ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು-ಆರು..ಆರು..ಮೂರಾದೀತು ಬಹುಪರಾಕ್ : ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವ

Last Updated 27 ಅಕ್ಟೋಬರ್ 2020, 12:35 IST
ಅಕ್ಷರ ಗಾತ್ರ

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ‘ಮೂರು...ಆರು, ಆರು ಮೂರಾದೀತು ಬಹುಪರಾಕ್’–ಇದು ದೇವರಗುಡ್ಡದ ಮಾಳಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವದ ಭವಿಷ್ಯ ನುಡಿ.

ತಾಲ್ಲೂಕಿನ ಗಡಿ ಭಾಗದಲ್ಲಿರುವ ಸೀಮಾಂದ್ರದ ಕರ್ನೂಲು ಜಿಲ್ಲೆಯ ಹೊಳಗುಂದಿ ಮಂಡಲದ ನೇರಣಕಿ ಗ್ರಾಮದ ಬಳಿಯ ದೇವರಗುಡ್ಡದಲ್ಲಿ ನಿಷೇಧದ ನಡುವೆಯೂ ವಿಜಯದಶಮಿ ಅಂಗವಾಗಿ ಮಂಗಳವಾರ ಬೆಳಗಿನ ಜಾವ ನಡೆದ ಮಾಳಮಲ್ಲೇಶ್ವರ ಸ್ವಾಮಿಯ ಕಾರಣಿಕಕ್ಕೆ ನೂರಾರು ಮಂದಿ ಸಾಕ್ಷಿಯಾದರು.

‘ಗಂಗೆ ಹೊಳೆ ದಂಡಿಗೆ ನಿಂತಾಳಾ, ಮಾಳಮ್ಮ ಅವ್ವಾ ಸವಾರಿ ಮಾಡ್ಯಾಳ. ಮುಂದಿನ ಆರು ತಿಂಗಳವರೆಗೆ ₹ 4800 ನಗ ಹರಳೆ , ₹ 1600 ಜೋಳ , ಮೂರು ಆರು, ಆರು ಮೂರಾದೀತು ಬಹುಪರಾಕ್'' ಎಂದು ಅರ್ಚಕರು ಕಾರಣಿಕ ನುಡಿದರು.

‘ಈ ವರ್ಷ ಗಂಗೆ ಹೊಳೆ ದಂಡೆಗೆ ನಿಂತಾಳ ಎಂದರೆ ಸಮೃದ್ಧವಾದ ಮಳೆಯಾಗಿ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತವೆ’ ಎಂದು ಮಲ್ಲಯ್ಯನ ಭಕ್ತರು ವಿಶ್ಲೇಷಿಸುತ್ತಿದ್ದರು.

ನಿಷೇಧದ ನಡುವೆಯೇ ನುಗ್ಗಿ ಬಂದರು...

ಕೊರೊನಾ ನಿಯಂತ್ರಣ ಸಲುವಾಗಿ ಆಂಧ್ರ ಸರ್ಕಾರ ನಿಷೇಧ ಹೇರಿದ್ದರೂ, ವಿಜಯದಶಮಿಯ ರಾತ್ರಿಯಿಡೀ ಸಾವಿರಾರು ಭಕ್ತರು ದೇವರ ಗುಡ್ಡದ ಮಾಳಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವದಲ್ಲಿ ಪೊಲೀಸರ ಎದುರೇ ನಿರಾತಂಕವಾಗಿ ಪಾಲ್ಗೊಂಡರು. ಎಂದಿನಂತೆ ಬಡಿಗೆಗಳನ್ನು ಹಿಡಿದು ಬಡಿದಾಟವನ್ನೂ ನಡೆಸಿದರು.

ತಾಲ್ಲೂಕಿನ ಗಡಿ ಭಾಗದಲ್ಲಿರುವ ಆಂದ್ರದ ಆಲೂರು ತಾಲ್ಲೂಕಿನ ಹೊಳಗುಂದಿ ಬಳಿಯ ದೇವರಗುಡ್ಡದಲ್ಲಿ ಬನ್ನಿ ಉತ್ಸವದ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ ಕಾಲಕ್ಕೆ ನಡೆಯುವ ಬಡಿಗೆಗಳ ಆಟದಲ್ಲಿ ಅನೇಕರಿಗೆ ಗಾಯಗಳಾದರೂ ಲೆಕ್ಕಿಸಲಿಲ್ಲ. ದೇವರಿಗಾಗಿ ನಡೆಯುವ ಈ ಬನ್ನಿ ಉತ್ಸವವನ್ನು ತಡೆಯಲು ಪೊಲೀಸರು ಸತತ ಪ್ರಯತ್ನ ನಡೆಸಿದರೂ ಸಾಧ್ಯವಾಗದೇ ಹಿಂದೆ ಸರಿದು ವಿಫಲರಾದರು.

ಉತ್ಸವವನ್ನು ನಿಷೇಧಿಸಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ದೇವರ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು.

ಭಕ್ತರು ಮಾತ್ರ ಪೊಲೀಸರ ಕಠಿಣ ಕ್ರಮಕ್ಕೆ ಹೆದರದೇ ಎಂದಿನಂತೆ ಬಡಿಗೆಗಳೊಂದಿಗೆ ಸೋಮವಾರ ತಡರಾತ್ರಿ ಏಕಾಏಕಿ ಸುತ್ತಮುತ್ತಲಿನ ಕಾಲುದಾರಿಗಳ ಮೂಲಕವೇ ಗುಡ್ಡಕ್ಕೆ ಧಾವಿಸಿ ಬಂದರು.

ಗುಡ್ಡದ ಮೇಲಿನ ಮಲ್ಲಯ್ಯ-ಮಾಳಮ್ಮ ದೇವರಿಗೆ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊರಗೆ ತರಲಾಯಿತು. ಮೂರ್ತಿಯು ಬೆಟ್ಟದ ಮೇಲಿಂದ ಕೆಳಗಿಳಿಯುತ್ತಿದ್ದಂತೆಯೇ ಮಲ್ಲಯ್ಯನ ಭಕ್ತರು ಸ್ವಾಮಿಯ ಜಯಘೋಷ ಮಾಡುತ್ತಾ ಬಡಿಗೆಗೆಳನ್ನು ಝಳಪಿಸುತ್ತಾ ಪರಸ್ಪರ ಬಡಿದಾಟದಲ್ಲಿ ತೊಡಗಿದರು.

ಗುಡಿಯ ಭಂಡಾರವನ್ನು ಪರಸ್ಪರ ಎರಚಿಕೊಂಡರು. ಬಡಿದಾಟದಲ್ಲಿ ಆದ ಗಾಯಗಳನ್ನು ಲೆಕ್ಕಿಸದೇ ರುದ್ರ ರಮಣೀಯವಾಗಿ ಕುಣಿದರು. ಪಂಜಿನ ಮೆರವಣಿಗೆಯೊಂದಿಗೆ ಸಾಗಿ ಕಾರಣಿಕ ಉತ್ಸವಕ್ಕೆ ಮೆರಗು ನೀಡಿದರು.‌

ಅಲ್ಲಿಂದ ರಕ್ತಪಡೆಗೆ ತೆರಳಿದ ಭಕ್ತರ ಜೊತೆಗೇ ಇದ್ದ ಅರ್ಚಕರು ಅಸುರ ಮಣಿ ಮಲ್ಲಾಸುರನ ಕಲ್ಲಿನ ಬಳಿ ತಮ್ಮ ತೊಡೆಯಿಂದ ರಕ್ತದ ಐದು ಹನಿಗಳನ್ನು ಚಿಮ್ಮಿಸಿ ಅರ್ಪಿಸಿದರು. ಬನ್ನಿಮಂಟಪಕ್ಕೆ ಬಂದು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು.

ಆಗ, ನೆರೆದಿದ್ದ ಗ್ರಾಮಸ್ಥರು ಬೀಗರಂತೆ ಮಾಳವಿ ದೇವಿ ಮತ್ತು ಮಲ್ಲೆಶ್ವರ ಸ್ವಾಮಿಗೆ ವಧು ವರರಂತೆ ಶೃಂಗರಿಸಿ ವಿವಾಹ ಗೀತೆಗಳನ್ನು ಹಾಡಿದರು. ಮಾಳಮ್ಮ-ಮಲ್ಲಯ್ಯನಿಗೆ ಆಯರ (ಮುಯ್ಯ) ಬರೆಸಿ ಕಾಣಿಕೆ ಸಮರ್ಪಿಸಿದರು.

ಬನ್ನಿ ಮುಡಿದ ದೇವರುಗಳನ್ನು ಮೆರವಣಿಗೆಯಲ್ಲಿ ಸಾಗಿಸುತ್ತಾ, ಕಾರಣಿಕ ಹೇಳುವ ಸ್ಥಳಕ್ಕೆ ಧಾವಿಸಿದರು. ಆವರಿಸಿದ ದಟ್ಟ ಮೌನದ ನಡುವೆ ವರ್ಷ ಭವಿಷ್ಯ–ಕಾರಣಿಕ ಆಲಿಸಿದರು. ನಂತರ ಬಡಿಗೆಗೆಳ ಸದ್ದುಗಳೊಂದಿಗೆ ಸಾಗಿ ಉತ್ಸವ ಮೂರ್ತಿಗಳನ್ನು ಮತ್ತೆ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ಗೊರವಯ್ಯನವರು ಗೊರವರ ನೃತ್ಯ ಮಾಡುತ್ತ ಸ್ವಾಮಿಯ ಮಹಿಮೆಗಳನ್ನು ಹಾಡುತ್ತಾ ಭಕ್ತರಿಗೆ ಭಂಢಾರ ಹಚ್ಚಿ ಹರಸಿದರು. ನಂತರ ಎಲ್ಲರೂ ತಮ್ಮ ಊರುಗಳ ದಾರಿ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT