ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲಿ ಅರಳಿದ ಜಿಂಕೆ ಓಟದ ಜ್ಯೋತಿ

Last Updated 8 ಜನವರಿ 2019, 19:45 IST
ಅಕ್ಷರ ಗಾತ್ರ

ಕುರುಗೋಡು: ಕನಿಷ್ಠ ಮೂಲಭೂತ ಸೌಕರ್ಯಗಳು ಇರದ ಗ್ರಾಮ ತಾಲ್ಲೂಕಿನ ಸೋಮಲಾಪುರ. ಅಂತಹ ಪುಟ್ಟ ಊರಿನ ಪುಟ್ಟ ಗುಡಿಸಲಿನಲ್ಲಿ ಅರಳಿದ ಪ್ರತಿಭೆ ಇದು. ಆಧುನಿಕ ಜಗತ್ತಿನ ಯಾವ ಸವಲತ್ತುಗಳು ಸಿಗದಿದ್ದರೂ ಅವುಗಳೆಲ್ಲವನ್ನು ಮೀರಿ ಬಾಲಕಿ ಜ್ಯೋತಿ ಓಟದಲ್ಲಿ ಎತ್ತರದ ಸಾಧನೆ ಮಾಡಿದ್ದಾಳೆ.

ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಜ್ಯೋತಿಗೆ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಜಯಿಸುವ ಖಯಾಲಿ. ಇತ್ತೀಚೆಗೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ರಾಷ್ಟ್ರಮಟ್ಟದ ಅಮೆಚ್ಯೂರ್‌ ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಜ್ಯೋತಿಗೆ ಸಿಕ್ಕಿತ್ತು. ಆದರೆ, ಜನನ ಪ್ರಮಾಣ ಪತ್ರ ಇಲ್ಲ ಎಂಬ ಒಂದೇ ಕಾರಣಕ್ಕೆ ಆಕೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಲಾಯಿತು.

ಹೀಗಿದ್ದರೂ ಜ್ಯೋತಿ ಅದರಿಂದ ಎದೆಗುಂದಿಲ್ಲ. ಈಗ ಜನನ ಪ್ರಮಾಣ ಪತ್ರ ಸೇರಿದಂತೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೊರೆಯುವ ಮಾಗಿಯ ಚಳಿಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆ ಬೆವರು ಹರಿಸುತ್ತಿದ್ದಾರೆ. ಮುಂದಿನ ವರ್ಷದ ರಾಷ್ಟ್ರೀಯ ಸ್ಪರ್ಧೆಗೆ ಈಗಿನಿಂದಲೇ ಭರ್ಜರಿ ತಾಲೀಮು ನಡೆಸಿದ್ದಾರೆ.

ಕೊಕ್ಕೊ ಆಟದಲ್ಲೂ ಜ್ಯೋತಿ ಮುಂದಿದ್ದಾರೆ. ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ಜಿಲ್ಲಾಮಟ್ಟದಲ್ಲಿ ಐದು ಬಾರಿ, ಪ್ರಾಥಮಿಕ ವಿಭಾಗದಲ್ಲಿ ಮೂರು, ಪ್ರೌಢಶಾಲೆ ವಿಭಾಗ ಹಾಗೂ ವಿಭಾಗೀಯ ಮಟ್ಟದಲ್ಲಿ ತಲಾ ಒಂದು ಸಲ ಪ್ರಶಸ್ತಿ ಜಯಿಸಿದ್ದಾರೆ.

ಜ್ಯೋತಿ ತಾಯಿ ಶರಣಮ್ಮ ಕೂಲಿ ಕೆಲಸ ಮಾಡುತ್ತಿದ್ದು, ಮಗಳ ಕನಸು ಸಾಕಾರಗೊಳಿಸಲು ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಜ್ಯೋತಿ ಓದಿನಲ್ಲಿಯೂ ಮುಂದಿದ್ದಾರೆ.

‘ಆರಂಭದಲ್ಲಿ ಶಾಲೆಯಲ್ಲಿ ನಡೆಯುವ ಎಲ್ಲ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದೆ. ಶಾಲೆಯ ಶಿಕ್ಷಕರಾದ ಹನುಮಂತಪ್ಪ, ಗಾದಿಲಿಂಗಪ್ಪ ಅವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಹೀಗಾಗಿ ಅದರಲ್ಲಿ ಮುಂದುವರಿದಿದ್ದೇನೆ’ ಎಂದು ಜ್ಯೋತಿ ಹೇಳಿದರು.

‘ನಾನು ಕೂಲಿ ಮಾಡಿ ಜೀವ್ನ ಮಾಡಬೇಕು. ನನ್ನ ಮಗಳು ಬೇಸ್ ಓದುತಾಳ. ಆಟದಾಗ ಮುಂದೆ ಅದಾಳ. ಕಷ್ಟ ಆದ್ರು ಚಿಂತಿ ಇಲ್ಲ ಓದಾಕ ಸಾಲಿಗೆ ಕಳಿಸ್ತೀನಿ. ಆಟಕ್ಕೂ ಕಳಿಸ್ತೀನಿ’ ಎಂದು ತಾಯಿ ಶರಣಮ್ಮ ಹೇಳಿದರು.

‘ಸೌಲಭ್ಯ ವಂಚಿತ ಗ್ರಾಮೀಣ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳಲ್ಲಿ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಸಾಧನೆ ಮಾಡುತ್ತಾರೆ. ಅದಕ್ಕೆ ನಿದರ್ಶನ ಜ್ಯೋತಿ’ ಎಂದು ಶಿಕ್ಷಕ ಹನುಮಂತಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT