ಬುಧವಾರ, ಫೆಬ್ರವರಿ 26, 2020
19 °C

ನಗರದಲ್ಲಿ ಸಮಬಲ, ಗ್ರಾಮೀಣದಲ್ಲಿ ಬಿಜೆಪಿಗೆ ಒಲವು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಒಟ್ಟಾರೆ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ನಗರ ಹಾಗೂ ಗ್ರಾಮೀಣ ಪ್ರದೇಶದ ಮತದಾರರು ಭಿನ್ನ ರೀತಿಯಲ್ಲಿ ಅವರ ಹಕ್ಕು ಚಲಾಯಿಸಿರುವುದು ಗೊತ್ತಾಗುತ್ತದೆ.

ನಗರ ಪ್ರದೇಶದವರ ಮತಗಳು ಹೆಚ್ಚು ಕಮ್ಮಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸಮನಾಗಿ ಹಂಚಿ ಹೋಗಿವೆ. ಆದರೆ, ಕ್ಷೇತ್ರದ ಗ್ರಾಮೀಣ ಭಾಗದ ಮತದಾರರು ಬಿಜೆಪಿಗೆ ಹೆಚ್ಚಿನ ಒಲವು ತೋರಿಸಿರುವುದು ಫಲಿತಾಂಶದಿಂದ ತಿಳಿದು ಬರುತ್ತದೆ.

ಅದಕ್ಕೆ ಅಪವಾದವೆಂಬಂತೆ ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಬೆನಕಾಪುರ, ಮಲಪನಗುಡಿಯ 216ನೇ ಮತಗಟ್ಟೆ, ಹೊಸಮಲಪನಗುಡಿಯ 221ನೇ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಸಮಬಲದ ಪೈಪೋಟಿ ನೀಡಿದರೆ, ರಾಜಪುರದ 197ನೇ ಮತಗಟ್ಟೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ಅಧಿಕ ಮತಗಳು ಬಿದ್ದಿವೆ ಎನ್ನುವುದು ಕೂಡ ಗಮನಾರ್ಹ.

ಒಟ್ಟು 247 ಮತಗಟ್ಟೆಗಳ ಪೈಕಿ 164 ನಗರ ಪ್ರದೇಶಕ್ಕೆ ಸೇರಿದರೆ, ಮಿಕ್ಕುಳಿದ ಮತಗಟ್ಟೆಗಳು ಗ್ರಾಮೀಣ ಭಾಗಕ್ಕೆ ಸೇರುತ್ತವೆ. ಹಂಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ 11,357 ಮತಗಳು ಬಿದ್ದರೆ, ಕಾಂಗ್ರೆಸ್‌ಗೆ 6,586 ಮತಗಳು ಬಿದ್ದಿವೆ. ಈ ಕ್ಷೇತ್ರವನ್ನು ಶಾಸಕ ಆನಂದ್‌ ಸಿಂಗ್‌ ಅವರ ಸಹೋದರ, ಕಾಂಗ್ರೆಸ್ಸಿನ ಪ್ರವೀಣ್‌ ಸಿಂಗ್‌ ಪ್ರತಿನಿಧಿಸುತ್ತಾರೆ. ಆದರೆ, ಕಾಂಗ್ರೆಸ್‌ಗೆ ಹೆಚ್ಚಿನ ಮತಗಳನ್ನು ತಂದುಕೊಡುವಲ್ಲಿ ಅವರು ವಿಫಲರಾಗಿದ್ದಾರೆ.

ಇನ್ನೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರವಾದ ಪಾಪಿನಾಯಕನಹಳ್ಳಿಯಲ್ಲೂ ಬಿಜೆಪಿ, ಕಾಂಗ್ರೆಸ್‌ ಅನ್ನು ಹಿಂದಿಕ್ಕಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ 6,098 ಅಧಿಕ ಮತಗಳನ್ನು ಪಡೆದಿದೆ. ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಬಿಜೆಪಿ ಪಾರಮ್ಯ ಮೆರೆದಿದೆ.

‘ಆನಂದ್‌ ಸಿಂಗ್‌ ಅವರೇ ಉದ್ದೇಶಪೂರ್ವಕವಾಗಿ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಅವರ ಅವಧಿಯಲ್ಲೇ ಅದು ಬಂದ್‌ ಆಗಿದೆ. ರೈತರಿಗಾಗಿ ಅವರು ಏನೂ ಮಾಡಿಲ್ಲ’ ಎಂದು ವಿರೋಧಿಗಳು ಟೀಕಾಪ್ರಹಾರ ಮಾಡಿದ್ದರು. ಕಬ್ಬು ಬೆಳೆಗಾರರಲ್ಲೂ ಅಸಮಾಧಾನವಿತ್ತು. ಚುನಾವಣೆಯಲ್ಲಿ ಈ ವಿಷಯವೇ ಆನಂದ್‌ ಸಿಂಗ್‌ ಅವರಿಗೆ ಮುಳುವಾಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ, ಹಾಗಾಗಲಿಲ್ಲ. ಬದಲಾಗಿ ಸಿಂಗ್‌ ಅವರನ್ನೇ ಗ್ರಾಮೀಣ ಪ್ರದೇಶದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಅದೊಂದು ವಿಷಯವೇ ಅಲ್ಲ ಎಂಬುದನ್ನು ಈ ಮೂಲಕ ತೋರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು