ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಗಳು ಬದಲಾದರೂ ತಪ್ಪದ ‘ಸಾರಥಿ’ಗಳ ಸಂಕಟ

ಚುನಾವಣೆ ಬಂದಾಗಲಷ್ಟೇ ನೆನಪಾಗುವ ಆಟೊ ಚಾಲಕರು * ಹೋರಾಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳು
Last Updated 12 ಏಪ್ರಿಲ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ಜನಸೇವೆಯ ಪ್ರತೀಕ ಖಾಕಿ. ಅದನ್ನು ತೊಟ್ಟು ರಾಜಧಾನಿಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾರಿಗೆ ವ್ಯವಸ್ಥೆ ಒದಗಿಸುತ್ತಿರುವವರು ಆಟೊ ಚಾಲಕರು. ಕೈ ಮಾಡಿದಲ್ಲಿ ನಿಲ್ಲುವ, ಗರ್ಭಿಣಿಯರಿಗೆ ಉಚಿತ ಸೇವೆ ಒದಗಿಸುವ, ನಡುರಾತ್ರಿಯಲ್ಲಿ ಯಾರೇ ಕರೆದರೂ ಸೇವೆಗೆ ಸನ್ನದ್ಧರಾಗುವ ಆಟೊ ಚಾಲಕರ ವೈಯಕ್ತಿಕ ಜೀವನವು ಬಡತನದಲ್ಲೇ ಬೇಯುತ್ತಿದೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಚಾಲಕರ ಸಂಕಟ ಮಾತ್ರ ತಪ್ಪುತ್ತಿಲ್ಲ.

ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ವಾಹನಗಳ ಸಂಖ್ಯೆಯೂ ಏರಿಕೆ ಆಗುತ್ತಿದೆ. ನಿತ್ಯವೂ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 1.25 ಲಕ್ಷ (2018ರ ಫೆಬ್ರುವರಿವರೆಗೆ) ಆಟೊಗಳಿವೆ. 2.50 ಲಕ್ಷದಷ್ಟು ಚಾಲಕರಿದ್ದಾರೆ. ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಅವರೆಲ್ಲ ಆಟೊ ಓಡಿಸುತ್ತಿದ್ದಾರೆ.

ಒಂದು ಕಾಲದಲ್ಲಿ ನಗರದಲ್ಲಿ ಸುತ್ತಾಡಲು ಆಟೊನೇ ಉತ್ತಮ ಎಂದು ಜನ ಹೇಳುತ್ತಿದ್ದರು. ಇಂದಿನ ಸ್ಮಾರ್ಟ್‌ಫೋನ್‌ ಯುಗದಲ್ಲಿ ಆಟೊಗೆ ನೀಡುವ ಪ್ರಯಾಣ ದರದಲ್ಲೇ ಕಾರಿನಲ್ಲಿ ಹೋಗಲು ಅವಕಾಶವಿದೆ. ಇದರಿಂದ ಆಟೊ ಪ್ರಯಾಣಿಕರ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದ್ದು, ಈ ಬಗ್ಗೆ ಚಾಲಕರಲ್ಲಿ ಆತಂಕ ಇದೆ.

ಒಬ್ಬ ಆಟೊ ಚಾಲಕನ ದುಡಿಮೆ ನಂಬಿ ಕನಿಷ್ಠ ಇಬ್ಬರು ಹಾಗೂ ಗರಿಷ್ಠ 6 ಮಂದಿ ಜೀವನ ನಡೆಸುತ್ತಿದ್ದಾರೆ. ದಿನದ 24 ಗಂಟೆ ದುಡಿದರೂ ಬದುಕು ಸಾಗಿಸುವುದು ಕಷ್ಟ. ಈ ಕಷ್ಟವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳು, ಚುನಾವಣೆ ವೇಳೆ ಸಾಲು ಸಾಲು ಭರವಸೆ ನೀಡುತ್ತವೆ. ಮುಖಂಡರಂತೂ ‘ಚಾಲಕನೇ ನನ್ನ ಸಹೋದರ’ ಎಂದು ಆಟೊದಲ್ಲೇ ನಗರ ಸುತ್ತಾಡುತ್ತಾರೆ. ಚುನಾವಣೆ ಮುಗಿದ ನಂತರ, ಆಟೊ ಮರೆತು ‘ಬೆನ್ಜ್‌’ ಕಾರನ್ನು ಹತ್ತಿ ಹೋಗುತ್ತಾರೆ.

ಅನಕ್ಷರಸ್ಥರಿಂದ ಹಿಡಿದು ಉನ್ನತ ವ್ಯಾಸಂಗ ಮಾಡಿರುವವರವರೆಗೆ, ಎಲ್ಲಿಯೂ ಕೆಲಸ ಸಿಗದಿದ್ದಾಗ ಆಟೊ ಓಡಿಸುವುದನ್ನು ಉದ್ಯೋಗವನ್ನಾಗಿ ಆರಿಸಿಕೊಂಡವರಿದ್ದಾರೆ. ಓಲಾ, ಉಬರ್‌ ಕಂಪನಿ ಕ್ಯಾಬ್‌ಗಳ ಜತೆಗೆ ಪೈಪೋಟಿ ನಡೆಸಿ ಸಂಪಾದನೆ ಮಾಡಬೇಕಾದ ಸಂದಿಗ್ಧ ಸ್ಥಿತಿ ಅವರದ್ದಾಗಿದೆ. ಕ್ಯಾಬ್‌ಗಳು ಬರುವುದಕ್ಕೂ ಮುನ್ನ ಒಬ್ಬ ಚಾಲಕ ದಿನಕ್ಕೆ ₹1,000ರಿಂದ ₹1,500 ಸಂಪಾದಿಸುತ್ತಿದ್ದ. ಈಗ ಶೇ 50ರಷ್ಟು ಸಂಪಾದನೆ ಕಡಿಮೆ ಆಗಿದೆ.

ದಿನದ ದುಡಿಮೆಯಲ್ಲೇ ಆಟೊ ನಿರ್ವಹಣೆ, ಮನೆಯ ಬಾಡಿಗೆ, ಕುಟುಂಬದ ನಿರ್ವಹಣೆ, ಮಕ್ಕಳ ಶೈಕ್ಷಣಿಕ ಖರ್ಚು ಹಾಗೂ ಕುಟುಂಬದವರ ಆರೋಗ್ಯ ವೆಚ್ಚ ನೋಡಿಕೊಳ್ಳಬೇಕು. ಸಾಲ ಕೊಟ್ಟು ಆಟೊ ಖರೀದಿಸುವ ಚಾಲಕ, ಅದರ ಮರುಪಾವತಿಯಲ್ಲೇ ಸುಸ್ತಾಗುತ್ತಿದ್ದಾನೆ.

ಸ್ವಂತ ಸೂರಿಲ್ಲ: ಬಹುಪಾಲು ಆಟೊ ಚಾಲಕರು ಹಾಗೂ ಅವರ ಕುಟುಂಬಕ್ಕೆ ಇಂದಿಗೂ ಸ್ವಂತ ಸೂರಿಲ್ಲ. ಬಾಡಿಗೆ ಮನೆಯಲ್ಲೇ ವಾಸವಿದ್ದಾರೆ. ಉಳಿದೆಲ್ಲ ಸವಲತ್ತಿಗಿಂತ ಸ್ವಂತ ಸೂರು ಸಿಕ್ಕರೆ ನೆಮ್ಮದಿಯ ಜೀವನ ನಡೆಸಬಹುದು ಎನ್ನುತ್ತಾರೆ ಆಟೊ ಚಾಲಕರು.

ಸಂಘ–ಸಂಸ್ಥೆಗಳನ್ನು ಕಟ್ಟಿಕೊಂಡು ಚಾಲಕರು ಸ್ವಂತ ಸೂರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ, ‘ಆಟೊ ಚಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸುತ್ತೇವೆ’ ಎಂಬ ಅಂಶವನ್ನೇ ಹೈಲೈಟ್‌ ಮಾಡಿಕೊಂಡು ಪ್ರಚಾರ ಮಾಡುತ್ತವೆ. ಆ ಭರವಸೆಗಳು ಮಾತ್ರ ಈಡೇರುತ್ತಿಲ್ಲ. ಇದುವರೆಗೂ ಒಬ್ಬ ಚಾಲಕನಿಗೂ ಸ್ವಂತ ಸೂರು ಸಿಗದಿರುವುದು ದುರಂತವೇ ಸರಿ.

‘ಚಾಲನಾ ಪರವಾನಗಿ ಆಧರಿಸಿ ಪಡಿತರ ಚೀಟಿ ನೀಡಬೇಕು. ಆರೋಗ್ಯ ತಪಾಸಣೆಗಾಗಿ ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. ಯಶಸ್ವಿನಿ ಯೋಜನೆಯಡಿ ಸವಲತ್ತು ಸಿಗುವಂತೆ ಮಾಡಬೇಕು. ಆಟೊ ಖರೀದಿಯ ಮೇಲೆ ಶೇ 30ರಷ್ಟು ಸಹಾಯಧನ ನೀಡಬೇಕು’ ಎಂಬುದು ಚಾಲಕರ ಪ್ರಮುಖ ಬೇಡಿಕೆಗಳು.

ನಕಲಿ ಪರ್ಮಿಟ್‌ ಹಾವಳಿ: ನಗರದಲ್ಲಿ ನಕಲಿ ಪರ್ಮಿಟ್‌ಗಳ ಹಾವಳಿ ಜೋರಾಗಿದೆ. ಇದರಿಂದ ಅಸಲಿ ಪರ್ಮಿಟ್‌ ಹೊಂದಿರುವ ಚಾಲಕರ ದುಡಿಮೆಗೆ ಪೆಟ್ಟು ಬಿದ್ದಿದೆ. ನಕಲಿ ಪರ್ಮಿಟ್‌ ವಿತರಣೆಯಾಗಲು ಸಾರಿಗೆ ಅಧಿಕಾರಿಗಳ ಲಂಚಗುಳಿತನ ಕಾರಣ ಎಂಬ ಆರೋಪ ಇದೆ.

ಆಟೊ ತಯಾರಿಕಾ ಕಂಪನಿಗಳು ನೀಡುವ ಲಂಚದ ಆಮಿಷಕ್ಕೆ ಒಳಗಾಗುವ ಅಧಿಕಾರಿಗಳು, ಬೇಕಾಬಿಟ್ಟಿಯಾಗಿ ಪರ್ಮಿಟ್‌ಗಳನ್ನು ಹಂಚಿಕೆ ಮಾಡಿದ್ದಾರೆ. ಇಂಥ ನಕಲಿ ಪರ್ಮಿಟ್‌ ಹೊಂದಿರುವ 75 ಸಾವಿರ ಆಟೊಗಳು ನಗರದಲ್ಲಿರುವುದನ್ನು ಸಾರಿಗೆ ಅಧಿಕಾರಿಗಳೇ ಪತ್ತೆ ಹಚ್ಚಿದ್ದಾರೆ. ನಕಲಿ ಪರ್ಮಿಟ್ ಹಾವಳಿ ತಡೆಗೆ ‘ಇ–ಪರ್ಮಿಟ್‌’ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ.

‘ಒಬ್ಬರಿಗೆ ಒಂದೇ ಪರ್ಮಿಟ್‌’ ಎಂಬ ಪ್ರಮುಖ ಬೇಡಿಕೆ ಇಟ್ಟುಕೊಂಡು ಆಟೊ ಚಾಲಕರ ಒಕ್ಕೂಟಗಳು ಹೋರಾಟ ಮಾಡುತ್ತಲೇ ಇವೆ. ಈ ಬೇಡಿಕೆ ಈಡೇರಿಸಲು ಯಾವುದೇ ಸರ್ಕಾರವೂ ಕ್ರಮ ಕೈಗೊಂಡಿಲ್ಲ.

ಚಾಲಕರನ್ನು ಕಿತ್ತು ತಿನ್ನುವ ಮಧ್ಯವರ್ತಿಗಳು: ಹೊಸ ಸರ್ಕಾರ ಬಂದಾಗಲೆಲ್ಲ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳ ದಂಡೇ ಇದೆ. ಆರ್‌ಟಿಒ ಕಚೇರಿಗೆ ಬರುವ ವ್ಯಕ್ತಿ, ಮಧ್ಯವರ್ತಿಗಳ ಮೂಲಕವೇ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂಬ ಅನಧಿಕೃತ ನಿಯಮ ಜಾರಿಯಲ್ಲಿದೆ. ಇಂಥ ಮಧ್ಯವರ್ತಿಗಳು, ಆಟೊ ಚಾಲಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.

ಆಟೊಗಳ ಸಾಮರ್ಥ್ಯ ಪ್ರಮಾಣ ಪತ್ರ, ಚಾಲನಾ ಪರವಾನಗಿ ನವೀಕರಣಕ್ಕಾಗಿ ಕಚೇರಿಗೆ ಹೋದರೆ ಸಿಬ್ಬಂದಿ ಕ್ಯಾರೆ ಎನ್ನುವುದಿಲ್ಲ. ಮಧ್ಯವರ್ತಿ ಮೂಲಕ ಹೋದರಷ್ಟೇ ಅರ್ಧ ಗಂಟೆಯಲ್ಲಿ ಕೆಲಸ ಆಗುತ್ತದೆ. ಅಕ್ರಮವಾಗಿ ಗಳಿಸಿದ ಹಣದಿಂದಲೇ ಇಂದು ಸಾಕಷ್ಟು ಮಧ್ಯವರ್ತಿಗಳು ಐಶಾರಾಮಿ ಬಂಗಲೆ ಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಆಟೊ ಚಾಲಕರು.

ಸಾರಿಗೆ ಇಲಾಖೆಯ ಅಧಿಕಾರಿಗಳ ಕಚೇರಿ ಹಾಗೂ ಆರ್‌ಟಿಒ ಕಚೇರಿಗಳಲ್ಲಿ ಆಟೊ ಚಾಲಕರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಬೇಕು. ಅಲ್ಲಿ ಚಾಲಕ ಸ್ನೇಹಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಜೈಲಿಗೆ ಕಳುಹಿಸಬೇಕು. ಅವಾಗಲೇ ಬಡ ಚಾಲಕರು ಬದುಕಲು ಸಾಧ್ಯವಾಗುತ್ತದೆ.

ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಕೊರತೆ: ರಾಜ್ಯದ ವಾಹನಗಳ ನಿರ್ವಹಣೆ ಮಾಡುವ ಅಧಿಕಾರ ಇರುವುದು ಸಾರಿಗೆ ಇಲಾಖೆಗೆ ಮಾತ್ರ. ಅಂಥ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಕೊರತೆ ಇದೆ. ಇದರಿಂದ ಆಟೊ ಚಾಲಕರಿಗೆ ಸಿಗಬೇಕಾದ ಸಲವತ್ತುಗಳು ಸಿಗುತ್ತಿಲ್ಲ ಎಂಬ ಮಾತಿದೆ.

ಯಾವುದೇ ಸರ್ಕಾರ ಬಂದರೂ ಸಚಿವರಾಗಲಿ ಅಥವಾ ಶಾಸಕರಾಗಲಿ ಹೆಚ್ಚಾಗಿ ಚಾಲಕರ ಬಳಿ ಹೋಗಿ ಕಷ್ಟ–ಸುಖ ವಿಚಾರಿಸುವುದಿಲ್ಲ. ಬಹುಪಾಲು ಚಾಲಕರು ಸಹ ಅವರ ಬಳಿ ಹೋಗುವ ಮನಸ್ಸು ಮಾಡುವುದಿಲ್ಲ. ಆದರೆ, ಅಧಿಕಾರಿಗಳ ಬಳಿ ಹೋಗಿ ಅಳಲು ತೋಡಿಕೊಳ್ಳುತ್ತಾರೆ. ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳು ಇದ್ದರೆ ಅವರ ಸಮಸ್ಯೆಗಳಿಗೆ ಬೇಗನೇ ಪರಿಹಾರ ಸಿಗುತ್ತದೆ.

10 ಆಟೊದಿಂದ ಶುರುವಾಗಿದ್ದ ಪ್ರಯಾಣ

ಜಪಾನ್‌ನಲ್ಲಿ 1934ರಲ್ಲಿ ಮೊದಲ ಬಾರಿಗೆ ಆಟೊ ರಿಕ್ಷಾ ಪರಿಚಯಿಸಲಾಯಿತು. 1947ರಲ್ಲಿ ಅಭಿವೃದ್ಧಿಪಡಿಸಲಾದ ‘ಪಿಯಾಜಿಯೋ’ ಹೆಸರಿನ 10 ಆಟೊಗಳನ್ನು 1950ರಲ್ಲಿ ವಿದೇಶಿ ಕಂಪನಿಯೊಂದು ಬೆಂಗಳೂರಿಗೆ ರಫ್ತು ಮಾಡಿತ್ತು. ಅದುವರೆಗೂ ನಗರದಲ್ಲಿ ಜಟಕಾ ಬಂಡಿಗಳೇ ಸಾರಿಗೆಗೆ ಆಧಾರವಾಗಿದ್ದವು.

‘ಪಿಯಾಜಿಯೋ’ ಆಟೊ ನೋಡಿದ್ದ ಕಾರ್ಪೊರೇಷನ್‌ (ಆಗ ಸಾರಿಗೆ ಇಲಾಖೆ ಇರಲಿಲ್ಲ), 10 ಮಂದಿ ಚಾಲಕರಿಗೆ ಪರವಾನಗಿ ಕೊಟ್ಟು ಉಚಿತವಾಗಿ ಆಟೊ ನೀಡಿತ್ತು. ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಿಂದಲೇ ಮೊದಲ ಬಾರಿಗೆ ಆಟೊ ಸಂಚಾರ ಆರಂಭವಾಗಿತ್ತು. ಅಂದಿನಿಂದ ನಗರದಲ್ಲಿ ಶುರುವಾರ ಆಟೊಗಳ ಸವಾರಿ ಇಂದಿಗೂ ನಿಂತಿಲ್ಲ. ವರ್ಷದಿಂದ ವರ್ಷಕ್ಕೆ ಆಟೊ ಓಡಿಸುತ್ತಿರುವ ಚಾಲಕರ ಸಮಸ್ಯೆಗಳು ಹೆಚ್ಚುತ್ತಲೇ ಇದ್ದು, ಅದಕ್ಕೆ ‍ಪರಿಹಾರವೂ ಸಿಗುತ್ತಿಲ್ಲ.

ಒತ್ತಡಕ್ಕೆ ಸಿಲುಕಿ ಅಡ್ಡದಾರಿ

‘ಆಟೊ ಚಾಲಕರು ಕರೆದ ಕಡೆ ಬರುವುದಿಲ್ಲ. ಜಾಸ್ತಿ ಬಾಡಿಗೆ ಕೇಳುತ್ತಾರೆ‘ ಎಂದು ಪ್ರಯಾಣಿಕರು ದೂರುತ್ತಾರೆ. ಅಂಥ ಚಾಲಕರೂ ನಗರದಲ್ಲಿದ್ದಾರೆ. ಅವರ ಮಧ್ಯೆ ಪ್ರಾಮಾಣಿಕ ಚಾಲಕರೂ ಇರುವುದನ್ನು ಮರೆಯಬಾರದು.

ಆಟೊ ಚಾಲಕನಿಗೆ ದಿನದ ದುಡಿಮೆಯೇ ಆಧಾರ. ಸಾಲ ಮರುಪಾವತಿ, ಜೀವನ ನಿರ್ವಹಣೆಗಾಗಿ ಹಣ ಹೊಂದಿಸುವ ಒತ್ತಡದಲ್ಲಿ ಚಾಲಕರು, ಅಡ್ಡದಾರಿ ಮೂಲಕ ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಲು ಮುಂದಾಗುತ್ತಿದ್ದಾರೆ.

ರಾತ್ರಿ 7ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಮೀಟರ್‌ ಮೇಲೆ ಎರಡು ಪಟ್ಟು ಹಣ ಪಡೆಯುತ್ತಿರುವುದನ್ನು ಚಾಲಕರೇ ಒಪ್ಪಿಕೊಳ್ಳುತ್ತಾರೆ. ‘ನಾವ್ಯಾಕೆ ಈ ರೀತಿ ಮಾಡುತ್ತೇವೆ’ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎನ್ನುವ ಚಾಲಕರು, ‘ಸರ್ಕಾರದಿಂದ ನಮಗೆ ಸಿಗಬೇಕಾದ ಸವಲತ್ತು ಸಿಕ್ಕರೆ ಪ್ರಮಾಣಿಕವಾಗಿ ಜನರ ಸೇವೆ ಮಾಡುತ್ತೇವೆ. ಬ್ಯಾಂಕ್‌ನವರು ಹಾಗೂ ಅಧಿಕಾರಿಗಳು ನಮಗೆ ಮೋಸ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕ ರಸ್ತೆಗಳಲ್ಲಿ ನಿಂತು ಪೊಲೀಸರು, ಹಣ ಕೇಳುತ್ತಾರೆ. ಅವರಿಗೆ ಕೊಡಲು ಹಣ ಎಲ್ಲಿಂದ ತರಬೇಕು’ ಎಂದು ಪ್ರಶ್ನಿಸುತ್ತಾರೆ.

***

ಬೆಳಿಗ್ಗೆ ಮನೆ ಬಿಟ್ಟರೆ ರಾತ್ರಿಯೇ ಮನೆಗೆ ಹೋಗುತ್ತೇನೆ. ಆಟೊಗೆ ಗ್ಯಾಸ್‌ ಹಾಕಿಸಬೇಕು. ಕೆಟ್ಟರೆ ದುರಸ್ತಿ ಮಾಡಿಸಬೇಕು. ಮಧ್ಯಾಹ್ನ ಹೊರಗಡೆಯೇ ಊಟ. ನನ್ನ ಜೀವಕ್ಕೆ ಭದ್ರತೆ ಇಲ್ಲ. ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕು. ನಮ್ಮ ಜತೆಗಿದ್ದ ತಪ್ಪಿಗೆ ಕುಟುಂಬದವರು ಸಹ ಕಷ್ಟಪಡುತ್ತಿದ್ದಾರೆ.

–ಕೆಂಪೇಗೌಡ, ಆಟೊ ಚಾಲಕ


ನಮ್ಮನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಲಾಗಿದೆ. ಸತ್ತರೆ 2 ಲಕ್ಷ ಕೊಡುವ ಸೌಲಭ್ಯ ಇದೆ. ಅದನ್ನು ಪಡೆಯಲೂ ಲಂಚ ಕೊಡಬೇಕಾದ ಸ್ಥಿತಿ ಬಂದೊದಗಿದೆ. ಸತ್ತ ನಂತರ ಬರುವ ಆ ಹಣವನ್ನು ತೆಗೆದುಕೊಂಡು ಏನು ಮಾಡಬೇಕು?. ಬೆಂಗಳೂರಿನಲ್ಲಿ ಆಟೊ ನಿಲುಗಡೆಗೆ ನಿಲ್ದಾಣಗಳಿಲ್ಲ. ಪೊಲೀಸರ ಕಾಟವು ಹೆಚ್ಚಿದ್ದು, ನಮ್ಮಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಆರ್‌ಟಿಒಗಳ ವರ್ತನೆಯಿಂದ ಬೇಸತ್ತಿದ್ದೇವೆ. ಮುಂಬರುವ ಸರ್ಕಾರ, ನಮ್ಮ ಕಷ್ಟಗಳಿಗೆ ಸ್ಪಂದಿಸಬೇಕು

–ಕಾಂತರಾಜು, ಆಟೊ ಚಾಲಕ

ಆಟೊ ಚಾಲಕರಿಗಾಗಿ ಸರ್ಕಾರದ ವಿವಿಧ ಇಲಾಖೆಯಿಂದ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡುವಂತೆ ಒತ್ತಾಯಿಸಿದ್ದೇವೆ. ಅದಕ್ಕೆ ಹಿಂಬರಹ ಬಂದಿದೆ ಹೊರತು, ನಮ್ಮ ಬೇಡಿಕೆ ಈಡೇರಿಲ್ಲ. ಯಾವುದೇ ಸರ್ಕಾರ ಬಂದರೂ ಮನವಿ ಕೊಡುವುದು ತಪ್ಪುತ್ತಿಲ್ಲ. ಮುಂಬರುವ ದಿನಗಳಲ್ಲೂ ಚಾಲಕರನ್ನು ಒಗ್ಗಟ್ಟಾಗಿಸಿ ಹೋರಾಟ ಮಾಡುತ್ತೇವೆ

–ಸೋಮಶೇಖರ್‌, ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್‌ ಅಧ್ಯಕ್ಷ

***

ಬಡವರ ವಾಹನ ಆಟೊ. ಅದನ್ನು ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಒದಗಿಸಲು, ಆಟೊ ಖರೀದಿಗೆ ಸಬ್ಸಿಡಿಯಲ್ಲಿ ಸಾಲ ನೀಡಲು ‘ಆಟೊ ಚಾಲಕರ ಆಯೋಗ’ ರಚಿಸಲಿದ್ದೇವೆ. ಸ್ವಂತ ಸೂರು ಒದಗಿಸಲು ‘ಆಟೊ ಸಿ.ಟಿ’ ನಿರ್ಮಿಸಿ ಪ್ರತಿಯೊಬ್ಬ ಚಾಲಕರಿಗೆ ಉಚಿತವಾಗಿ ಮನೆಗಳನ್ನು ವಿತರಿಸಲಿದ್ದೇವೆ. ಇವುಗಳನ್ನು ನಮ್ಮ ಜೆಡಿಎಸ್‌ ಪಕ್ಷದ
ಪ್ರಣಾಳಿಕೆಯಲ್ಲೂ ಸೇರಿಸಲಿದ್ದೇವೆ

–ಟಿ.ಎ.ಶರವಣ, ವಿಧಾನ ಪರಿಷತ್‌ ಸದಸ್ಯ (ಜೆಡಿಎಸ್)

ನಮ್ಮ ಸರ್ಕಾರವಿದ್ದಾಗ ಪರಿಸರ ಸ್ನೇಹಿ ಆಟೊಗಳನ್ನು ಪರಿಚಯಿಸಿದ್ದೆವು. ಪರ್ಮಿಟ್‌ ಹೆಸರಿನಲ್ಲಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಿ, ಅಗತ್ಯವಿರುವ ಚಾಲಕರಿಗೆ ಪರ್ಮಿಟ್‌ ಸಿಗುವಂತೆ ಮಾಡಿದ್ದೆವು. ಬಿಬಿಎಂಪಿ ವತಿಯಿಂದ ಆರೋಗ್ಯ ಕಾರ್ಡ್‌ ನೀಡುವ ಯೋಜನೆ ರೂಪಿಸಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಆಟೊ ಚಾಲಕ ಹಾಗೂ ಅವರ ಕುಟುಂಬದವರಿಗಾಗಿ ಆರೋಗ್ಯ ಕಾರ್ಡ್‌ ನೀಡಲಿದ್ದೇವೆ. ಕೊಳೆಗೇರಿ ಹಾಗೂ ಹೌಸಿಂಗ್‌ ಬೋರ್ಡ್‌ ವತಿಯಿಂದ ನಿರ್ಮಿಸುವ ಸಮಚ್ಛಯಗಳಲ್ಲಿ ಚಾಲಕರಿಗೆ ಮನೆಗಳನ್ನು ನೀಡಲಿದ್ದೇವೆ. ಇದರಿಂದ ಚಾಲಕರಿಗೆ ಸ್ವಂತ ಸೂರು ಸಿಗಲಿದೆ.

–ಆರ್‌.ಅಶೋಕ, ಶಾಸಕ (ಬಿಜೆಪಿ)

ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ 2 ಸ್ಟ್ರೋಕ್ ಆಟೊಗಳಿಗೆ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳಲು ₹30 ಸಾವಿರ ಸಹಾಯಧನ ನೀಡಿದ್ದೇವೆ. ‘ಇ–ಪರ್ಮಿಟ್‌’ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ನಾವು ಮತ್ತೆ ಅಧಿಕಾರಕ್ಕೆ ಬಂದರೆ 10 ಲಕ್ಷ ಮನೆಗಳನ್ನು ನಿರ್ಮಿಸಲಿದ್ದೇವೆ. ಅಂಥ ಮನೆಗಳನ್ನು ಹಂಚಿಕೆ ಮಾಡುವಾಗ ಆಟೊ ಚಾಲಕರಿಗೆ ಆದ್ಯತೆ ನೀಡಲಿದ್ದೇವೆ

–ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ (ಕಾಂಗ್ರೆಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT