ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಕೃಷಿಕನ ಮಗ ಐಐಟಿಗೆ ಆಯ್ಕೆ

ವಾರಾಣಸಿ ಐಐಟಿಗೆ ಕೂಡ್ಲಿಗಿಯ ಕಾಲ್ಚೆಟ್ಟಿ ಗೋವಿಂದ್ ಆಯ್ಕೆ
Last Updated 27 ಅಕ್ಟೋಬರ್ 2020, 12:39 IST
ಅಕ್ಷರ ಗಾತ್ರ

ಕೂಡ್ಲಿಗಿ: ಸರ್ಕಾರಿ ವಸತಿ ಶಾಲೆಗಳಲ್ಲೇ ಸತತ ಪರಿಶ್ರಮ ಪಟ್ಟು ಅಭ್ಯಾಸ ನಡೆಸಿದ ಇಲ್ಲಿನ ಕೃಷಿ ಕುಟುಂಬದ ಗೋಂವಿದ್ ಕಾಲ್ಚೆಟ್ಟಿ, ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.

ಜೆಇಇ ಅಡ್ವಾನ್ಸ್ ಪರೀಕ್ಷೆಯ ಪರಿಶಿಷ್ಟ ಪಂಗಡ ಕೋಟಾದಡಿ ರಾಷ್ಟ್ರ ಮಟ್ಟದಲ್ಲಿ 611ನೇ ರ್ಯಾಂಕ್ ಪಡೆದ ಅವರು ಸಿರಮಿಕ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪರೀಕ್ಷೆಗಾಗಿ ಅವರು ಯಾವುದೇ ಕೋಚಿಂಗ್‌ ತರಗತಿಗಳಿಗೆ ಹೋಗಿಲ್ಲ ಎಂಬುದು ವಿಶೇಷ.

ರಮೇಶ್ ಮತ್ತು ನಾಗರತ್ನ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೆಯವರಾದ ಗೋವಿಂದ್ ಪಟ್ಟಣದ ಸ್ಪಂದನ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಓದಿದ್ದರು. ನಂತರ ವಸತಿ ಶಾಲೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 85 ಅಂಕ ಪಡೆದು ಹೊಸಪೇಟೆ ತಾಲ್ಲೂಕಿನ ತಿಮ್ಮಲಾಪುರ ಮೊರಾರ್ಜಿ ವಸತಿ ಕಾಲೇಜು ಸೇರಿ ದ್ವಿತೀಯ ಪಿಯುಸಿ ಪರೀಕ್ಷೆಯಯಲ್ಲಿ ಶೇ 85.33 ಅಂಕ ಗಳಿಸಿದ್ದರು.

ಕೋಚಿಂಗ್‌ ಇಲ್ಲ: ‘ಐಐಟಿಯಲ್ಲಿ ಪ್ರವೇಶ ಪಡೆಯಬೇಕು ಎಂಬ ಛಲದಿಂದ ಯಾವುದೇ ಕೋಚಿಂಗ್ ಇಲ್ಲದೆ ಪ್ರತಿ ದಿನ 4ರಿಂದ 5 ತಾಸು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನದೊಂದಿಗೆ ಕೆಲವೊಂದು ವಿಷಯಗಳನ್ನು ಮೊಬೈಲ್ ‌ಫೋನ್‌ನಲ್ಲೇ ನೋಡಿಕೊಂಡು ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಇದರಿಂದ ಜೆಇಇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು’ ಎಂದು ಗೋವಿಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಓದಲು ಬರೆಯಲು ಬಾರದ ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಮಗನ ಸಾಧನೆ ತೃಪ್ತಿ ತಂದಿದೆ’ ಎಂದು ಗೋವಿಂದನ ತಂದೆ ರಮೇಶ್ ಹೇಳಿದರು.

ಅನಕ್ಷರಸ್ಥರಾದ ತಂದೆತಾಯಿ ಜಮೀನಿನಲ್ಲಿ ಕೆಲಸ ಮಾಡಿದರೆ ಮಾತ್ರ ಜೀವನ. ಅವರ ಆಸೆಯೇ ನಾನು ಓದಲು ಪ್ರೇರಣೆ –ಗೋವಿಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT