ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿನ ಕ್ರಮಕ್ಕೆ ಮುಂದಾಯಿತೇ ಕನ್ನಡ ವಿ.ವಿ?

ಫೆಲೋಶಿಪ್‌ ಬಿಡುಗಡೆ ಸಂಬಂಧ ಧ್ವನಿ ಎತ್ತಿದ್ದ ಸಂಶೋಧನಾ ವಿದ್ಯಾರ್ಥಿಗೆ ನೋಟಿಸ್‌
Last Updated 19 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತನ್ನದೇ ಸಂಶೋಧನಾ ವಿದ್ಯಾರ್ಥಿಗೆ ನೋಟಿಸ್‌ ನೀಡುವುದರ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಸೇಡಿನ ಕ್ರಮಕ್ಕೆ ಮುಂದಾಯಿತೇ?

‌ಹೌದು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಬೆಳವಣಿಗೆಯಿಂದ ಇಂತಹದ್ದೊಂದು ಪ್ರಶ್ನೆ ಮೂಡಿದೆ. ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿರುವ ಎ.ಕೆ. ದೊಡ್ಡಬಸಪ್ಪ ಎಂಬ ವಿದ್ಯಾರ್ಥಿಗೆ ದುರ್ವರ್ತನೆ ಆರೋಪದ ಮೇರೆಗೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ಸೋಮವಾರ ನೋಟಿಸ್‌ ನೀಡಿದ್ದಾರೆ.

ದೊಡ್ಡಬಸಪ್ಪ ಅವರು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಜಿಲ್ಲಾ ಸಂಚಾಲಕರಾಗಿದ್ದು, ವಿದ್ಯಾರ್ಥಿಗಳ ಹಕ್ಕಿಗಾಗಿ ಮೊದಲಿನಿಂದಲೂ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಈಗ ಅವರಿಗೆ ನೋಟಿಸ್‌ ನೀಡಲಾಗಿದೆ. ತನ್ನ ಕ್ರಮವನ್ನು ವಿ.ವಿ. ಆಡಳಿತ ಸಮರ್ಥಿಸಿಕೊಂಡಿದೆ.

‘ವಿದ್ಯಾರ್ಥಿಗಳ ಫೆಲೋಶಿಪ್‌ ಬಿಡುಗಡೆಯೂ ಸರ್ಕಾರದ ಆರ್ಥಿಕ ನೆರವು ಅವಲಂಬಿಸಿರುತ್ತದೆ. ಈ ವಿಷಯ ಹಲವು ಸಲ ಹೇಳಿದರೂ ಕಾರ್ಯಕ್ರಮಗಳಿಗೆ ಅಡ್ಡಿಯಾಗುವಂತೆ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಒಟ್ಟುಗೂಡಿಸಿ, ಹೊರಗಿನ ಸಂಘಟನೆಗಳೊಂದಿಗೆ ಸೇರಿಕೊಂಡು ನಿರಂತರವಾಗಿ ಮುಷ್ಕರ ನಡೆಸಿ ದುರ್ವರ್ತನೆ ತೋರಿದ್ದಾರೆ. ಇದರಿಂದ ಶೈಕ್ಷಣಿಕ ವಾತಾವರಣ ಕಲುಷಿತಗೊಂಡಿದೆ. ನಿಮ್ಮ ನಡವಳಿಕೆಗಾಗಿ ಕನ್ನಡ ವಿ.ವಿ. ಅಧಿನಿಯಮ, ನಿಯಮ 6(2) (ಸಿ) ಅನ್ವಯ ನಿಮ್ಮ ಪಿಎಚ್‌.ಡಿ. ಅಧ್ಯಯನದ ಕಾಯಂ ನೋಂದಣಿ ಏಕೆ ರದ್ದುಗೊಳಿಸಿ, ವಿಶ್ವವಿದ್ಯಾಲಯದಿಂದ ಬಿಡುಗಡೆಗೊಳಿಸಬಾರದು’ ಎಂದು ನೋಟಿಸ್‌ನಲ್ಲಿ ಕೇಳಿದ್ದಾರೆ. ‘ನೋಟಿಸ್‌ ತಲುಪಿದ ಮೂರು ದಿನಗಳ ಒಳಗೆ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಏ.12ರಂದು ಆಡಳಿತ ಮಂಡಳಿ ಸದಸ್ಯರ ಸಮಕ್ಷಮದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿಸುವಂತೆ ಒತ್ತಾಯಿಸಿದ್ದೀರಿ. ಏ.16ರಂದು ಅನೇಕ ಸಚಿವರುಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ಭಾಷಣಕ್ಕೆ ಮತ್ತು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಅವಮಾನಕರವಾಗುವ ರೀತಿಯಲ್ಲಿ ವಿ.ವಿ. ಹಿತಾಸಕ್ತಿಗೆ ವಿರುದ್ಧವಾಗಿ ದುರ್ನಡತೆ ತೋರಿರುತ್ತೀರಿ. ನಿಮ್ಮ ವಿರುದ್ಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದೂ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ಹಸಿವು, ಬಡತನದ ಬಗ್ಗೆ ಪ್ರಾಧ್ಯಾಪಕರು ಪಾಠ ಮಾತನಾಡುತ್ತಾರೆ. 40 ತಿಂಗಳ ಫೆಲೋಶಿಪ್‌ ಸಿಗದೇ ವಿದ್ಯಾರ್ಥಿಗಳು ಹೇಗೆ ಸಂಶೋಧನೆ ಮಾಡಲು ಸಾಧ್ಯ. ಬಹುತೇಕ ತಳಸಮುದಾಯ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿದ್ದಾರೆ. ನಮ್ಮ ಸಮಸ್ಯೆ ಹೇಳಿಕೊಂಡರೆ ನೋಟಿಸ್‌ ಕೊಡುವುದು ಎಷ್ಟು ಸರಿ. ನೋಟಿಸ್‌ಗೆ ಉತ್ತರ ಕೊಡುತ್ತೇನೆ’ ಎಂದು ದೊಡ್ಡಬಸಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವಿ.ವಿ. ಅಕಾಡೆಮಿಕ್‌ ಚಟುವಟಿಕೆಗಳಿಗಿಂತ ಭ್ರಷ್ಟಾಚಾರದ ಆರೋಪ, ಆಂತರಿಕ ಸಂಘರ್ಷದಿಂದಲೇ ಪದೇ ಪದೇ ಸದ್ದು ಮಾಡುತ್ತಿದೆ.

ಹಿಂದಿನ ಮರ್ಮವೇನು?

ಏ.12ರಂದು ನುಡಿಹಬ್ಬಕ್ಕೆ ಬಂದಿದ್ದ ರಾಜ್ಯಪಾಲರಿಗೆ ಫೆಲೋಶಿಪ್‌ ಸಂಬಂಧ ಮನವಿ ಪತ್ರ ಕೊಡಲು ಅವಕಾಶ ಕಲ್ಪಿಸಬೇಕೆಂದು ದೊಡ್ಡಬಸಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕನ್ನಡ ವಿ.ವಿ. ಆಡಳಿತಕ್ಕೆ ಕೋರಿದ್ದರು. ಆದರೆ, ಅದಕ್ಕೆ ಅವರು ಅವಕಾಶ ಕಲ್ಪಿಸಿರಲಿಲ್ಲ. ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರ ನೆರವಿನೊಂದಿಗೆ ವಿದ್ಯಾರ್ಥಿಗಳು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು.

ಏ. 16ರಂದು ನಡೆದ ಸಮಾರಂಭದಲ್ಲಿ ದೊಡ್ಡಬಸಪ್ಪ ಎದ್ದು ನಿಂತು, 40 ತಿಂಗಳ ಫೆಲೋಶಿಪ್‌ ಕೊಟ್ಟಿಲ್ಲ ಎಂದು ಗೋಳು ತೋಡಿಕೊಂಡಿದ್ದರು. ಅದಕ್ಕೆ ಸಿ.ಎಂ. ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ನಾನು ಸಮಾಧಾನವಾಗುವ ರೀತಿಯಲ್ಲಿ ಮಾತನಾಡದಿದ್ದರೆ ಹೊರಗೆ ಬಂದು ಮಾತನಾಡಿ. ಈಗ ಕುಳಿತುಕೊಳ್ಳಿ’ ಎಂದು ಹೇಳಿದ್ದರು. ಫೆಲೋಶಿಪ್‌ ಸಂಬಂಧ ಮೊದಲಿನಿಂದಲೂ ಧ್ವನಿ ಎತ್ತುತ್ತಿದ್ದಾರೆ. ಈಗ ಇದೇ ವಿಷಯವನ್ನು ವಿ.ವಿ. ಆಡಳಿತ ಪ್ರತಿಷ್ಠೆಗೆ ತೆಗೆದುಕೊಂಡು ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ಬಾಯಿ ಮುಚ್ಚಿಸುವ ಕುತಂತ್ರ’

‘ಕನ್ನಡ ವಿಶ್ವವಿದ್ಯಾಲಯಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿಲ್ಲ. ದಾಂಧಲೆ ಮಾಡಿಲ್ಲ. ಅವಾಚ್ಯವಾಗಿ ಮಾತನಾಡಿಲ್ಲ. ದುರ್ವರ್ತನೆ ತೋರಿಲ್ಲ. 40 ತಿಂಗಳ ಫೆಲೋಶಿಪ್‌ ಕೊಟ್ಟಿಲ್ಲ ಎಂದು ಹೇಳಿದ್ದೆ. ಸಮಸ್ಯೆ ಹೇಳಿಕೊಂಡರೆ ನೋಟಿಸ್‌ ಕೊಟ್ಟಿದ್ದಾರೆ. ಇದು ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವ ಕುತಂತ್ರ’ ಎಂದು ಸಂಶೋಧನಾ ವಿದ್ಯಾರ್ಥಿ ಎ.ಕೆ. ದೊಡ್ಡಬಸಪ್ಪ ಪ್ರತಿಕ್ರಿಯಿಸಿದ್ದಾರೆ.

‘ದುರ್ವರ್ತನೆಗೆ ವಿವರಣೆ’

‘ಇಡೀ ಸರ್ಕಾರವೇ ವಿಶ್ವವಿದ್ಯಾಲಯಕ್ಕೆ ಬಂದಿತ್ತು. ಎಲ್ಲರೂ ಶಾಂತ ರೀತಿಯಿಂದ ಕುಳಿತಿದ್ದರು. ಕಾರ್ಯಕ್ರಮದಲ್ಲಿ ಸಿ.ಎಂ. ಭಾಷಣ ಮುಗಿಯುವವರೆಗೆ ಕಾಯಬೇಕಿತ್ತು. ಆದರೆ ದೊಡ್ಡಬಸಪ್ಪ ಹಾಗೆ ಮಾಡದೇ ದುರ್ವರ್ತನೆ ತೋರಿದ್ದಾರೆ. ವಿದ್ಯಾರ್ಥಿ ಸಮೂಹಕ್ಕೆ ಕಪ್ಪು ಚುಕ್ಕೆ. ಅವರ ದುರ್ವರ್ತನೆಗಾಗಿ ಅವರಿಂದ ವಿವರಣೆ ಕೇಳಲಾಗಿದೆ’ ಎಂದು ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT