ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಕೊಡದ ಅಧಿಕಾರಿಗಳ ವಿರುದ್ಧ ಗರಂ

ಇಲಾಖೆಯ ಪ್ರಗತಿ ವರದಿಯೊಂದಿಗೆ ಕಡ್ಡಾಯ ಹಾಜರಾತಿಗೆ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ
Last Updated 5 ಆಗಸ್ಟ್ 2019, 16:11 IST
ಅಕ್ಷರ ಗಾತ್ರ

ಹೊಸಪೇಟೆ: ಇಲಾಖೆಯ ಪ್ರಗತಿ ಕುರಿತು ವರದಿ ಕೊಡದ ಅಧಿಕಾರಿಗಳ ವಿರುದ್ಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ. ಶ್ರೀಕುಮಾರ ಅವರು ಸೋಮವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರ ವಿರುದ್ಧ ಗರಂ ಆದರು.

ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಡ್ತಿ ಪಡೆದ ನಂತರ ಶ್ರೀಕುಮಾರ ಅವರು ನಡೆಸುತ್ತಿರುವ ಮೊದಲ ಸಭೆ ಇದಾಗಿದ್ದು, ಕೆಲಸದ ಬಗ್ಗೆ ಉದಾಸೀನ ತೋರಿದರೆ ಸಹಿಸುವುದಿಲ್ಲ ಎಂದು ಕಠಿಣ ಸಂದೇಶ ರವಾನಿಸಿದರು.

ಮೀನುಗಾರಿಕೆ ಇಲಾಖೆ, ಭೂಸೇನಾ ನಿಗಮದ ಅಧಿಕಾರಿಗಳು ಅವರ ಇಲಾಖೆಗೆ ಸಂಬಂಧಿಸಿದ ವರದಿ ಇಲ್ಲದೆ ಸಭೆಗೆ ಬಂದಿದ್ದರು. ಅದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶ್ರೀಕುಮಾರ, ‘ನಿಮ್ಮ ಇಲಾಖೆಯ ಪ್ರಗತಿ ವರದಿ ತರದೇ ಸಭೆಗೆ ಬಂದರೆ ಏನು ಪ್ರಯೋಜನ. ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಮಾಸಿಕ ಪ್ರಗತಿ ವರದಿ ಸಿದ್ಧಪಡಿಸಿಕೊಂಡು ಬರಬೇಕು’ ಎಂದು ತಾಕೀತು ಮಾಡಿದರು.

‘ನಮ್ಮ ಸಭೆಯ ಹೆಸರೇ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಎಂದಿದೆ. ಎಲ್ಲ ಇಲಾಖೆಗಳ ಪ್ರಗತಿ ಕುರಿತು ಸಮಾಲೋಚನೆ ನಡೆಸಿ, ಮುಂದುವರೆಯುವುದು ಸಭೆಯ ಮುಖ್ಯ ಉದ್ದೇಶ. ಆದರೆ, ವರದಿಯೇ ಇಲ್ಲವೆಂದರೆ ಆ ಕುರಿತು ಚರ್ಚೆ ಮಾಡಲು ಆಗುತ್ತದೆಯೇ. ವಿನಾಕಾರಣ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ಎಲ್ಲರೂ ಜವಾಬ್ದಾರಿ ಅರಿತುಕೊಂಡು ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.

‘ಈ ಹಿಂದಿನ ಸಭೆಯಲ್ಲಿ ನಿರ್ದೇಶನ ಕೊಟ್ಟರೂ ಕೆಲವು ಅಧಿಕಾರಿಗಳು ಪದೇ ಪದೇ ಸಭೆಗೆ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದೇ ಚಾಳಿ ಮುಂದುವರೆಸಿದರೆ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಅದಕ್ಕೆ ದನಿಗೂಡಿಸಿ ಮಾತನಾಡಿದ ಅಧ್ಯಕ್ಷೆ ಜೋಗದ ನೀಲಮ್ಮ, ‘ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಅವರ ಕಾರ್ಯವೈಖರಿ ಬದಲಿಸಿಕೊಳ್ಳುತ್ತಿಲ್ಲ. ಶಿಸ್ತು ಕ್ರಮ ಕೈಗೊಂಡರಷ್ಟೇ ಸುಧಾರಿಸಬಹುದು. ಕೆಲವರು ಸಭೆಗೆ ಬರುವುದಿಲ್ಲ. ಬಂದವರು ವರದಿ ಇಲ್ಲದೆ ಕಾಲಹರಣ ಮಾಡಲು ಬಂದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಷಣ್ಮುಖಪ್ಪ ಮಾತನಾಡಿ, ‘ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕಂಪ್ಲಿಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಿದೆ. ನಮ್ಮ ಭಾಗಕ್ಕೆ ಎಷ್ಟು ನೀರು ಸಿಗುತ್ತಿದೆ ಎಂದು ಯಾರನ್ನೂ ಕೇಳಿ ತಿಳಿದುಕೊಳ್ಳಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ಪದೇ ಪದೇ ಸಭೆಗೆ ಗೈರು ಹಾಜರಾಗುತ್ತಾರೆ’ ಎಂದು ಅಸಮಾಧಾನ ಹೊರಹಾಕಿದರು.

ಮಾಹಿತಿ ನೀಡದ ಅಧಿಕಾರಿಗಳು:‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ಕೊಡಲಾಗುತ್ತದೆ. ಆದರೆ, ಜನಪ್ರತಿನಿಧಿಗಳಾದ ನಮಗೆ ಅಧಿಕಾರಿಗಳು ವಿಷಯ ತಿಳಿಸುವುದಿಲ್ಲ’ ಎಂದು ಕೆ. ಷಣ್ಮುಖಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಸರ್ಕಾರಿ ಕಾಮಗಾರಿಗಳನ್ನು ಚಾಲನೆ ಕೊಡಬೇಕಾದರೆ ಶಿಷ್ಟಾಚಾರದ ಪ್ರಕಾರ, ಆ ವ್ಯಾಪ್ತಿಯ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ’ ಎಂದರು. ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT