ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಪ್ರಮಾಣ ಅಧಿಕ; ಜಿಂದಾಲ್ ಲಾಕ್‌ಡೌನ್‌ಗೂ ಬದ್ಧ– ಸಚಿವ ಸಿಂಗ್

Last Updated 24 ಜೂನ್ 2020, 10:09 IST
ಅಕ್ಷರ ಗಾತ್ರ

ಬಳ್ಳಾರಿ: 'ಜಿಂದಾಲ್‌ನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಮಿತಿಮೀರಿದರೆ ಇಡೀ ಘಟಕವನ್ನು ಲಾಕ್‌ಡೌನ್‌ ಮಾಡಲೂ ಹಿಂಜರಿಯುವುದಿಲ್ಲ' ಎಂದು ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

'ಜಿಂದಾಲ್‌ನಿಂದಾಗಿಯೇ ಸೋಂಕು ಹೆಚ್ಚಾಗುತ್ತಿದೆ ಎಂಬ ಆರೋಪ ಸಹಜ. ಆದರೆ ಜಿಂದಾಲ್‌ ಬಗ್ಗೆ ನಾನಾಗಲೀ ಸರ್ಕಾರವಾಗಲೀ ಮೃದುಧೋರಣೆ ತಾಳಿಲ್ಲ. ಒಂದು ವೇಳೆ ಸೋಂಕು ಆತಂಕಕಾರಿಯಾಗಿ ಹೆಚ್ಚಿದರೆ ಮುಖ್ಯಮಂತ್ರಿಯ ಗಮನ ಸೆಳೆದು ಜಿಂದಾಲ್ ಅನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು' ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಜಿಂದಾಲ್‌ ಹೊರಗೆ ಸೋಂಕು ಹಬ್ಬುವ ಪ್ರಮಾಣಕ್ಕಿಂತಲೂ, ಜಿಂದಾಲ್‌ ಒಳಗೆ ಸೋಂಕು ಹಬ್ಬುವ ಪ್ರಮಾಣ ಅತಿ ಹೆಚ್ಚಾಗಿದೆ. ಈ ವಿಷಯವನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರೊಂದಿಗಿನ ಸಭೆಯಲ್ಲೂ ಚರ್ಚಿಸಲಾಗಿದೆ. ಅವರು ಸಾಧ್ಯವಾದಷ್ಟೂ ನೌಕರರು ಅಂತರ ಕಾಯ್ದುಕೊಂಡು ಕೆಲಸ ಮಾಡುವಂತೆ ಸೂಚಿಸಲು ತಿಳಿಸಿದ್ದಾರೆ’ ಎಂದರು.

4 ಸಾವಿರ ಕಿಟ್‌: ‘ಶಂಕಿತ ಸೋಂಕಿತರ ಗಂಟಲು ದ್ರವದ ಮಾದರಿಯನ್ನು ಕೇವಲ ಅರ್ಧ ಗಂಟೆಯೊಳಗೆ ತಪಾಸಣೆ ಮಾಡಿ, ವರದಿ ನೀಡಬಲ್ಲ 4 ಸಾವಿರ ರ್‍ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿ ಅಡಿ ಖರೀದಿಸಲು ನಿರ್ಧರಿಸಲಾಗಿದೆ. ಅದರಿಂದ ಸೋಂಕು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲು ಅನುಕೂಲವಾಗುತ್ತದೆ’ ಎಂದರು.

‘ಜಿಂದಾಲ್‌ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರೆಲ್ಲರ ಪಟ್ಟಿಯನ್ನು ವಯಸ್ಸು ಮತ್ತು ಆರೋಗ್ಯ ಸಮಸ್ಯೆವಾರು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡುವಂತೆ ಸೂಚಿಸಲಾಗುವುದು. ಶಂಕಿತ ಸೋಂಕಿತರು ಮತ್ತು ಶಂಕಿತರಲ್ಲದವರನ್ನು ಸುಲಭವಾಗಿ ಅದರಿಂದ ಪತ್ತೆ ಹಚ್ಚಬಹುದು’ ಎಂದರು.

15 ದಿನ: ಕೊರೊನಾ ಪರೀಕ್ಷೆಗೆ ಎರಡು ಯಂತ್ರಗಳನ್ನು ಪೂರೈಸುವುದಾಗಿ ಜಿಂದಾಲ್‌ ಭರವಸೆ ನೀಡಿತ್ತು. ಅದರಂತೆ ಹದಿನೈದು ದಿನದೊಳಗೆ ಯಂತ್ರಗಳನ್ನು ತರಿಸಿಕೊಳ್ಳಲಾಗುವುದು. ಅವುಗಳನ್ನು ಸಿದ್ಧಪಡಿಸಲು ಒಂದು ತಿಂಗಳ ಕಾಲವಕಾಶ ಬೇಕಾಗುವುದು ಎಂದು ವಿಮ್ಸ್‌ ನಿರ್ದೇಶಕರು ತಿಳಿಸಿದ್ದಾರೆ’ ಎಂದರು.

‘ನಗರದಲ್ಲಿರುವ ಟ್ರಮಾ ಕೇರ್‌ ಸೆಂಟರ್‌ ಜುಲೈ 10ರ ಒಳಗೆ ಕಾರ್ಯಾರಂಭ ಮಾಡಲು ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿವೆ. 15ರಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರನ್ನು ಕರೆತಂದು ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಉಪಸ್ಥಿತರಿದ್ದರು.

ಜಿಂದಾಲ್‌ ಸೋಂಕು ಅಂಕಿ ಅಂಶ

1,244 ತಪಾಸಣೆಗೊಳಪಟ್ಟವರು
296 ಸೋಂಕಿತರು
73 ಆಸ್ಪತ್ರೆಯಿಂದ ಬಿಡುಗಡೆ
223 ಚಿಕಿತ್ಸೆ ಪಡೆಯುತ್ತಿರುವವರು
1245 ಸೋಂಕಿತರೊಂದಿಗೆ ಪ್ರಥಮ ಸಂಪರ್ಕ ಹೊಂದಿದವರು
482 ಸೋಂಕಿತರೊಂದಿಗೆ ದ್ವಿತೀಯ ಸಂಪರ್ಕ ಹೊಂದಿದವರು
99 ಕಂಟೈನ್‌ಮೆಂಟ್‌ ಪ್ರದೇಶಗಳು

ಸೋಂಕು: ಎಲ್ಲಿ? ಎಷ್ಟು? :

ತಾಲ್ಲೂಕು ಸೋಂಕಿತರು
ಸಂಡೂರು 210
ಬಳ್ಳಾರಿ 145
ಹೊಸಪೇಟೆ 86
ಎಚ್‌ಬಿಹಳ್ಳಿ 28
ಸಿರುಗುಪ್ಪ 15
ಕೂಡ್ಲಿಗಿ 11
ಹಡಗಲಿ 03
ಹರಪನಹಳ್ಳಿ 02
ಇತರೆ ರಾಜ್ಯ 09


ಸೋಂಕಿತರೊಂದಿಗೆ ಪ್ರಥಮ ಸಂಪರ್ಕ ಹೊಂದಿದವಲ್ಲಿ ಸೋಂಕು

ಜೆಎಸ್‌ಡಬ್ಲ್ಯು ಒಳಗೆ: ಶೇ 15.71
ಜೆಎಸ್‌ಡಬ್ಲ್ಯು ಹೊರಗೆ: ಶೇ 2.40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT