ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಯಲ್ಲಿ ಹೊನ್ನಪ್ಪನ ಹೊಳಪು

ಅಂತರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ
Last Updated 21 ಮೇ 2019, 19:33 IST
ಅಕ್ಷರ ಗಾತ್ರ

ಹೂವಿನಹಡಗಲಿ: ಕಬಡ್ಡಿಯಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಆಟ ರೂಢಿಸಿಕೊಂಡಿರುವ ತಾಲ್ಲೂಕಿನ ಹೊಳಲು ಗ್ರಾಮದ ಯುವಕ ಹೊನ್ನಪ್ಪ ಮನ್ನಂಗಿ ಅಂತರರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಮಿಂಚಿ ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ.

ರೈಡರ್‌ ಆಗಿ ಇವರು ಎದುರಾಳಿ ಅಂಕಣಕ್ಕೆ ಕಾಲಿಟ್ಟರೆ ಅಂಕ ಗಳಿಸದೇ ಹಿಂತಿರುಗುವುದಿಲ್ಲ. ಎದುರಾಳಿ ತಂಡದ ಆಟಗಾರರನ್ನು ಬೋನಸ್‌ ಗೆರೆಯ ಆಚೆಗೂ ದಾಟಿಸುವ ಆಕ್ರಮಣಕಾರಿ ಆಟಕ್ಕೆ ಇವರು ಹೆಸರುವಾಸಿ. ಕಬಡ್ಡಿಯ ಕೆಲವು ವಿಶಿಷ್ಟ ಕೌಶಲಗಳನ್ನು ಕರಗತ ಮಾಡಿಕೊಂಡಿರುವ ಈ ಗ್ರಾಮೀಣ ಪ್ರತಿಭೆ ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ರೂಪುಗೊಂಡಿದ್ದಾರೆ.

ಕಬಡ್ಡಿ ಆಟಕ್ಕೆ ಬರೀ ದೈಹಿಕ ಸಾಮರ್ಥ್ಯವೊಂದಿದ್ದರೆ ಸಾಲದು, ಎದುರಾಳಿಯ ಮೇಲೆ ಹಿಡಿತ ಸಾಧಿಸುವ ಬೌದ್ಧಿಕ ಚಾಕಚಕ್ಯತೆಯೂ ಅಗತ್ಯ. ಎತ್ತರದ ನಿಲುವು, ಉತ್ತಮ ದೇಹದಾರ್ಢ್ಯ ಹೊಂದಿರುವ 26 ವರ್ಷದ ಹೊನ್ನಪ್ಪ ಕಬಡ್ಡಿ ಆಟಕ್ಕೆ ಬೇಕಾದ ಎಲ್ಲ ದೈಹಿಕ, ಬೌದ್ಧಿಕ ಸಾಮರ್ಥ್ಯವನ್ನು ಗಳಿಸಿ, ಮಿಂಚಿನ ದಾಳಿಗಾರ ಎಂದೇ ಪ್ರಸಿದ್ಧಿಯಾಗಿದ್ದಾರೆ.

ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ಯುನೈಟೆಡ್ ಇಂಡಿಯಾ ಗೇಮ್ಸ್‌ ಅಸೋಸಿಯೇಷನ್ಸ್‌ ನಡೆಸಿದ ಆಯ್ಕೆ ಪರೀಕ್ಷೆಯಲ್ಲಿ ಇವರು ರಾಜ್ಯಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದರು. ಜನವರಿ 28ರಿಂದ 31ರ ವರೆಗೆ ಪಂಜಾಬ್‌ನಲ್ಲಿ ನಡೆದ ಐದನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ರಾಜ್ಯ ತಂಡ ಛತ್ತೀಸ್‌ಗಡ, ದೆಹಲಿ, ಜಾರ್ಖಂಡ ಹಾಗೂ ಹರಿಯಾಣ ತಂಡಗಳ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಹೊನ್ನಪ್ಪ ಅಂತರರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೂ ಆಯ್ಕೆಯಾಗಿದ್ದರು.

ಮೇ ಮೊದಲ ವಾರದಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಐದನೇ ಅಂತರರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಹೊನ್ನಪ್ಪ ಉತ್ತಮ ರೈಡರ್ ಆಗಿಯೂ ಗಮನ ಸೆಳೆದಿದ್ದರು. ಈ ಟೂರ್ನಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ತಂಡ ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದಿದೆ.

ಹೊನ್ನಪ್ಪನಿಗೆ ಬಾಲ್ಯದಿಂದಲೂ ಕ್ರೀಡೆಗಳ ಬಗ್ಗೆ ವಿಶೇಷ ಒಲವು. ಸ್ವಗ್ರಾಮ ಹೊಳಲಿನಲ್ಲಿ ಸ್ವಾಮಿ ವಿವೇಕಾನಂದ ಕಬಡ್ಡಿ ಮತ್ತು ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿ ಯಾವಾಗಲೂ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿರುತ್ತಿದ್ದರು. ಸುತ್ತಮುತ್ತ ಗ್ರಾಮಗಳಲ್ಲದೇ ತಾಲ್ಲೂಕು, ಜಿಲ್ಲಾಮಟ್ಟದ ಕಬಡ್ಡಿ, ಕ್ರಿಕೆಟ್‌ ಟೂರ್ನಿಗಳಲ್ಲಿ ಆಟವಾಡಿ ಪಳಗಿದ್ದಾರೆ. ಎಂಟನೇ ತರಗತಿ ಓದುವಾಗ ಕ್ರೀಡಾ ಸಾಧನೆ ಮಾಡಿ ಬಳ್ಳಾರಿಯ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾಗಿದ್ದರು. ಬಾಸ್ಕೆಟ್‌ ಬಾಲ್‌ ಮತ್ತು ಕಬಡ್ಡಿಯಲ್ಲಿ ಹೆಚ್ಚಿನ ತರಬೇತಿ ಪಡೆದು ಅಲ್ಲಿಂದಲೇ ಪರಿಪಕ್ವ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ.

‘ದೈಹಿಕ ಶಿಕ್ಷಣ ಶಿಕ್ಷಕ ಪಂಚಪ್ಪ ನನ್ನನ್ನು ಕಬಡ್ಡಿ ಆಟಗಾರನಾಗಿ ರೂಪಿಸಿದ್ದರಿಂದ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಆಟವಾಡಲು ಸಾಧ್ಯವಾಯಿತು. ಈಗಾಗಲೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವುದರಿಂದ ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯ ತಂಡ ಸೇರಿ ಪ್ರೊ. ಕಬಡ್ಡಿ ಲೀಗ್‌ನಲ್ಲಿ ಆಡಬೇಕು ಎಂಬ ಗುರಿ ಹೊಂದಿದ್ದೇನೆ. ಅದಕ್ಕಾಗಿ ಪ್ರತಿ ದಿನವೂ ವರ್ಕೌಟ್‌ ನಡೆಸುತ್ತಿದ್ದೇನೆ’ ಎಂದು ಹೊನ್ನಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT