ಬೀದಿಗೆ ಬಂದ ಸಾರಿಗೆ ಸಂಸ್ಥೆ ಒಳಜಗಳ

7
ಮೇಲಧಿಕಾರಿ–ಕೆಳಹಂತದ ನೌಕರರ ನಡುವೆ ಮುಂದುವರಿದ ಶಿತಲ ಸಮರ

ಬೀದಿಗೆ ಬಂದ ಸಾರಿಗೆ ಸಂಸ್ಥೆ ಒಳಜಗಳ

Published:
Updated:
Deccan Herald

ಹೊಸಪೇಟೆ: ಒಳಗೊಳಗೆ ನಡೆಯುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಹೊಸಪೇಟೆ ಉಪವಿಭಾಗದಲ್ಲಿನ ಒಳಜಗಳ ಬೀದಿಗೆ ಬಂದಿದ್ದು, ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯ ದುಸ್ಥಿತಿ ನೋಡಿ ಜನ ಮಾತಾಡಿಕೊಳ್ಳುವಂತಾಗಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಮೊಹಮ್ಮದ್‌ ಫೈಜ್‌ ಹಾಗೂ ಕೆಳಹಂತದ ನೌಕರರ ನಡುವೆ 2016ರಿಂದಲೇ ಶಿತಲ ಸಮರ ಶುರುವಾಗಿತ್ತು. ಆಗೊಮ್ಮೆ ಈಗೊಮ್ಮೆ ಪರಸ್ಪರ ಆರೋಪ–ಪ್ರತ್ಯಾರೋಪ, ಪ್ರತಿಭಟನೆಗಳು ನಡೆಯುತ್ತಿದ್ದವು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ‘ಡಿ’ ದರ್ಜೆಯ ನೌಕರ ಸದಾಶಿವ ಎಂಬುವರು ಸೋಮವಾರ ಫೈಜ್‌ ನೀಡುತ್ತಿರುವ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ.

ವಿಷ ಸೇವನೆಗೂ ಮುನ್ನ ಸದಾಶಿವ ಅವರು ಮೂರು ಪುಟಗಳ ಮರಣ ಪತ್ರವನ್ನು ಬರೆದಿಟ್ಟಿದ್ದಾರೆ. ‘ಫೈಜ್‌ ಅವರು ಬಹಳ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರು. ಸಣ್ಣಪುಟ್ಟ ಕಾರಣಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಮಾತೆತ್ತಿದರೆ ಕೆಲಸದಿಂದ ತೆಗೆದು ಹಾಕುವ ಎಚ್ಚರಿಕೆ ನೀಡುತ್ತಿದ್ದರು. ಇದರಿಂದ ಬೇಸತ್ತು ಜೀವ ತ್ಯಜಿಸಲು ನಿರ್ಧರಿಸಿದ್ದೇನೆ’ ಎಂದು ಸದಾಶಿವ ಅವರು ಪತ್ರದಲ್ಲಿ ಬರೆದಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆ.ಎಸ್‌.ಆರ್‌.ಟಿ.ಸಿ. ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌, ಈ ಕುರಿತು ಸಾರಿಗೆ ಸಚಿವರು ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಫೈಜ್‌ ವಿರುದ್ಧ ದೂರು ಕೊಡಲು ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

‘ಹೊಸಪೇಟೆ ಉಪವಿಭಾಗಕ್ಕೆ ಅನೇಕ ಜನ ವಿಭಾಗೀಯ ನಿಯಂತ್ರಣಾಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ, ಫೈಜ್‌ ಅವರಂತಹ ದುರಹಂಕಾರಿ ಹಾಗೂ ಕೆಳಹಂತದ ನೌಕರರನ್ನು ಅಮಾನವೀಯವಾಗಿ ನಡೆಸಿಕೊಂಡ ವ್ಯಕ್ತಿಯನ್ನು ಕಂಡಿಲ್ಲ. ತಾನೂ ಹೇಳಿದ್ದೆ ಆಗಬೇಕು. ಇಲ್ಲದಿದ್ದರೆ ಹಟ ಸಾಧಿಸಿ ದ್ವೇಷ ಸಾಧಿಸುತ್ತಾರೆ’ ಎಂದು ಕೆ.ಎಸ್‌.ಆರ್‌.ಟಿ.ಸಿ. ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಜಿ. ಶ್ರೀನಿವಾಸಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಜನಪಕ್ಷಪಾತ, ಹಣಕ್ಕಾಗಿ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡುವುದು. ಸಣ್ಣಪುಟ್ಟ ಕಾರಣ ಕೊಟ್ಟು ಕೆಲಸದಿಂದ ಅಮಾನತುಗೊಳಿಸಿ, ಪುನಃ ಕೆಲಸಕ್ಕೆ ಬರಲು ಹಣ ಕೀಳುವುದು ಇದೆಲ್ಲ ಸಾಮಾನ್ಯ ಸಂಗತಿಯಾಗಿದೆ. ನೌಕರರು ಕೆಲಸ ಮಾಡಲಾರದಂತಹ ಸ್ಥಿತಿ ಸೃಷ್ಟಿಯಾಗಿದೆ. ಇದು ಬದಲಾಗಬೇಕು. ಈ ಕುರಿತು ಶೀಘ್ರದಲ್ಲೇ ಸಾರಿಗೆ ಸಚಿವರಿಗೆ ದೂರು ಕೊಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ತಮ್ಮ ವಿರುದ್ಧದ ಆರೋಪದ ಕುರಿತು ಮೊಹಮ್ಮದ್‌ ಫೈಜ್‌ ಅವರನ್ನು ಮಂಗಳವಾರ ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಸೋಮವಾರ ಸದಾಶಿವ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಕರೆ ಮಾಡಿದಾಗಲೂ ಅವರ ಮೊಬೈಲ್‌ ಸ್ವಿಚ್‌ ಆಫ್‌ ಇತ್ತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !