ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯ ಅಸಾಧಾರಣ ಕರಾಟೆ ’ಮಾಸ್ಟರ್‌‘

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಕರಾಟೆ ಕಲೆಯ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾದವರು ಪಟ್ಟಣದ ನಿವಾಸಿ ಮುತ್ಕೂರು ಸುಭಾಷ್‌.

ಸ್ವಯಂ ರಕ್ಷಣೆಗಾಗಿ ಕಲಿತ ಕಲೆಯ ಕುರಿತು ಆಸಕ್ತರಿಗೆ ತರಬೇತಿ ಕೊಟ್ಟು ’ಮಾಸ್ಟರ್‌‘ ಎಂಬ ಬಿರುದಾವಳಿಗೆ ಪಾತ್ರರಾಗಿದ್ದಾರೆ. ಸುಭಾಷ್ ಅವರು ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಜರುಗಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ದಾವಣಗೆರೆ, ಶಿವಮೊಗ್ಗ, ಸಿಂಧನೂರು ಮತ್ತು ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಷಿಪ್‍ಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

’ಕುಬುಡೋ’ದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಕರಾಟೆ ಪಟ್ಟುಗಳ ತರಬೇತಿ, ಫೈಟ್ ಮತ್ತು ಕಟಾ, ಆತ್ಮ ರಕ್ಷಣೆಯ ಕಲೆಗಳನ್ನು ಎಲ್ಲ ವಯೋಮಾನದವರಿಗೆ ಹೇಳಿಕೊಡುತ್ತಿದ್ದಾರೆ. ಬ್ಲ್ಯಾಕ್‌ ಬೆಲ್ಟ್ ತರಬೇತಿ ಪಡೆದವರಿಗೆ ಫಿಸಿಯೊಥೆರಪಿ ತರಬೇತಿ ಸಹ ನೀಡುತ್ತಾರೆ.

ಸ್ಕೇಟಿಂಗ್‌ನಲ್ಲೂ ಸುಭಾಷ್‌ ಅವರದು ಎತ್ತಿದ ಕೈ.ಜಿಲ್ಲೆಯ ವಿವಿಧ ಭಾಗದ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ನೀಡಿದ್ದಾರೆ. ಸ್ಕೇಟಿಂಗ್‌ ಮೂಲಕ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ.

ಅಂದಹಾಗೆ, ಸುಭಾಷ್‌ ಅವರು ಸವೆಸಿದ ಹಾದಿ ಸುಲಭವಾದುದಲ್ಲ. ಕಿತ್ತು ತಿನ್ನುವ ಬಡತನವನ್ನು ಸವಾಲಾಗಿ ಸ್ವೀಕರಿಸಿ ಕರಾಟೆ ತರಬೇತಿ ಪಡೆದರು. ಪಿ.ಯು.ಸಿ. ಓದುವಾಗ ಕಚೇರಿಯೊಂದರಲ್ಲಿ ಕಸ ಗೂಡಿಸುವ ಕೆಲಸ ಮಾಡಿ ಅದರಿಂದ ಬರುವ ₹250 ಕೂಲಿಯಲ್ಲಿ ₹50 ಕರಾಟೆ ತರಬೇತಿಗೆ ಮೀಸಲಿಡುತ್ತಿದ್ದರು. ಕರಾಟೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ಉತ್ತಮ ಪಟುವಾದರು. ಈಗ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಎಂ.ವೈ. ಘೋರ್ಪಡೆ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ದುಡಿಯುತ್ತಿದ್ದಾರೆ.

ಸುಭಾಷ್‌ ಅವರ ಬಳಿತರಬೇತಿ ಪಡೆದ ನಾಲ್ಕು ಜನ ಬಾಲಕಿಯರು ಬ್ಲ್ಯಾಕ್‌ ಬೆಲ್ಟ್ ಪಡೆದು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕರಾಟೆ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. 25 ಜನ ಯುವಕರು ಸಹ ಬ್ಲ್ಯಾಕ್‌ ಬೆಲ್ಟ್‌ ಪಡೆದಿದ್ದಾರೆ. ಪಾರ್ಶ್ವವಾಯು ಪೀಡಿತರಿಗೆ, ಬೆನ್ನುನೋವು ಮತ್ತು ಮಂಡಿನೋವಿನಿಂದ ಬಳಲುತ್ತಿರುವವರಿಗೆ ಫಿಸಿಯೊಥೆರಪಿ ಮಾಡುತ್ತಾರೆ. ಅದರಿಂದ ಅನೇಕ ಜನ ಗುಣಮುಖರಾಗಿದ್ದಾರೆ.

ಸುಭಾಷ್‌ ಅವರು ಯೋಗ ಮತ್ತು ಫಿಟ್ನೆಸ್ ಕೇಂದ್ರ ತೆರೆಯುವ ಉದ್ದೇಶ ಹೊಂದಿದ್ದಾರೆ. ಆಟೊ ಚಾಲಕರು, ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಫಿಸಿಯೊಥೆರಪಿ ಸೇವೆ ಕಲ್ಪಿಸುವ ಇರಾದೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT