ಶನಿವಾರ, ಮಾರ್ಚ್ 6, 2021
28 °C
ರಸ್ತೆಗಿಳಿದ ರೈತರು, ದಲಿತ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು

ಬಳ್ಳಾರಿ ಜಿಲ್ಲೆಯಲ್ಲಿ ಒಮ್ಮತದ ಬಂದ್‌ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲೆಯಾದ್ಯಂತ ‘ಕರ್ನಾಟಕ ಬಂದ್‌’ ಯಶಸ್ವಿಯಾಯಿತು.

ಹಳ್ಳಿಗಳಿಂದ ರೈತರು ಎತ್ತಿನಗಾಡಿಗಳಿಂದ ಬಂದರು, ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರೂ ಬೆಂಬಲಿಸಿ ಹೋರಾಟದ ಗೀತೆಗಳನ್ನು ಹಾಡಿದರು. ಕೇಂದ್ರ, ರಾಜ್ಯ ಸರ್ಕಾರದ ಪ್ರತಿಕೃತಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳ ನೂರಾರು ಮಂದಿ ಬೈಕ್‌ ರ್ಯಾಲಿ ನಡೆಸಿದರು, ಮಾಸ್ಕ್‌ ಧರಿಸದೇ ಬಂದವರಿಗೆ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ಮಾಸ್ಕ್‌ ವಿತರಿಸಿದರು.

ಸಾರ್ವಜನಿಕ ಸಾರಿಗೆ ಬಸ್‌ಗಳು ಸಂಚರಿಸದೇ ಇದ್ದುದರಿಂದ ಪ್ರಯಾಣಿಕರು ಪರದಾಡಿದರು. ಆಟೋರಿಕ್ಷಾಗಳ ಓಡಾಟ ಸರಾಗವಾಗಿತ್ತು. ಹತ್ತಾರು ಸಂಘಟನೆಗಳ ಪ್ರತಿಭಟನಾಕಾರರು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನೆರೆದ ಪರಿಣಾಮವಾಗಿ ಆ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ವೃತ್ತದಲ್ಲಿ ಪ್ರತಿಭಟನಾಕಾರರ ವಾಹನಗಳ ಜೊತೆಗೆ ಎತ್ತಿನ ಬಂಡಿಗಳು, ನೂರಾರು ಎತ್ತುಗಳೂ ನೆರೆದು ಗಮನ ಸೆಳೆದವು. ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಅಂಗಡಿ–ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿದ್ದವು. ಕೆಲವೆಡೆ ಆಟೋರಿಕ್ಷಾಗಳನ್ನು ಪ್ರತಿಭಟನಾ ನಿರತರು ತಡೆದು ವಾಪಸು ಕಳಿಸಿದರು. ಪೆಟ್ರೋಲ್‌ ಬಂಕ್‌, ಆಸ್ಪತ್ರೆಗಳು, ಔಷಧ ಅಂಗಡಿ, ಟೀ–ಕಾಫಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಿಎಸ್‌ಎನ್‌ಎಲ್‌ ಕಚೇರಿಗೆ ಬೀಗಹಾಕಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು

ಮಹಿಳಾ ಪೊಲೀಸರ ದುರ್ಗಾ ಟೀಂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಿಸಿಲ ನಡುವೆ ಪ್ರತಿಭಟನೆ ಬಿಸಿ!

ನಗರದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ‘ಕರ್ನಾಟಕ ಬಂದ್‌’ ಚಟುವಟಿಕೆಗಳು ಆರಂಭವಾದವು. ಬಿಸಿಲು ಏರುತ್ತಿದ್ದಂತೆ ಪ್ರತಿಭಟನೆಯ ಬಿಸಿಯೂ ಏರಲಾರಂಭಿಸಿತ್ತು. ಬೆಳಿಗ್ಗೆಯೇ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನಾನಿರತರು ಟೈರ್‌ ಸುಟ್ಟು ಪ್ರತಿಭಟನೆ ನಡೆಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವಯಪ್ರೇರಿತ ಬಂದ್‌ ಬಗ್ಗೆ ಸಾರ್ವಜನಿಕರಲ್ಲಿ, ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸಿದರು. 

ಬೆಳಿಗ್ಗೆ 11ರ ವೇಳೆಗೆ ವೃತ್ತದಲ್ಲಿ ಹಲವು ಸಂಘಟನೆಗಳ ನೂರಾರು ಮಂದಿ ಗುಂಪಾಗಿ ಬಂದು ನರೆದರು. ಎತ್ತಿನಗಾಡಿಗಳಲ್ಲೂ ನೂರಾರು ಮಂದಿ ಬಂದ ಬಳಿಕ ಅಲ್ಲಿಯೇ ಬಹಿರಂಗ ಸಭೆಯೂ ನಡೆಯಿತು.

ವಿವಿಧ ಸಂಘಟನೆಗಳ ಮುಖಂಡರಾದ ಜೆ.ಸತ್ಯಬಾಬು, ಕರಿಯಪ್ಪ ಗುಡಿಮನಿ, ಕಾಂಗ್ರೆಸ್‌ ಮುಖಂಡರಾದ ಜಿ.ಎಸ್‌.ಮಹ್ಮದ್‌ ರಫೀಕ್‌, ಜೆ.ಎಸ್‌.ಆಂಜನೇಯುಲು, ಶಾಂತಾ, ಡಾ.ಪ್ರಮೋದ್, ಗೋವಿಂದ್, ಮಲ್ಲಿಕಾರ್ಜುನರೆಡ್ಡಿ, ಪುರುಷೋತ್ತಮಗೌಡ, ಕೆ.ಎರ್ರಿಸ್ವಾಮಿ, ಎ.ದೇವದಾಸ್‌, ಬಸವರಾಜ್, ಕಲ್ಲುಕಂಬ ಪಂಪಾಪತಿ ಪಾಲ್ಗೊಂಡಿದ್ದರು.

‘ಕರಾಳ ಕಾಯ್ದೆ ತಿದ್ದುಪಡಿ ವಾಪಸಾಗಲಿ’

‘ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಮಸೂದೆಗಳನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್‌ ಪಡೆಯಬೇಕು. ರಾಜ್ಯ ಸರಕಾರ ಈಚೆಗೆ ಘೋಷಿಸಿರುವ ಕೃಷಿ, ಕಾರ್ಮಿಕ ವಿರೋಧಿಯಾದ ಸುಗ್ರೀವಾಜ್ಞೆಗಳನ್ನು ವಾಪಸ್‌ ಪಡೆಯಬೇಕು’ ಎಂದು ಮುಖಂಡರು ಆಗ್ರಹಿಸಿದರು.

‘ಭೂಸುಧಾರಣೆ ತಿದ್ದುಪಡಿ ಕಾಯ್ದೆ-2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳು ಜನವಿರೋಧಿಯಾಗಿದೆ. ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಬಂದ್‌ಗೆ ಕೆಲವೆಡೆ ಮಿಶ್ರ ಪ್ರತಿಕ್ರಿಯೆ

ಬಳ್ಳಾರಿ:ಜಿಲ್ಲೆಯ ಕೆಲವೆಡೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಹಡಗಲಿ ಪಟ್ಟಣ ಹಾಗೂ ಕೊಟ್ಟೂರು ತಾಲ್ಲೂಕಿನ ಕಾನಹೊಸಳ್ಳಿಯಲ್ಲಿ ಅಂಗಡಿಗಳೆಲ್ಲವೂ ಎಂದಿನಂತೆ ತೆರೆದಿದ್ದವು. ಕೊಟ್ಟೂರಿನಲ್ಲಿ ಪ್ರತಿಭಟನಾಕಾರರ ಮೆರವಣಿಗೆ ಬಿಟ್ಟರೆ ಹೆಚ್ಚಿನ ತೀವ್ರತೆ ಕಂಡು ಬರಲಿಲ್ಲ.

ಹೊಸಪೇಟೆ, ಕೂಡ್ಲಿಗಿ, ಕಂಪ್ಲಿ, ಮರಿಯಮ್ಮನಹಳ್ಳಿ, ಸಂಡೂರು, ಕುರುಗೋಡಿನಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಭೀಮಾನಾಯ್ಕ ಪಾಲ್ಗೊಂಡು ಗಮನ ಸೆಳೆದರು. ಸಿರುಗುಪ್ಪದಲ್ಲೂ ಕಾಂಗ್ರೆಸ್‌ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. 

 ಕರ್ನಾಟಕ ದಲಿತ ಸಂಘರ್ಷ ಸಮಿತಿ, ತುಂಗಭದ್ರಾ ರೈತ ಸಂಘ, ಸಿಐಟಿಯು, ಕಾಂಗ್ರೆಸ್‌ ಎಐಡಿವೈಓ, ಎಐಡಿಎಸ್‌ಓ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಮಿತಿ,  ರೈತ ಕಿಸಾನ್‌ ಸಂಘ, ರೈತ–ಸಂಘ ಹಸಿರುಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಚಾಗನೂರು–ಸಿರಿವಾರ ನೀರಾವರಿ ಭೂರಕ್ಷಣಾ ಹೋರಾಟ ಸಮಿತಿ, ಅಖಿಲ ಭಾರತ ಯುವಜನ ಫೆಡರೇಶನ್, ಎಐಯುಟಿಯುಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ, ಎಪಿಎಂಸಿ ಹಮಾಲಿಗಳ ಸಂಘ, ತರಕಾರಿ ಮಾರಾಟಗರರ ಸಂಘ, ಕಿರಾಣಿ ಬಜಾರ್ ಅಂಗಡಿ ಮಾಲೀಕರ ಸಂಘ, ಜಿಲ್ಲಾ ಲಾರಿ ಮಾಲೀಕರ ಸಂಘ, ಎ.ಪಿಎಂಸಿ ಅಂಗಡಿ ಮಾಲೀಕರ ಸಂಘದ ಮುಖಂಡರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು