ಸಮಗ್ರ ಕೃಷಿಗೆ ಈ ಮಹಿಳೆ ಮಾದರಿ

7

ಸಮಗ್ರ ಕೃಷಿಗೆ ಈ ಮಹಿಳೆ ಮಾದರಿ

Published:
Updated:
Deccan Herald

ಹೊಸಪೇಟೆ: ಸಮಗ್ರ ಕೃಷಿ ಮೂಲಕ ಮನೆ ಮಾತಾದವರು ತಾಲ್ಲೂಕಿನ ಕಡ್ಡಿರಾಂಪುರದ ರೈತ ಮಹಿಳೆ ಎಸ್‌.ಎಚ್‌.ಎಂ. ಸುಜಾತ.

ಗ್ರಾಮದಲ್ಲಿನ ಮನೆ ಒಳಗೊಂಡಂತೆ ಇರುವ ಒಂದು ಎಕರೆ ತೋಟದಲ್ಲಿ ತರಹೇವಾರಿ ಹಣ್ಣು, ಹೂ, ಔಷಧಿ ಸಸ್ಯಗಳನ್ನು ಬೆಳೆಸಿ, ಎಲ್ಲರೂ ಹುಬ್ಬೇರಿಸುವಂತಹ ಕೆಲಸ ಮಾಡಿದ್ದಾರೆ.

ಅವರ ತೋಟದಲ್ಲಿ ರಾಮಫಲ, ಹನುಮಾನ ಫಲ, ಲಕ್ಷ್ಮಣ ಫಲ, ಸೀತಾ ಫಲ, ಇನ್ಸುಲಿನ್‌ ಬಳ್ಳಿ, ಅದರ ಸಸಿಗಳು, ಫ್ಯಾಶನ್‌ ಫ್ರೂಟಿ, ಸಪೋಟ, ಬಾರೆಹಣ್ಣು, ಕೆರೆ ಗಿಡಗಳು, ಜೇನು ಹುಳು ಸಲಹಲು ಆ್ಯಂಟಿಗೋನಿ ಗಿಡಗಳು, ಕೇರ್‌ ಹಣ್ಣು, ಗಡಲೆಕಾಯಿ, ನೆಲ್ಲಿಕಾಯಿ, ಕನಕಾಂಬರ, ಹುಣಸೆಗಿಡ, ನೇರಲೆ ಹಣ್ಣು, ನುಗ್ಗೆ ಗಿಡ, ಮೆಣಸಿನಕಾಯಿ, ಕರಿಬೇವು, ಬಸಳೆ ಸೊಪ್ಪು, ದಾಸವಾಳ, ನಂದಿ ಬಟ್ಟಲು, ದುಂಡು ಮಲ್ಲಿಗೆ ಗಿಡಗಳನ್ನು ಬೆಳೆಸಿದ್ದಾರೆ. ಇದರ ಜತೆಗೆ ಜೇನು ಸಾಕಾಣಿಕೆ ಕೂಡ ಮಾಡಿದ್ದಾರೆ.

ತೋಟದಲ್ಲಿ ಒಂದು ತೊಟ್ಟು ಕೂಡ ರಸಾಯನಿಕ ಬಳಸದಿರುವುದು ಸುಜಾತ ಅವರ ಮತ್ತೊಂದು ವಿಶೇಷ. ಎಲ್ಲ ಗಿಡ, ಮರಗಳಿಗೂ ಗೋಮೂತ್ರದಿಂದ ತಯಾರಿಸಿದ ಜೀವಾಮೃತ ಸಿಂಪಡಿಸುತ್ತಾರೆ. ತೋಟದಲ್ಲೇ ಎರಡು ಎರೆಹುಳು ತೊಟ್ಟಿ ತಯಾರಿಸಿದ್ದು, ಅಲ್ಲಿ ತಯಾರಿಸಿದ ಗೊಬ್ಬರವನ್ನು ಇಡೀ ತೋಟಕ್ಕೆ ಉಪಯೋಗಿಸುತ್ತಾರೆ. ಸಂಪೂರ್ಣ ಸಾವಯವ ಮಾದರಿಯಲ್ಲಿ ತೋಟ ಬೆಳೆಸಿರುವುದರಿಂದ ದೂರದ ಊರುಗಳಿಂದ ಜನ ಖುದ್ದಾಗಿ ಅವರ ತೋಟಕ್ಕೆ ಬಂದು ತರಕಾರಿ, ಹಣ್ಣು ಖರೀದಿಸಿ, ಕೊಂಡೊಯ್ಯುತ್ತಾರೆ. ಬೆಳೆದಿರುವುದನ್ನು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವ ಚಿಂತೆ ಇಲ್ಲ. ಇವರ ತೋಟವೇ ಈಗ ಸಣ್ಣ ಮಾರುಕಟ್ಟೆಯಾಗಿ ಬದಲಾಗಿದೆ.

ಅಷ್ಟೇ ಅಲ್ಲ, ಸುಜಾತ ಅವರ ಕೆಲಸವನ್ನು ನೋಡಲು ನಿತ್ಯ ನೆರೆ ಊರುಗಳು ಹಾಗೂ ಜಿಲ್ಲೆಯ ರೈತರು ಭೇಟಿ ಕೊಡುವುದು ಸಾಮಾನ್ಯವಾಗಿದೆ. ಕೃಷಿ ಇಲಾಖೆಯು ಇವರ ತೋಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು, ರೈತರಿಗೆ ಸಮಗ್ರ ಕೃಷಿ ಮಹತ್ವ ತಿಳಿಸಿಕೊಡುವ ಕೆಲಸ ಮಾಡಿದೆ.

ಸುಜಾತ ಅವರ ಪತಿ ಬಸಯ್ಯ ಸ್ವಾಮಿ ಅವರು ಜೀವಾಮೃತ ತಯಾರಿಸಲು ಕೈಜೋಡಿಸುತ್ತಾರೆ. ಜತೆಗೆ ಬೇರೆ ಊರುಗಳಿಂದ ಸಸಿಗಳನ್ನು ತಂದು ಕೊಡುತ್ತಾರೆ.

ಇನ್ನುಳಿದಂತೆ ಸಸಿಗಳಿಗೆ ನಿತ್ಯ ನೀರು ಹರಿಸುವುದು, ಕಳೆ ತೆಗೆಯುವುದು ಸೇರಿದಂತೆ ಎಲ್ಲ ಕೆಲಸವನ್ನು ಸುಜಾತ ಅವರೇ ಮಾಡುತ್ತಾರೆ. ತೋಟದಲ್ಲೇ ಮನೆ ಇರುವುದರಿಂದ ದೈನಂದಿನ ಕೆಲಸ ಮುಗಿಸಿಕೊಂಡು, ಮಿಕ್ಕುಳಿದ ಸಮಯವನ್ನು ಸಸಿಗಳ ಪಾಲನೆ, ಪೋಷಣೆಯಲ್ಲೇ ಕಳೆಯುತ್ತಾರೆ. ನಿತ್ಯ ಮನೆಯಲ್ಲಿ ಆಹಾರ ತಯಾರಿಕೆಗೆ ಬೇಕಾಗುವ ಬಹುತೇಕ ಪದಾರ್ಥಗಳನ್ನು ತೋಟದಲ್ಲೇ ಬೆಳೆದಿರುವುದನ್ನು ಉಪಯೋಗಿಸುತ್ತಾರೆ.

‘ಜೋಳ, ಅಕ್ಕಿ, ಗೋಧಿ ಸೇರಿದಂತೆ ಕೆಲವು ಪದಾರ್ಥಗಳನ್ನು ಹೊರಗಿನಿಂದ ತರುವುದು ಬಿಟ್ಟರೆ ಉಳಿದೆಲ್ಲವನ್ನು ತೋಟದಲ್ಲಿ ಬೆಳೆದಿರುವುದನ್ನೇ ಉಪಯೋಗಿಸುತ್ತೇವೆ. ರಸಾಯನಿಕ ರಹಿತ ತಾಜಾ ತರಕಾರಿ, ಹಣ್ಣು ಸೇವನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ಕಾಯಿಲೆಗಳು ಬರುವುದಿಲ್ಲ. ಈ ಕಾರಣಕ್ಕಾಗಿಯೇ ಜನ ನಮ್ಮ ಬಳಿ ಬಂದು ಖರೀದಿಸುತ್ತಾರೆ’ ಎನ್ನುತ್ತಾರೆ ಸುಜಾತ.

‘ನಮ್ಮ ಮನೆಯವರು ಊರಿನಿಂದ ಸ್ವಲ್ಪ ದೂರದಲ್ಲಿ ಮೂರು ಎಕರೆ ಜಮೀನು ಪಡೆದಿದ್ದು, ಅಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಜತೆಗೆ ನಾಲ್ಕು ಹಸುಗಳಿವೆ. ಅವುಗಳನ್ನೆಲ್ಲ ಅವರು ನೋಡಿಕೊಳ್ಳುತ್ತಾರೆ. ಮನೆ ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ತೋಟವನ್ನು ನಾನು ನೋಡಿಕೊಳ್ಳುತ್ತೇನೆ. ಹೊರಗಿನಿಂದ ಏನಾದರೂ ತರಬೇಕಿದ್ದರೆ ಅವರ ಸಹಾಯ ಪಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !