ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಬೆಂಬಲಿಗರಲ್ಲಿ ಗರಿಗೆದರಿದ ಆಸೆ

ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಜಿಲ್ಲೆಯ ಶಾಸಕರ ಪೈಪೋಟಿ
Last Updated 22 ಮೇ 2018, 10:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅತ್ತ ರಾಜಧಾನಿಯಲ್ಲಿ ಜೆಡಿಎಸ್, ಕಾಂಗ್ರೆಸ್ ವರಿಷ್ಠರ ನಡುವೆ ಮೈತ್ರಿ ಸರ್ಕಾರದ ಸಂಪುಟ ರಚನೆ ವಿಚಾರವಾಗಿ ಕರಸತ್ತು ನಡೆದರೆ, ಇತ್ತ ಜಿಲ್ಲೆಯಲ್ಲಿ ಶಾಸಕರ ಬೆಂಬಲಿಗರಲ್ಲಿ ತಮ್ಮ ನಾಯಕರು ಹೊಸ ಸರ್ಕಾರದಲ್ಲಿ ಸಚಿವರಾಗುತ್ತಾರೆ ಎಂಬ ಆಸೆಗಳು ಗರಿಗೆದರಿ, ಅನೇಕ ವದಂತಿಗಳನ್ನು ಹುಟ್ಟು ಹಾಕುತ್ತಿವೆ.

ಮೈತ್ರಿ ಸರ್ಕಾರದಲ್ಲಿ ಯಾರಿಗೆಲ್ಲ ಮಂತ್ರಿ ಭಾಗ್ಯ ದೊರೆಯಲಿದೆ ಎನ್ನುವುದು ಲೆಕ್ಕಾಚಾರ ಸದ್ಯ ಜಿಲ್ಲೆಯ ರಾಜಕೀಯ ವಲಯದಲ್ಲಿ ಸದ್ಯ ಜೋರಾಗಿ ನಡೆದಿದೆ. ಆ ಪೈಕಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರ ಹೆಸರು ಮುಂಚೂಣಿಯಲ್ಲಿವೆ.

ಸತತವಾಗಿ ಐದು ಬಾರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲೆ ಬರೆದಿರುವ ಶಿವಶಂಕರರೆಡ್ಡಿ ಅವರು ಹೆಸರು ತುಸು ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಅವರ ಹಿರಿತನಕ್ಕೆ ತಕ್ಕ ಬೆಲೆ ಈವರೆಗೆ ಅವರಿಗೆ ಪಕ್ಷದಲ್ಲಿ ದೊರೆತಿಲ್ಲ ಎನ್ನುವ ಬೇಸರ ಅವರ ಬೆಂಬಲಿಗರು, ಆಪ್ತರಲ್ಲಿ ಆಕ್ರೋಶ ಮಡುಗಟ್ಟಿಸಿದ್ದು, ಹೀಗಾಗಿ ಅವರ ಪರವಾಗಿ ಲಾಬಿ ಜೋರಾಗಿಯೇ ನಡೆದಿದೆ ಎನ್ನಲಾಗಿದೆ.

ಈವರೆಗೆ ಶಿಡ್ಲಘಟ್ಟ ಕ್ಷೇತ್ರದಲ್ಲಿ 9 ವಿಧಾನಸಭೆ ಚುನಾವಣೆ ಎದುರಿಸಿರುವ ಹಿರಿಯ ರಾಜಕಾರಣಿ, ಮಾಜಿ ಸಚಿವರಾಗಿರುವ ವಿ.ಮುನಿಯಪ್ಪ ಅವರು ಹೊಸ ಇನ್ನಿಂಗ್ಸ್‌ನಲ್ಲಿ ಮತ್ತೊಂದು ಸುತ್ತಿನ ಮಂತ್ರಿಗಿರಿಗೆ ತಮ್ಮದೇ ಆದ ರಾಜಕೀಯ ಸಂಬಂಧಗಳನ್ನು ಬಳಸಿ ತೆರೆಮರೆಯಲ್ಲಿ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಅದಕ್ಕಾಗಿ ಅವರು ತೀವ್ರ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇವರ ನಡುವೆಯೇ ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಬೆಂಬಲಿಗರದಲ್ಲಿ ಹೊಸ ಆಸೆ ಚಿಗುರೊಡೆದಿದೆ. ನಮ್ಮ ವರಿಷ್ಠ ನಾಯಕನೇ ಮುಖ್ಯಮಂತ್ರಿಯಾಗಿರುವ ಕಾರಣ ನಮ್ಮ ಶಾಸಕರ ಮೇಲೆ ಅವರ ಕೃಪಾಕಟಾಕ್ಷ ತೋರಬಹುದು ಎಂಬ ಆಶಾಭಾವನೆ ವ್ಯಕ್ತವಾಗುತ್ತಿದೆ.

ಎಸ್.ಎಂ.ಕೃಷ್ಣ ಅವರ ಸಚಿವ ಸಂಪುಟದಲ್ಲಿ 1999ರಿಂದ 2004ರ ವರೆಗೆ ವಿ.ಮುನಿಯಪ್ಪ ಅವರು ಗಣಿ ಮತ್ತು ಭೂವಿಜ್ಞಾನ ಸಚಿವರು ಮತ್ತು ಅವಿಭಜಿತ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅದಾಗಿ ಕೆಲ ವರ್ಷಗಳಲ್ಲೇ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡಿತು. ಈವರೆಗೆ ಸುಮಾರು 14 ವರ್ಷಗಳಿಂದ ಈ ಭಾಗದ ಶಾಸಕರಿಗೆ ಸಚಿವರಾಗುವ ‘ಯೋಗ’ ಕೂಡಿ ಬಂದಿಲ್ಲ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಸಾಕಷ್ಟು ‘ನಕಲಿ’ ಸಚಿವ ಸಂಪುಟದ ಪಟ್ಟಿಗಳು ಹರಿದಾಡುತ್ತಿದ್ದು, ಅವುಗಳನ್ನು ನೋಡಿದಾಗಲೆಲ್ಲ ಆಯಾ ಶಾಸಕರ ಆಪ್ತರ ಮೊಗದಲ್ಲಿ ಹೊಸ ಕಳೆ ಕಾಣಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಯಾರಿಗೆಲ್ಲ ಸಚಿರಾಗುವ ಭಾಗ್ಯ ಲಭಿಸಲಿದೆ ಎನ್ನುವುದು ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT