ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌: ಮುಂಗಾರಿನಲ್ಲಿ ಹೆಸರು, ಜೋಳ ಉತ್ತಮ

‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ರೈತರ ಪ್ರಶ್ನೆಗಳಿಗೆ ವಿಜಯನಗರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಉತ್ತರ
Last Updated 19 ಮೇ 2022, 9:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮುಂಗಾರಿನಲ್ಲಿ ಹೆಸರು, ಜೋಳ ಬಿತ್ತನೆ ಮಾಡುವುದು ಬಹಳ ಉತ್ತಮ. ಮೇ ಕೊನೆಯ ವಾರದ ವರೆಗೆ ರೈತರು ಈ ಎರಡನ್ನೂ ಬಿತ್ತನೆ ಮಾಡಬಹುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದರು.

‘ಪ್ರಜಾವಾಣಿ’ಯಿಂದ ಗುರುವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸಿದರು. ಈ ಬಗ್ಗೆ ಹಂಪಾಪಟ್ಟಣದ ಕೇಶವಮೂರ್ತಿ, ಗುಂಡ್ಲವದ್ದಿಗೇರಿಯ ಗೋಪಾಲ, ಧರ್ಮಸಾಗರದ ಪಂಪಾರೆಡ್ಡಿ ಸೇರಿದಂತೆ ಇತರೆ ರೈತರು ಕೇಳಿದ ಪ್ರಶ್ನೆಗೆ ಸಮಾಧಾನದಿಂದ ಉತ್ತರ ನೀಡಿದರು.

ಜೂನ್‌ ಮೊದಲನೇ ವಾರದ ನಂತರದಿಂದ ತಿಂಗಳಾಂತ್ಯದ ವರೆಗೆ ಮುಸುಕಿನ ಜೋಳ, ಜೂನ್‌ 15ರ ನಂತರ ಸಜ್ಜೆ, ರಾಗಿ, ನವಣೆ, ತೊಗರಿ ಬಿತ್ತನೆಗೆ ಮಾಡುವುದು ಸೂಕ್ತವಾದುದು. ಜುಲೈ ಕೊನೆಯಲ್ಲಿ ಶೇಂಗಾ ಬೆಳೆಯಬೇಕು. ಕದ್ರಿ ಲೇಪಾಕ್ಷಿ ತಳಿಯ ಬೀಜದಲ್ಲಿ ವಿಷದ ಪ್ರಮಾಣ ಜಾಸ್ತಿ ಇದೆ. ರೈತರು ಕದ್ರಿ–6, 9 (ಕೆ–6, ಕೆ–9) ಬೀಜಗಳನ್ನು ಉಪಯೋಗಿಸುವುದು ಸೂಕ್ತ. ಇನ್ನು, ಆಗಸ್ಟ್‌ನಲ್ಲಿ ಸೂರ್ಯಕಾಂತಿ ಬಿತ್ತನೆಗೆ ಸಕಾಲ. ಯಾವುದೇ ಕಾರಣಕ್ಕೂ ಮುಂಗಾರಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಬಾರದು ಎಂದು ವಿವರಿಸಿದರು.

ಮೆಕ್ಕೆಜೋಳಕ್ಕೆ ಪರಿಹಾರ ಪಡೆಯದ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಅಗತ್ಯ ವಿವರ ದಾಖಲಿಸಬೇಕು. ರೈತ ಶಕ್ತಿ ಯೋಜನೆಯಡಿ ಒಬ್ಬ ರೈತನಿಗೆ ಒಂದು ಎಕರೆಗೆ ₹250ರಂತೆ ಐದು ಎಕರೆವರೆಗೆ ₹1,250 ಡೀಸೆಲ್‌ ಸಬ್ಸಿಡಿಯನ್ನು ನೇರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವರೆಗೆ ಹೆಣ್ಣು ಮಕ್ಕಳು, ಪಿಯುಸಿ ಮೇಲಿನ ಗಂಡು, ಹೆಣ್ಣು ಮಕ್ಕಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟವಾಗುತ್ತದೆ. ರೈತರು ಬೆಳೆ ವಿಮೆ ಮಾಡಿಸಿಕೊಂಡರೆ ಸೂಕ್ತ. ಸ್ವತಃ ರೈತರೇ ಆ್ಯಪ್‌ನಲ್ಲಿ ಬೆಳೆ ವಿಮೆಯ ವಿವರ ದಾಖಲಿಸುವ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ರೈತರೊಂದಿಗೆ ನಡೆಸಿದ ಕೆಲವು ಪ್ರಶ್ನೋತ್ತರ:

* ಶಿವು, ಹಗರಿಬೊಮ್ಮನಹಳ್ಳಿ: ಮಾರುಕಟ್ಟೆಯಲ್ಲಿ ಸೋನಾ ಕಳಪೆ ಬೀಜ ವಿತರಿಸಲಾಗುತ್ತಿದ್ದು, ಅದರಿಂದ ನಷ್ಟ ಉಂಟಾಗುತ್ತಿದೆ.
–ಒಂದುವೇಳೆ ಕಳಪೆ ಬಿತ್ತನೆ ಬೀಜ ಪೂರೈಕೆಯಾಗಿದ್ದರೆ ಅದನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದ ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.

* ಶರಣಪ್ಪ, ಎಚ್‌.ಬಿ.ಹಳ್ಳಿ: ಕೃಷಿ ಹೊಂಡ ನಿರ್ಮಾಣಕ್ಕೆ ನನ್ನ ಹೆಸರು ಆಯ್ಕೆ ಮಾಡಿ, ರದ್ದುಪಡಿಸಿರುವುದೇಕೆ?
–ಕಳೆದ ವರ್ಷದ ಫಲಾನುಭವಿಗಳ ಪಟ್ಟಿ ಪರಿಷ್ಕರಿಸಿ ಕಳುಹಿಸಿಕೊಟ್ಟಿದ್ದಾರೆ. ಈ ವರ್ಷ ನಿಮಗೆ ಅನುಕೂಲ ಮಾಡಿಕೊಡಲಾಗುವುದು.

* ಶರಣಪ್ಪ, ಕಾನಹೊಸಹಳ್ಳಿ: ನವಿಲುಗಳು ಹೊಲಕ್ಕೆ ಲಗ್ಗೆ ಇಟ್ಟು ಬೆಳೆ ಹಾಳು ಮಾಡುತ್ತಿವೆ. ಇದಕ್ಕೆ ಪರಿಹಾರವೇನು?
–ಶಬ್ದ ಮಾಡುವ ಒಂದು ಗನ್‌ ಇದೆ. ಅದನ್ನು ಬಳಸಿದರೆ ನವಿಲು ಸೇರಿದಂತೆ ಯಾವುದೇ ಪಕ್ಷಿಗಳು ಬರುವುದಿಲ್ಲ. ಕೃಷಿ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ.

* ರಮೇಶ, ಕಾನಹೊಸಹಳ್ಳಿ: ಮಣ್ಣಿನ ಪರೀಕ್ಷೆ ಮಾಡಿಸುವುದು ಹೇಗೆ? ಎಲ್ಲಿ?
–ಕೃಷಿ ಸಂಜೀವಿನಿ ವಾಹನ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಣ್ಣಿನ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ನೀವು ಅಲ್ಲಿ ಸಂಪರ್ಕಿಸಬಹುದು.

* ವಿಶ್ವನಾಥ ಹಿರೇಮಠ, ಹೊಳಗುಂದಿ: ಈಗ ಈರುಳ್ಳಿ ಬೆಳೆಯಬಹುದೇ?
–ಈಗ ಯಾವುದೇ ಕಾರಣಕ್ಕೂ ಈರುಳ್ಳಿ ಹಾಕಬೇಡಿ. ಈ ವರ್ಷ ಮಳೆ ಜಾಸ್ತಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಕೊಳೆರೋಗ ಬರುವ ಸಾಧ್ಯತೆ ಹೆಚ್ಚು.

* ನಿಖಿಲ್‌, ಎಚ್‌.ಬಿ.ಹಳ್ಳಿ: ಗೊಬ್ಬರ ಬೆಲೆ ಬಹಳ ಜಾಸ್ತಿಯಾಗಿದೆ. ಇದಕ್ಕೆ ಪರಿಹಾರವೇನು?
–ಗೊಬ್ಬರ ಬೆಲೆ ಜಾಸ್ತಿ ಆಗಿರುವುದು ನಿಜ. ಆದರೆ, ಸರ್ಕಾರಿ ಸಬ್ಸಿಡಿ ಘೋಷಿಸಿದೆ. ಒಂದುವೇಳೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.

ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ಬಿತ್ತನೆ ಬೀಜದ ದಾಸ್ತಾನು ವಿವರ
ಬೆಳೆ ಹೆಸರು ದಾಸ್ತಾನು (ಕ್ವಿಂಟಾಲ್‌ಗಳಲ್ಲಿ)
ಭತ್ತ 1500
ಜೋಳ 193
ರಾಗಿ 150
ಮೆಕ್ಕೆಜೋಳ 2500
ಸಜ್ಜೆ 123
ತೊಗರಿ 1025
ಉದ್ದು 3
ಹೆಸರು 23
ಅಲಸಂದೆ 5
ನೆಲಗಡಲೆ 1700
ಸೂರ್ಯಕಾಂತಿ 12
ಸೋಯಾ ಅವರೆ 50
ನವಣೆ 25
ಒಟ್ಟು 7309

ವಿಜಯನಗರ ಜಿಲ್ಲೆ ತಾಲ್ಲೂಕುವಾರು ರಸಗೊಬ್ಬರ ದಾಸ್ತಾನಿನ ವಿವರ (ಮೆಟ್ರಿಕ್‌ ಟನ್‌ಗಳಲ್ಲಿ)
ತಾಲ್ಲೂಕು ಯೂರಿಯಾ ಡಿಎಪಿ ಪೊಟಾಷ್‌ ಕಾಂಪ್ಲೆಕ್ಸ್‌ ಎಸ್‌ಎಸ್‌ಪಿ
ಹೊಸಪೇಟೆ 2630.58; 970.15; 41.60; 1769.07; 432
ಕೂಡ್ಲಿಗಿ+ಕೊಟ್ಟೂರು 800.78; 252.79; 25.85; 365.10; 39.30
ಎಚ್‌.ಬಿ.ಹಳ್ಳಿ 603.88; 334; 16.55; 743.93; 16.35
ಹೂವಿನಹಡಗಲಿ 616.45; 200.95; 0.10; 846.83; 30.55
ಹರಪನಹಳ್ಳಿ 1545.22; 692.42; 6.95; 1055.70; 6.80

‘ಲೂಸ್‌ ಬೀಜ ಖರೀದಿಸಬೇಡಿ’:

‘ರೈತರು ಯಾವುದೇ ಕಾರಣಕ್ಕೂ ಲೂಸ್‌ ಬೀಜಗಳನ್ನು ಖರೀದಿಸಬಾರದು. ಎಲ್ಲೇ ಬೀಜ ಖರೀದಿಸಿದರೂ ಅದರ ರಸೀದಿ ಪಡೆದುಕೊಳ್ಳಬೇಕು. ಬಿತ್ತನೆ ಮಾಡಿದ ಬೀಜದ ಪೈಕಿ ಬೆಳೆ ಕೈಸೇರುವವರೆಗೆ ಬೊಗಸೆಯಷ್ಟು ಬೀಜ ಉಳಿಸಿಕೊಳ್ಳಬೇಕು. ಕೆಲವರು ಅನಧಿಕೃತವಾಗಿ ಬ್ರ್ಯಾಂಡೆಡ್‌ ರಸಗೊಬ್ಬರ ಮಾರುತ್ತಿದ್ದಾರೆ. ರೈತರು ಆಮಿಷಕ್ಕೆ ಒಳಗಾಗಿ ಖರೀದಿಸಬಾರದು. ಬೀಜಗಳ ಮೇಲೆ ಲೆಬಲ್‌ ಇದೆಯೋ ಇಲ್ಲವೋ ಗಮನಿಸಿ ಖರೀದಿಸಬೇಕು. ಮನೆ ಬೀಜ ಬಳಸಿದರೆ ಗೋಮೂತ್ರ, ಸಿ.ಸಿ ಬಳಸಿದರೆ ಉತ್ತಮ. ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಸಲಹೆ ಮಾಡಿದರು.
‘ಈಗಾಗಲೇ ಸ್ವಲ್ಪ ಪ್ರಮಾಣದಲ್ಲಿ ಬೀಜ ಬಂದಿದೆ. ಇನ್ನೆರಡು ದಿನಗಳಲ್ಲಿ ಬೀಜ ಬರಲಿದೆ. ರೈತರು ಕೃಷಿ ಸಂಪರ್ಕ ಕೇಂದ್ರಗಳಿಗೆ ತೆರಳಿ ಖರೀದಿಸಬಹುದು’ ಎಂದು ಅಂಬಳಿ ಅಶೋಕ ಅವರ ಪ್ರಶ್ನೆಗೆ ಉತ್ತರಿಸಿದರು.
‘ಐದು ಎಕರೆ ವರೆಗೆ ಬಿತ್ತನೆ ಮಾಡಲು ಕೃಷಿ ಇಲಾಖೆಯಿಂದ ಬೀಜ ವಿತರಿಸಲಾಗುತ್ತದೆ. ಎಸ್ಸಿ/ಎಸ್ಟಿಯವರಿಗೆ ಶೇ 75ರಷ್ಟು, ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ’ ಎಂದು ತೌಡೂರಿನ ರೇವಣಸಿದ್ದಪ್ಪ ಪ್ರಶ್ನೆಗೆ ತಿಳಿಸಿದರು.

‘ರಸಗೊಬ್ಬರಕ್ಕೆ ಸಬ್ಸಿಡಿ ಸೌಲಭ್ಯ’:
‘ರಸಗೊಬ್ಬರಕ್ಕೆ ಕೇಂದ್ರ ಸರ್ಕಾರಿ ಸಬ್ಸಿಡಿ ಘೋಷಿಸಿದೆ. ರೈತರು ಅದರ ಪ್ರಯೋಜನ ಪಡೆಯಬಹುದು. ಈಗಾಗಲೇ ಬಂದರುಗಳಿಗೆ ರಸಗೊಬ್ಬರ ಬಂದಿದೆ. ಪ್ಯಾಕಿಂಗ್‌, ಲೆಬಲ್‌ ಆಗಿ ಬರಬೇಕು. ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿದೆ. ಒಂದೆರಡು ದಿನಗಳಲ್ಲಿ ಜಿಲ್ಲೆಗೆ ಬರುವ ಸಾಧ್ಯತೆ ಇದೆ’ ಎಂದು ಹಡಗಲಿಯ ಸುರೇಶ ತೆಂಗಿನಕಾಯಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ರೈತರ ಅನುಕೂಲಕ್ಕೆ ವಾಟ್ಸ್ಯಾಪ್‌ ಗ್ರುಪ್‌’:
‘ರೈತರ ಅನುಕೂಲಕ್ಕಾಗಿ ಆಯಾ ಗ್ರಾಮ ಪಂಚಾಯಿತಿವಾರು ರೈತರ ವಾಟ್ಸ್ಯಾಪ್‌ ಗ್ರುಪ್‌ ರಚಿಸಲಾಗಿದೆ. ಅದರಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕಾಲಕಾಲಕ್ಕೆ ನೀಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಧರ್ಮಸಾಗರದ ಪಂಪಾರೆಡ್ಡಿ ಅವರ ಪ್ರಶ್ನೆಗೆ ಮಾಹಿತಿ ನೀಡಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನದಲ್ಲಿ ಪರಿಷ್ಕರಣೆ’:
‘ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯನ್ನು ಸರ್ಕಾರ ಸರಳಗೊಳಿಸಿದೆ. ಈ ಯೋಜನೆಯಡಿ ಆಹಾರ ಉತ್ಪನ್ನಗಳ ಎಲ್ಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ರೈತರು ಆಸಕ್ತಿ ತೋರಿಸಿದರೆ ದಾಳಿಂಬೆ, ಸೀಬೆ, ಭತ್ತ ಸಂಸ್ಕರಣೆಗೆ ಅನುಕೂಲ ಮಾಡಿಕೊಡಲಾಗುವುದು. ಈ ಕುರಿತು ಇಷ್ಟರಲ್ಲೇ ನಡೆಯಲಿರುವ ಇನ್ನೊಂದು ಸಭೆಯಲ್ಲಿ ತೀರ್ಮಾನವಾಗಲಿದೆ’ ಎಂದು ಹಗರಿಬೊಮ್ಮನಹಳ್ಳಿಯ ರೈತ ಪತ್ರೇಶ ಹಿರೇಮಠ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ನಿರ್ವಹಣೆ: ಶಶಿಕಾಂತ ಎಸ್‌. ಶೆಂಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT