ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕವೇ ಎಟಿಎಂ: ಡಿ.ವಿ. ಸದಾನಂದಗೌಡ ಲೇವಡಿ

Last Updated 17 ಮಾರ್ಚ್ 2018, 7:25 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕವು ಎಟಿಎಂ; ಪಾಸ್‌ವರ್ಡ್‌ ಹಾಕಿ ಹಾಕಿ ರಾಜ್ಯದ ಖಜಾನೆಯನ್ನೂ ಲೂಟಿ ಮಾಡಲಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಬೂತ್‌ಮಟ್ಟದ ನವಶಕ್ತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಸರ್ಕಾರವು ಬರೀ ರಾಜ್ಯದ ಖಜಾನೆ ಖಾಲಿ ಮಾಡಲಿಲ್ಲ. ಗೂಂಡಾ ರಾಜ್ಯವಾಗಿ ಪರಿವರ್ತಿಸಿತು. ರಿಯಲ್‌ ಎಸ್ಟೇಟ್‌ ದಂಧೆ ಹೆಚ್ಚಾಗಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್‌ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ’ ಎಂದು ಹೇಳಿದರು.

‘ಕುಟುಂಬ ರಾಜಕಾರಣ, ತುಷ್ಟೀಕರಣ ನೀತಿಯಿಂದ ಜನರು ಬೇಸತ್ತು ಬಿಜೆಪಿ ಬೆಂಬಲಿಸಿದ್ದರು. ಈಗ ಕಾಂಗ್ರೆಸ್‌ನ ಮಿತ್ರ ಪಕ್ಷಗಳು ಬದುಕಲು ಒಟ್ಟಾಗುತ್ತಿವೆ. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಿಗೆ ವಿಶ್ವಾಸವಿತ್ತು. ಕಾಲಕ್ರಮೇಣ ಕಾಂಗ್ರೆಸ್‌ ಲೂಟಿ ಹೊಡೆಯುವ ಪಕ್ಷ ಎಂಬುದು ಅರಿವಾಗಿದೆ. ಲೂಟಿಕೋರರಿಗೆ ಇನ್ನು ರಾಷ್ಟ್ರದಲ್ಲಿ ನೆಲೆಯಿಲ್ಲ’ ಎಂದು ಸದಾನಂದಗೌಡ ಎಚ್ಚರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಹೊಸ ರಾಜಕೀಯ ಸೂತ್ರಗಳನ್ನು ಅಳವಡಿಸುತ್ತಿದ್ದಾರೆ. ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿದ್ದು, ಎಚ್ಚರ ತಪ್ಪಿದರೆ ಆಘಾತವಾಗಲಿದೆ; ಮೈಮರೆತು ಕೂರಬಾರದು’ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.

ಕೇಂದ್ರದ ಬಂದರು ಖಾತೆ ರಾಜ್ಯ ಸಚಿವ ಮನ್ಸುಖ್ ಎಲ್. ಮಾಂಡವಿಯಾ ಮಾತನಾಡಿ, ‘ಬಿಜೆಪಿ ಕಾರ್ಯಕರ್ತ ಪಕ್ಷ. ಕಾರ್ಯಕರ್ತರೇ ತಾಕತ್ತು. ಮುಖಂಡರು ಕೇವಲ ಮಾರ್ಗದರ್ಶಕರು. ಬೂತ್‌ ಸಮಿತಿಗಳು ಪ್ರಬಲವಾಗಿದ್ದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯವಾಗಲಿದೆ. ಪ್ರತಿ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಮುಖಂಡರನ್ನು ಉಸ್ತುವಾರಿಗೆ ನಿಯೋಜಿಸಲಾಗಿದೆ. ಅವರು ಮಾರ್ಗದರ್ಶನ ಮಾಡಲಿದ್ದಾರೆ’ ಎಂದು ಹೇಳಿದರು.

‘ಗುಜರಾತ್‌ನಲ್ಲಿ ನಡೆದ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್‌ ಮುಖಂಡರೇ ಸಮೂಹವೇ ಬಂದಿತ್ತು. ನಮ್ಮದು ಕಾರ್ಯಕರ್ತರ ಪಕ್ಷವಾದ ಕಾರಣ ಅವರು ನಮ್ಮನ್ನು ಕೈಬಿಡಲಿಲ್ಲ. ಅಲ್ಲಿ ನಮಗೆ ಸತತ ಗೆಲುವು ಲಭಿಸುತ್ತಿದೆ. ಕರ್ನಾಟಕದಲ್ಲೂ ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದು, ಚುನಾವಣೆ ವೇಳೆ ಎಚ್ಚರವಾಗಿರಬೇಕು. ಸಂಘಟನಾತ್ಮಕವಾಗಿ ಬಳಸಿಕೊಂಡರೆ ರಾಜ್ಯದಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರತಿಗ್ರಾಮದಲ್ಲಿ ಬಿಜೆಪಿಯ 50 ಸಕ್ರಿಯ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಅದರಲ್ಲಿ ಕೆಲವು ಮಂದಿಯಾದರೂ ಪಕ್ಷದ ಸಂಘಟನೆಗೆ ತಮ್ಮ ಕೊಡುಗೆ ನೀಡಲಿದ್ದಾರೆ. ಬೂತ್‌ ಸಮಿತಿ ರಚಿಸಿ, ನಿಗದಿತ ಚರ್ಚೆ ಮಾಡಬೇಕು. ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

‘ನರೇಂದ್ರ ಮೋದಿ ಅವರು 5 ಕೋಟಿ ಕುಟುಂಬಗಳಿಗೆ ಗ್ಯಾಸ್‌ ವಿತರಣೆ ಮಾಡಿದ್ದಾರೆ. 31 ಕೋಟಿ ಜನ್‌ಧನ್‌ ಖಾತೆಗಳನ್ನು ತೆರೆಯಲಾಗಿದೆ. ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಎಲ್ಲ ಯೋಜನೆಗಳು ಬಡವರ ಪರವಾದ ಯೋಜನೆಗಳು. ಈ ಎಲ್ಲ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು’ ಎಂದು ಅವರು ಹೇಳಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ರಾಜ್ಯದಲ್ಲಿ ಕಡೆಯ ಆಟ. ರಾಜ್ಯವನ್ನು ಜಂಗಲ್‌ ರಾಜ್ಯ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ’ ಎಂದು ಹೇಳಿದರು.

ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಇಡೀ ದೇಶವೇ ಕಾಂಗ್ರೆಸ್‌ ಮುಕ್ತವಾಗುವತ್ತ ಹೆಜ್ಜೆ ಹಾಕಿದೆ. ರಾಜ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟವಿದು’ ಎಂದು ಎಚ್ಚರಿಸಿದರು.

‘ಖಾಸಗಿ ಬಸ್‌ ನಿಲ್ದಾಣ, ಮಾರುಕಟ್ಟೆಯ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಆಗಲೇ ಉದ್ಘಾಟನೆಗೆ ಕಾಂಗ್ರೆಸ್‌ ಮುಂದಾಗಿದೆ. ಇದೇ ಅವರ ಇಷ್ಟು ವರ್ಷದ ಸಾಧನೆ. ಈ ಬಾರಿಯ ಚುನಾವಣೆಯಲ್ಲೂ ಕೊಡಗು ಬಿಜೆಪಿ ಭದ್ರಕೋಟೆ ಆಗಿರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್‌, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ನಗರ ಘಟಕದ ಅಧ್ಯಕ್ಷ ಮಹೇಶ್‌ ಜೈನಿ, ಉಸ್ತುವಾರಿ ರಂಜಿತ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಕುಮಾರಪ್ಪ, ಎಂ.ಬಿ. ದೇವಯ್ಯ ಹಾಜರಿದ್ದರು.

ಗುಜರಾತ್‌ನಿಂದ ಬಂದಿತ್ತು ತಂಡ!
ಉದ್ಘಾಟನೆ ಸಮಾರಂಭದ ಬಳಿಕ ಕೇಂದ್ರ ಸಚಿವರಿಬ್ಬರೂ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು ಎಂದು ಗೊತ್ತಾಗಿದೆ. ಎರಡು ಕ್ಷೇತ್ರಗಳಲ್ಲೂ ಯಾವುದೇ ಕಾರಣಕ್ಕೂ ಹಿನ್ನೆಡೆ ಆಗಬಾರದು. ಭಿನ್ನಮತಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.

ಅದಕ್ಕೂ ಮೊದಲು ಮನ್ಸುಖ್‌ ಮಾತನಾಡುವಾಗ, ವಿವಿಧ ಘಟಕಗಳ ಪದಾಧಿಕಾರಿಗಳ ಹಾಜರಿ ತೆಗೆದುಕೊಂಡರು. ಗುಜರಾತ್‌ನಿಂದ ಬಂದಿದ್ದ ತಂಡವು ಸಭೆಯಲ್ಲಿ ಯಾವೆಲ್ಲಾ ಘಟಕದ ಪದಾಧಿಕಾರಿಗಳು ಗೈರಾಗಿದ್ದಾರೆ ಎಂಬ ಮಾಹಿತಿ ಕಲೆಹಾಕಿತು.

*
ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಬರೀ ವಿರೋಧಿ ಶಕ್ತಿಗಳು ರಾಷ್ಟ್ರದಲ್ಲಿ ತುಂಬಿದ್ದವು. ಇದರಿಂದ 70 ವರ್ಷದ ಅಭಿವೃದ್ಧಿ ಶೂನ್ಯವಾಗಿತ್ತು.
–ಮನ್ಸುಖ್ ಎಲ್. ಮಾಂಡವಿಯಾ, ಬಂದರು ಖಾತೆ ರಾಜ್ಯ ಸಚಿವ

*
ರಾಜ್ಯದಲ್ಲಿ ಭ್ರಷ್ಟಾಚಾರ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಸಕ ಹ್ಯಾರೀಸ್‌ ಅವರು ನಮ್ಮ ರಾಜ್ಯದಲ್ಲಿ ದಾವೂದ್ ಇಬ್ರಾಹಿಂ ಒಬ್ಬನನ್ನು ಹುಟ್ಟುಹಾಕಿದ್ದಾರೆ.
–ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT