ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ. ಕಟ್ಟುವಾಗ ಬಂದಿದ್ದ ಕಾರ್ನಾಡ

Last Updated 10 ಜೂನ್ 2019, 15:46 IST
ಅಕ್ಷರ ಗಾತ್ರ

ಹೊಸಪೇಟೆ: ಸೋಮವಾರ ಇಹಲೋಕ ತ್ಯಜಿಸಿದ ಸಾಹಿತಿ ಗಿರೀಶ್‌ ಕಾರ್ನಾಡ ಅವರು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜತೆ ವಿಶೇಷ ನಂಟು ಹೊಂದಿದ್ದರು.

ಅದು 1992ರ ಸಂದರ್ಭ ಆಗಷ್ಟೇ ಹಂಪಿ ಕನ್ನಡ ವಿಶ್ವವಿದ್ಯಾಲಯ ಕಟ್ಟುವ ಕೆಲಸ ಆರಂಭಗೊಂಡಿತು. ಅಂದಿನ ಕುಲಪತಿ ಪ್ರೊ.ಚಂದ್ರಶೇಖರ ಕಂಬಾರ ಅವರು ಅದರ ಹೊಣೆಗಾರಿಕೆ ಹೊತ್ತುಕೊಂಡಿದ್ದರು. ಕಂಬಾರ ಹಾಗೂ ಕಾರ್ನಾಡರಿಗೆ ಎ.ಕೆ. ರಾಮಾನುಜನ್‌, ಕೀರ್ತಿನಾಥ ಕುರ್ತಕೋಟಿ ಗುರುಗಳಾಗಿದ್ದರು. ಇಬ್ಬರಿಗೂ ಸಿನಿಮಾ, ನಾಟಕಗಳ ಬಗ್ಗೆ ವಿಶೇಷ ಒಲವು ಇದ್ದ ಕಾರಣಕ್ಕಾಗಿ ಕಂಬಾರ ಹಾಗೂ ಕಾರ್ನಾಡರು ಆತ್ಮೀಯರಾಗಿದ್ದರು. ವಿಶ್ವವಿದ್ಯಾಲಯ ಕಟ್ಟುವ ಹಂತದಲ್ಲಿ ಕಂಬಾರರು, ಕಾರ್ನಾಡ ಅವರನ್ನು ವಿ.ವಿ.ಗೆ ಕರೆಸಿಕೊಂಡು ಅವರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ವಿ.ವಿ.ಯಲ್ಲಿ ಕೆಲಸ ನಿರ್ವಹಿಸಿದರು.

’ಆರಂಭದಲ್ಲಿ ವಿ.ವಿ.ಯೊಂದಿಗೆ ಕಾರ್ನಾಡರು ಬೆಳೆಸಿಕೊಂಡಿದ್ದ ನಂಟು ಅನೇಕ ವರ್ಷಗಳವರೆಗೆ ಹಾಗೆಯೇ ಇತ್ತು. ವಿ.ವಿ.ಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳನ್ನು ದೂರದಲ್ಲಿದ್ದುಕೊಂಡೇ ಗಮನಿಸಿ, ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು‘ ಎಂದು ನೆನಕೆ ಮಾಡಿಕೊಳ್ಳುತ್ತಾರೆ ಅಂದಿನ ವಿ.ವಿ. ಯೋಜನಾಧಿಕಾರಿ ಡಾ. ಕೃಷ್ಣ ಕಟ್ಟಿ. ಅಂದಹಾಗೆ, ಕಟ್ಟಿಯವರು ವಿ.ವಿ. ಆರಂಭದ ದಿನಗಳಿಂದ 20 ವರ್ಷಗಳವರೆಗೆ ಅಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

’ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ವಿಭಿನ್ನವಾಗಿ ಕಟ್ಟುವ ಆಲೋಚನೆ ಹೊಂದಿದ್ದರು. ಅವರ ಆಲೋಚನೆಗಳು ಕಾರ್ಯರೂಪಕ್ಕೆ ತರುವುದರ ಮೊದಲು ರಂಗಭೂಮಿ, ಸಂಗೀತ ಸೇರಿದಂತೆ ಎಲ್ಲ ವಲಯದಲ್ಲಿ ಹೆಸರು ಮಾಡಿದ ಹಿರಿ ಹಾಗೂ ಕಿರಿ ತಲೆಮಾರಿನ ವಿದ್ವಾಂಸರನ್ನು, ಸೃಜನಶೀಲ ಮನಸ್ಸು ಹೊಂದಿದವರನ್ನು ವಿ.ವಿ.ಗೆ ಕರೆಸಿಕೊಂಡಿದ್ದರು. ಅದರಲ್ಲಿ ಕಾರ್ನಾಡ ಕೂಡ ಒಬ್ಬರಾಗಿದ್ದರು. ಅದರಲ್ಲೂ ಕನ್ನಡ ವಿ.ವಿ.ಯ ಭುವನ ವಿಜಯ ಸಭಾಂಗಣ ಕಟ್ಟುವಾಗ ಕಾರ್ನಾಡರಿಂದ ಸಲಹೆಗಳನ್ನು ಪಡೆದಿದ್ದರು. ಏಕೆಂದರೆ ರಂಗಭೂಮಿಯಲ್ಲಿ ಕಾರ್ನಾಡರು ಬಹಳ ಪಳಗಿದ್ದರು‘ ಎಂದು ಕೃಷ್ಣ ಕಟ್ಟಿ ನೆನಪು ಮಾಡಿಕೊಂಡರು.

’ಕನ್ನಡ ಭಾಷೆ, ಸಂಶೋಧನೆಗೆ ಸಂಬಂಧಿಸಿದ ವಿ.ವಿ. ಕಟ್ಟುವ ಜವಾಬ್ದಾರಿ ಕಂಬಾರರಿಗೆ ವಹಿಸಿದ್ದಕ್ಕೆ ಕಾರ್ನಾಡರಿಗೆ ಬಹಳ ಖುಷಿಯಿತ್ತು. ಈ ವಿಷಯವನ್ನು ಅನೇಕ ಸಲ ನನ್ನೊಂದಿಗೆ ಹಂಚಿಕೊಂಡಿದ್ದರು. ಉತ್ಕೃಷ್ಟವಾದ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದ ’ಬೃಹದ್ದೇಶಿ‘, ಶ್ರೀರಂಗರ ನಾಟಕ ಸಂಪುಟ ಹೊರತಂದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ನಿಜವಾದ ಅರ್ಥದಲ್ಲಿ ಕನ್ನಡದ ಕೆಲಸ ಎಂಬುದಾಗಿ ಹೇಳಿದ್ದರು‘ ಎಂದರು.

’ಕಾರ್ನಾಡರು ಹಿಂದಿನ ಕುಲಪತಿ ಮುರಿಗೆಪ್ಪ ಅವರ ಜತೆ ಒಳ್ಳೆಯ ಒಡನಾಟ ಹೊಂದಿದ್ದರು. ವಿ.ವಿ. ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಬಹಳ ಖುಷಿಯಿತ್ತು. ಅದನ್ನು ಅನೇಕ ಸಲ ಹೇಳಿದ್ದರು‘ ಎಂದು ನೆನಪು ಮಾಡಿಕೊಂಡರು ವಿ.ವಿ. ಪ್ರಾಧ್ಯಾಪಕ ರಮೇಶ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT