ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸಿ ತಾಣವಾಗಿ ಜೋಳದರಾಶಿ ಗುಡ್ಡ’

₹14 ಕೋಟಿಯಲ್ಲಿ ಕೃಷ್ಣದೇವರಾಯನ ಪ್ರತಿಮೆ, ವಸ್ತು ಸಂಗ್ರಹಾಲಯ–ಆನಂದ್‌ ಸಿಂಗ್‌
Last Updated 17 ಡಿಸೆಂಬರ್ 2020, 16:39 IST
ಅಕ್ಷರ ಗಾತ್ರ

ಹೊಸಪೇಟೆ: ‘₹24 ಕೋಟಿಯಲ್ಲಿ ಜೋಳದರಾಶಿ ಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿ ಮಾಡಲಾಗುವುದು’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಗುರುವಾರ ಸಂಜೆ ನಗರದ ಜೋಳದರಾಶಿ ಗುಡ್ಡದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಜಿಲ್ಲಾ ಖನಿಜ ನಿಧಿಯಿಂದ ₹10 ಕೋಟಿಯಲ್ಲಿ ಜೋಳದರಾಶಿ ಗುಡ್ಡದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ರಸ್ತೆ, ಬೀದಿದೀಪ, ಚರಂಡಿ, ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಸ್ಥಳ, ಉಪಾಹಾರ ಗೃಹ ನಿರ್ಮಿಸಲಾಗುವುದು. ₹14 ಕೋಟಿಯಲ್ಲಿ 45 ಅಡಿ ಎತ್ತರದ ಕೃಷ್ಣದೇವರಾಯನ ಕಂಚಿನ ಪ್ರತಿಮೆ, ಅದರ ತಳಭಾಗದಲ್ಲಿ 30 ಅಡಿ ಎತ್ತರದ ವಸ್ತು ಸಂಗ್ರಹಾಲಯ ನಿರ್ಮಾಣವಾಗಲಿದೆ. ಕೃಷ್ಣದೇವರಾಯನ ಪ್ರತಿಮೆಯ ಬಿಡಿಭಾಗಗಳ ತಯಾರಿಕೆ ಕೆಲಸ ಚಿತ್ರದುರ್ಗದಲ್ಲಿ ನಡೆದಿದೆ. ಬಳಿಕ ಅದನ್ನು ಉತ್ತರಕ್ಕೆ ಮುಖ ಮಾಡಿ ಪ್ರತಿಷ್ಠಾಪಿಸಲಾಗುತ್ತದೆ’ ಎಂದು ಹೇಳಿದರು.

‘ಈ ಹಿಂದೆ ನಾನು ಪ್ರವಾಸೋದ್ಯಮ ಸಚಿವನಿದ್ದಾಗ ಗುಡ್ಡದ ಅಭಿವೃದ್ಧಿಗೆ ₹4 ಕೋಟಿ ಮಂಜೂರು ಮಾಡಿಸಿದ್ದೆ. ಆದರೆ, ಕಾರಣಾಂತರಗಳಿಂದ ಆ ಹಣದ ಸದುಪಯೋಗ ಆಗಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಗುಡ್ಡವನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಹಿಂದೆ ಕೊಟ್ಟ ಭರವಸೆಯಂತೆ ಅದರ ಅಭಿವೃದ್ಧಿಗೆ ಚಾಲನೆ ಕೊಟ್ಟಿರುವೆ’ ಎಂದು ತಿಳಿಸಿದರು.

‘ಈ ಹಿಂದೆ ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ಕಂಡು ಇಡೀ ವಿಶ್ವ ಬೆರಗಾಗಿತ್ತು. ಈಗ ಮತ್ತೆ ಆ ಕಾಲ ಬರಲಿದೆ. ಈಗಾಗಲೇ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಅಂತಿಮ ಅಧಿಸೂಚನೆ ಹೊರಡಿಸಬೇಕಿದೆ. ಅದಾದ ನಂತರ ನೂತನ ಜಿಲ್ಲೆಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಬರುತ್ತಾರೆ. ₹300 ಕೋಟಿಯಲ್ಲಿ ಹೊಸ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಬರುವ ದಿನಗಳಲ್ಲಿ ನಗರದ ಸಂಪೂರ್ಣ ಚಹರೆ ಬದಲಾಗಲಿದೆ’ ಎಂದರು.

‘ತುಂಗಭದ್ರಾ ಹಿನ್ನೀರಿಗೆ ಹೊಂದಿಕೊಂಡಿರುವ ಗುಂಡಾ ಸಸ್ಯ ಉದ್ಯಾನ ಕೂಡ ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣ ಮಾಡಲಾಗುವುದು. ಅಲ್ಲಿ ಮೋಟಾರ್‌ ಬೋಟಿಂಗ್‌, ಪ್ಯಾರಾ ಗ್ಲೈಡಿಂಗ್‌ ಸೇರಿದಂತೆ ಇತರೆ ಕ್ರೀಡೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉದ್ಯಾನವೂ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಂತೆ ಇರುವುದರಿಂದ ಅಲ್ಲಿ ಕೆಳಮಾರ್ಗ ನಿರ್ಮಿಸುವ ಯೋಚನೆ ಇದೆ. ತಜ್ಞರ ಸಲಹೆ ಮೇರೆಗೆ ಮುಂದುವರೆಯಲಾಗುವುದು’ ಎಂದು ಹೇಳಿದರು.

‘ಜೋಳದರಾಶಿ ಗುಡ್ಡ, ಗುಂಡಾ ಸಸ್ಯ ಉದ್ಯಾನ ಅಭಿವೃದ್ಧಿಗೊಂಡ ನಂತರ ಸಾರ್ವಜನಿಕರು ಅದನ್ನು ತಮ್ಮ ಆಸ್ತಿಯೆಂದು ಭಾವಿಸಿ ನೋಡಬೇಕು. ಅಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು. ವಿಶೇಷವಾಗಿ ಗುಡ್ಡದ ಸುತ್ತ ರಕ್ಷಣಾ ಬೇಲಿ ನಿರ್ಮಿಸಿ, ಭದ್ರತೆ ಒದಗಿಸಲಾಗುವುದು. ಅಲ್ಲದೇ ಶುಲ್ಕ ಕೂಡ ನಿಗದಿಪಡಿಸಲಾಗುವುದು’ ಎಂದರು.

ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಹಾಬ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT