ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಶಿಕ್ಷಣದಿಂದ ಸಮಾಜದಲ್ಲಿ ಸಂಘರ್ಷ

’ಸಮೂಹ ಶಕ್ತಿ’ ಸಂಘಟನೆಯ ಅಧ್ಯಕ್ಷ ದೀಪಕ್‌ ತಿಮ್ಮಯ್ಯ ಹೇಳಿಕೆ
Last Updated 9 ಫೆಬ್ರುವರಿ 2019, 12:49 IST
ಅಕ್ಷರ ಗಾತ್ರ

ಹೊಸಪೇಟೆ: ‘ನಮ್ಮ ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ಸಂಘರ್ಷಗಳು ಉಂಟಾಗುತ್ತಿವೆ’ ಎಂದು’ಸಮೂಹ ಶಕ್ತಿ’ ಸಂಘಟನೆಯ ಅಧ್ಯಕ್ಷ ದೀಪಕ್‌ ತಿಮ್ಮಯ್ಯ ತಿಳಿಸಿದರು.

ಸಂಘಟನೆಯಿಂದ ಶನಿವಾರ ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ನಮ್ಮ ವಿದ್ಯಾರ್ಥಿಗಳಿಗೆ ಸಂವಹನ ಗೊತ್ತಿಲ್ಲ. ಅವರ ಭಾಷೆ ಬೆಳೆದಿಲ್ಲ. ನಮ್ಮ ಎಲ್ಲ ಭಾವನೆಗಳನ್ನು ಭಾಷೆ ಮೂಲಕ ವ್ಯಕ್ತಪಡಿಸಬೇಕು. ಆದರೆ, ಅದರ ರೀತಿ ಬದಲಾಗಿದೆ. ಅದು ಹೊಡೆದಾಟ, ಸಂಘರ್ಷದ ಸ್ವರೂಪ ಪಡೆದುಕೊಂಡಿದೆ’ ಎಂದು ಹೇಳಿದರು.

‘ಭಾಷಣ ಮಾಲಿನ್ಯ ಆಗಿದೆ. ಹೀಗಾಗಿ ನಿಜವಾದ ಭಾಷಣಕಾರರ ಮಾತುಗಳನ್ನು ಕೇಳುವವರು ಇಲ್ಲದಂತಾಗಿದೆ. ಸಂವಹನದ ಪ್ರಮುಖ ಭಾಗ ಕೇಳಿಸಿಕೊಳ್ಳುವುದು. ಅದು ನಮ್ಮಲ್ಲಿ ಆಗುತ್ತಿಲ್ಲ’ ಎಂದರು.

‘ಪ್ರಜಾಪ್ರಭುತ್ವ ನಿಂತಿರುವುದೇ ಮಾತು, ವಾದ, ಚರ್ಚೆಯ ಮೇಲೆ. ಆದರೆ, ಅತ್ಯುತ್ತಮ ಚರ್ಚೆಗಳು ಸಂಸತ್ತಿನಲ್ಲಿ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಭಾಷೆ, ಸಂವಹನ ಕೌಶಲ ಕಲಿಸಿಕೊಡಬೇಕು. ಈ ವ್ಯವಸ್ಥೆ ಪಶ್ಚಿಮದ ರಾಷ್ಟ್ರಗಳಲ್ಲಿ ಇದೆ. ಹೀಗಾಗಿಯೇ ಅಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿದೆ’ ಎಂದು ತಿಳಿಸಿದರು.

‘ಬ್ರಿಟಿಷರು ಇಂಗ್ಲಿಷ್‌ ದಿನ, ಇಂಗ್ಲಿಷ್‌ ಉಳಿಸಿ, ಇಂಗ್ಲಿಷ್‌ ವ್ಯಕ್ತಿಯ ಪ್ರತಿಮೆ ಮಾಡಿಲ್ಲ. ಅದರ ಬದಲಾಗಿ ಪ್ರಪಂಚದಾದ್ಯಂತ ಅವರ ಭಾಷೆ ಬೆಳೆಸಿದ್ದಾರೆ. ಹೀಗಾಗಿ ಇಂಗ್ಲಿಷ್‌ ಅಂತರರಾಷ್ಟ್ರೀಯ ಭಾಷೆಯಾಗಿ ಬೆಳೆದಿದೆ. ಆದರೆ, ನಾವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಕಾನೂನು ಮಾಡುವವರೇ ನಮ್ಮ ದೇಶದಲ್ಲಿ ಕಾನೂನು ಪಾಲಿಸುವುದಿಲ್ಲ. ಅವರ ಬಗ್ಗೆ ನಮಗೆ ಕಿಂಚಿತ್ತೂ ಗೌರವ ಇಲ್ಲ. ಆದರೆ, ಅವರನ್ನೇ ಆಯ್ಕೆ ಮಾಡುತ್ತೇವೆ. ಅವರು ಜಾರಿಗೆ ತಂದ ಕಾನೂನು ಕೂಡ ಪಾಲಿಸುವುದಿಲ್ಲ. ಇದರಿಂದಾಗಿ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಹೇಳಿದರು.

‘ಯಾವುದಾದರೂ ದೇಶದಲ್ಲಿ ಸರ್ಕಾರಕ್ಕೆ ಭಯ ಇರುವುದಾದರೆ ಅದು ಯುವಜನಾಂಗದಿಂದ. ಆದರೆ, ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ಬಹಳ ದೊಡ್ಡದಿದೆ. ಆದರೆ, ಅವರು ಪುಕ್ಕಲುಗಳಿದ್ದಾರೆ. ಅವರನ್ನು ಹೇಗೆ ದಿಕ್ಕು ತಪ್ಪಿಸಬೇಕು ಎನ್ನುವುದು ರಾಜಕಾರಣಿಗಳಿಗೆ ಗೊತ್ತಿದೆ. ಹಿಂದೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ತುರ್ತು ಪರಿಸ್ಥಿತಿ ಹಿಂಪಡೆಯಬೇಕಾಯಿತು. ಯುವಕರು ಭಯವಿಲ್ಲದೆ ಎದ್ದು ನಿಂತರೆ ಬದಲಾವಣೆ ತರಬಹುದು’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದು. ಮಾಹಿತಿ ಕೊಡುವುದು ಅದರ ಕೆಲಸ. ಆದರೆ, ಆ ಕೆಲಸ ಬಿಟ್ಟು ಬೇರೆಲ್ಲವನ್ನೂ ಅದು ಮಾಡುತ್ತಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಇಂದು ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆ. ಜಾಹೀರಾತಿಗಾಗಿ ಮಾಧ್ಯಮ ಸಂಸ್ಥೆಗಳು ಅವುಗಳ ಅಡಿಯಾಳಾಗಿವೆ’ ಎಂದರು.

ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ಪ್ರಾಧ್ಯಾಪಕರಾದ ಪಲ್ಲವ ವೆಂಕಟೇಶ, ಲೇಪಾಕ್ಷಿ ಜವಳಿ, ಸಂಘಟನೆಯ ಮಹಾಂತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT