ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿನಗರದಲ್ಲಿ ಮಳೆ ಅವಾಂತರ: ಬಂದ್ರು ಹೋದ್ರು.. ಸಮಸ್ಯೆ ಬಗೆಹರಿದಿಲ್ಲ

ಮನೆಗಳಿಗೆ ನುಗ್ಗುವ ನೀರು
Last Updated 25 ಮೇ 2022, 4:54 IST
ಅಕ್ಷರ ಗಾತ್ರ

ಹೂವಿನಹಡಗಲಿ: ಡೀಸಿ, ಎಮ್ಮೆಲ್ಲೆ ಬಂದು ಮಳೆ ಅವಾಂತರ ನೋಡಿ ಹೋಗಿ ವರ್ಷ ಆತು. ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಮಳೆಗಾಲ ಬಂತಂದ್ರ ಜೀವ ಕೈಗೆ ಬರತೈತಿ. ಮನೆಗಳಿಗೆ ನೀರು ನುಗ್ಗಿ ದವಸ, ಧಾನ್ಯ, ಪಾತ್ರೆ ಪಗಡ ಎಲ್ಲ ಹಾಳಾದ್ವು. ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸಲಿಲ್ಲ …

ಇದು ತಾಲ್ಲೂಕಿನ ನಾಗತಿಬಸಾಪುರ ಗ್ರಾಮದ ದೇವಿನಗರ ಪ್ಲಾಟ್ ನಿವಾಸಿಗಳ ಅಳಲು. ಮಳೆಗಾಲ ಬಂತೆಂದರೆ ಇಲ್ಲಿನ ಜನರು ಬೆಚ್ಚಿ ಬೀಳುತ್ತಾರೆ. ಗದ್ದೆಗಳಿಂದ ಹರಿದು ಬರುವ ಭಾರಿ ಪ್ರಮಾಣದ ನೀರು ನೇರ ಇಲ್ಲಿನ ಮನೆಗಳಿಗೆ ನುಗ್ಗುತ್ತದೆ. ಇದು ನಿನ್ನೆ, ಮೊನ್ನೆಯ ಸಮಸ್ಯೆಯಲ್ಲ. ದಶಕದಿಂದ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದರೂ ಶಾಶ್ವತ ಪರಿಹಾರ ಕಾರ್ಯ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ದೂರು.

ಹೋದ ವರ್ಷ ಜುಲೈನಲ್ಲಿ ಭಾರಿ ಮಳೆ ಸುರಿದು ದೇವಿ ನಗರದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಜಿಲ್ಲಾಧಿಕಾರಿ, ಶಾಸಕರು ಭೇಟಿ ನೀಡಿ ಮಳೆ ಹಾನಿಯನ್ನು ವೀಕ್ಷಿಸಿದ್ದರು. ಹರಪನಹಳ್ಳಿ ಮುಖ್ಯ ರಸ್ತೆಯ ಮೋರಿಯನ್ನು ದುರಸ್ತಿಗೊಳಿಸಿ, ತಡೆಗೋಡೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಹಾನಿಯಾದ ಮನೆಗಳಿಗೆ ಪರಿಹಾರದ ಭರವಸೆಯನ್ನೂ ನೀಡಿದ್ದರು. ‘ವರ್ಷ ಕಳೆದರೂ ತಡೆಗೋಡೆ ನಿರ್ಮಾಣವಾಗಿಲ್ಲ. ಸಂತ್ರಸ್ತರಿಗೆ ಪರಿಹಾರವೂ ಸಿಕ್ಕಿಲ್ಲ ಎನ್ನುವುದು ಸ್ಥಳೀಯರ ಬೇಸರ.

‘ಇಲ್ಲಿನ ಕೆಲವು ರೈತರು ಹಳ್ಳ, ಸರದ ಮಾರ್ಗಗಳನ್ನು ಅತಿಕ್ರಮಿಸಿ ಕೃಷಿ ಮಾಡಿಕೊಂಡಿರುವುದರಿಂದ ನೀರು ಹರಿಯುವ ಪಥ ಬದಲಾಗಿದೆ. ಈ ಹಿಂದೆ ಕೆರೆ ಸೇರುತ್ತಿದ್ದ ಮಳೆಯ ನೀರು, ಈಗ ಊರೊಳಗಿನಿಂದ ತಗ್ಗು ಪ್ರದೇಶವಾಗಿರುವ ದೇವಿ ನಗರಕ್ಕೆ ನುಗ್ಗಿ ಬರುತ್ತಿದೆ. ದೇವಿ ನಗರದ ಬಳಿ ತಡೆಗೋಡೆ ನಿರ್ಮಿಸಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು’ ಎಂದು ಕೆಂಪೇಗೌಡ ಯುವಕ ಸಂಘದ ಅಧ್ಯಕ್ಷ ಎನ್.ಚಂದ್ರಶೇಖರ್ ಆಗ್ರಹಿಸಿದ್ದಾರೆ.

‘ಕಳೆದ ವಾರ ಬೀಸಿದ ಬಿರುಗಾಳಿ ಮಳೆಗೆ ಇಲ್ಲಿನ 15 ಮನೆಗಳ ತಗಡಿನ ಮೇಲ್ಚಾವಣಿ ಹಾರಿ ಹೋಗಿವೆ. ಹಿಂದಿನ ವರ್ಷ 20ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಬಂದು ಸಮಸ್ಯೆ ನೋಡಿದರೂ ಪರಿಹಾರ ಬಂದಿಲ್ಲ’ ಎಂದು ನಿವಾಸಿಗಳಾದ ಪಿ. ಸಹೂದ್ ಸಾಬ್, ಮಣೆಗಾರ ಕೊಟ್ರೇಶ್ ದೂರಿದ್ದಾರೆ.

*
ಹೊಸದಾಗಿ ಬಂದಿರುವೆ ಅಲ್ಲಿನ ಸಮಸ್ಯೆ ಗೊತ್ತಿಲ್ಲ. ಪರಿಶೀಲಿಸಿ ಪರಿಹಾರ ಕಾರ್ಯ ಕೈಗೊಳ್ಳುತ್ತೇನೆ.
-ಪ್ರತಿಭಾ,ತಹಶೀಲ್ದಾರ್, ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT