ಜುಡೊ: ಮಲ್ಲಿಗೆ ನಾಡಿನ ಹುಡುಗನ ಚಿನ್ನದ ಸಾಧನೆ

ಭಾನುವಾರ, ಏಪ್ರಿಲ್ 21, 2019
27 °C
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ

ಜುಡೊ: ಮಲ್ಲಿಗೆ ನಾಡಿನ ಹುಡುಗನ ಚಿನ್ನದ ಸಾಧನೆ

Published:
Updated:
Prajavani

ಹೂವಿನಹಡಗಲಿ: ಜಪಾನಿನ ಸಮರ ಕಲೆ ‘ಜುಡೊ’ ಈ ಭಾಗದಲ್ಲಿ ಅಪರಿಚಿತ ಕ್ರೀಡೆ. ತಾಲ್ಲೂಕಿನ ಕ್ರೀಡಾ ಇತಿಹಾಸದಲ್ಲಿ ಜುಡೊ ಕಲಿಕೆಯಲ್ಲಿ ತೊಡಗಿದವರ ಉದಾಹರಣೆಗಳೇ ಇರಲಿಲ್ಲ. ಪಟ್ಟಣದ ವಿದ್ಯಾರ್ಥಿ ರಾಜ್ಯ, ರಾಷ್ಟ್ರ ಮಟ್ಟದ ಜುಡೊ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ, ಬೆಳ್ಳಿಯ ಪದಕಗಳನ್ನು ಮುಡಿಗೇರಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಪಟ್ಟಣದ ವಿಷ್ಣುಪ್ರಿಯ ಬೋರ್‌ವೆಲ್‌ನ ಏಜೆಂಟ್‌ ಎನ್.ಕೋಟೆಪ್ಪ, ಶಾರದಮ್ಮ ದಂಪತಿಯ ಪುತ್ರ ಎನ್.ಮಧುಕುಮಾರ್ 19 ವರ್ಷದೊಳಗಿನ ರಾಜ್ಯ ಮಟ್ಟದ ಜುಡೊ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ ತಾಲ್ಲೂಕಿನ ಮೊದಲ ಜುಡೊ ಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವ ಮಧುಕುಮಾರ್ ಅಲ್ಲಿನ ಜುಡೊ ತರಬೇತುದಾರ ಡಿ.ಬಿ.ಮಿಥನ್‌ ಮಾರ್ಗದರ್ಶನದಲ್ಲಿ ಪರಿಪಕ್ವ ಸ್ಪರ್ಧಿಯಾಗಿ ರೂಪುಗೊಂಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 81 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಚಿಕ್ಕೋಡಿಯ ಸ್ಪರ್ಧಿಯನ್ನು 18 ಸೆಕೆಂಡ್‌ನಲ್ಲಿ, ಬೆಂಗಳೂರಿನ ‘ಸಾಯಿ ಟೀಮ್‌’ನ ಸ್ಪರ್ಧಿಯನ್ನು 13 ಸೆಕೆಂಡ್‌ನಲ್ಲಿ ಮಣಿಸಿ ಅವರು ರಾಷ್ಟ್ರ ಮಟ್ಟಕ್ಕೆ ಪ್ರವೇಶ ಪಡೆದಿದ್ದರು.

ಜನವರಿಯಲ್ಲಿ ನವದೆಹಲಿಯಲ್ಲಿ ಜರುಗಿದ 64ನೇ ನ್ಯಾಷನಲ್ ಸ್ಕೂಲ್‌ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಹೂವಿನಹಡಗಲಿಯ ಮಲ್ಲಿಗೆ ಪರಿಮಳವನ್ನು ರಾಷ್ಟ್ರ ರಾಜಧಾನಿಯಲ್ಲೂ ಪಸರಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ, ಸಂಜೆ ದೈಹಿಕ ಕಸರತ್ತು ನಡೆಸಿ ದೇಹವನ್ನು ಹುರಿಗೊಳಿಸುವ ಮಧು, ಅವರು ಓದುವ ಕಾಲೇಜಿನಲ್ಲೇ ಜುಡೊ ಪಟ್ಟುಗಳನ್ನು ಕಲಿಯುತ್ತಾರೆ. ಶಿಕಾರಿಪುರದ ಏಕಲವ್ಯ ಜುಡೊ ಅಕಾಡೆಮಿಯಲ್ಲಿ ವಾರದಲ್ಲಿ ಎರಡು ದಿನ ತರಬೇತಿಗೆ ಹೋಗುತ್ತಾರೆ. ಮಾಂಸಾಹಾರ, ಒಣ ಹಣ್ಣು ಮುಂತಾದ ಸಮತೋಲಿತ ಆಹಾರಗಳನ್ನು ಸೇವಿಸಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಮಧುಕುಮಾರ್ ಜುಡೊ ಸಮವಸ್ತ್ರ ಧರಿಸಿ ನಿಂತರೆ ಅವರಲ್ಲಿ ಅಪರಿಮಿತ ಶಕ್ತಿ ಸಂಚಯವಾಗುತ್ತದೆ. ಕ್ಷಣಾರ್ಧದಲ್ಲಿ ಎದುರಾಳಿಯನ್ನು ನಿಶ್ಚಲಗೊಳಿಸುವ ಹಲವು ಪಟ್ಟುಗಳು ಅವರಿಗೆ ಕರಗತ. ವಿದ್ಯಾರ್ಥಿಯ ಶಕ್ತಿ, ಸಾಮರ್ಥ್ಯ ಗುರುತಿಸಿ ತರಬೇತಿ ನೀಡಿದ ಕೋಚ್‌ ಮಿಥುನ್, ಎಲ್ಲ ರೀತಿಯ ಪ್ರೋತ್ಸಾಹ ನೀಡಿದ ತಂದೆ ಕೋಟೆಪ್ಪ ಈ ಸಾಧನೆ ಹಿಂದಿನ ಪ್ರೇಕರಶಕ್ತಿ. ಕಟ್ಟುಮಸ್ತಾದ ದೇಹ, ಚುರುಕು ಬುದ್ಧಿ ಹೊಂದಿರುವ ಈ ಹುಡುಗ ಭರವಸೆಯ ಜುಡೊ ಪಟುವಾಗಿ ಹೊರ ಹೊಮ್ಮಿದ್ದಾರೆ.

‘ಕಬಡ್ಡಿ, ವಾಲಿಬಾಲ್‌ ಕ್ರೀಡೆಯಲ್ಲಷ್ಟೇ ನನಗೆ ಆಸಕ್ತಿ ಇತ್ತು. ನನ್ನ ದೇಹದಾರ್ಢ್ಯ ನೋಡಿ ತರಬೇತುದಾರ ಜುಡೊ ಕಲಿಯಲು ಪ್ರೇರೇಪಿಸಿದರು. ಈ ಕ್ರೀಡೆಯ ಗಂಧ ಗಾಳಿ ಗೊತ್ತಿಲ್ಲದ ನನಗೆ ಮೊದಲು ಕಠಿಣ ಎನಿಸಿತು. ಪಟ್ಟುಗಳನ್ನು ಕಲಿತ ಮೇಲೆ ಆತ್ಮವಿಶ್ವಾಸ ಮೂಡಿತು. ರಾಷ್ಟ್ರ, ಅಂತರರಾಷ್ಟ್ರೀಯ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಆಡಬೇಕೆನ್ನುವ ಗುರಿ ಹೊಂದಿದ್ದೇನೆ. ಅದಕ್ಕೆ ಪೂರಕವಾಗಿ ನಿರಂತರ ತಯಾರಿ ನಡೆಸುತ್ತೇನೆ’ ಎಂದು ಮಧುಕುಮಾರ್ ಹೇಳಿದರು.

‘ರಾಜ್ಯ, ರಾಷ್ಟ್ರಮಟ್ಟದಲ್ಲಿ ಪದಕ ಗಳಿಸಿದ್ದರಿಂದ ಕಾಲೇಜಿನಲ್ಲಿ ಶುಲ್ಕ ರಿಯಾಯಿತಿ ಸಿಕ್ಕಿದೆ. ಗೌರವವೂ ಹೆಚ್ಚಾಗಿದೆ. ಕೇಂದ್ರ, ರಾಜ್ಯ ಸರ್ಕಾರದಿಂದ ನಗದು ಪುರಸ್ಕಾರ ಸಿಕ್ಕಿದೆ. ಈ ಎಲ್ಲ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ವೀರೇಂದ್ರಗೌಡ, ತರಬೇತುದಾರ ಮಿಥನ್ ಹಾಗೂ ಎಲ್ಲ ರೀತಿಯ ಪ್ರೋತ್ಸಾಹ, ಬೆಂಬಲ ನೀಡುತ್ತಿರುವ ತಂದೆ ತಾಯಿಯ ಪ್ರೋತ್ಸಾಹ ಕಾರಣ’ ಎಂದು ತಿಳಿಸಿದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !