಟ್ಟಬೇಕು. ಆಗ ಅವುಗಳು ಬೆಳೆಯಲು ಸಾಧ್ಯ’ ಎಂದರು.

ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಎನ್‌. ಪಂಜಾಜೆ, , ಸಂಘದ ಕಾರ್ಯದರ್ಶಿ ಬಿ.ವಿ. ಭಟ್‌, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ ಕುಂಟಾರ್‌ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು. ನಗರದ ರೋಟರಿ ವೃತ್ತದಿಂದ ಪಂಪ ಕಲಾ ಮಂದಿರದ ವರೆಗೆ ಮೆರವಣಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT