ಗುರುವಾರ , ಜೂನ್ 17, 2021
21 °C

ಹಬ್ಬದ ಖರೀದಿಗೆ; ಮಾರುಕಟ್ಟೆಯಲ್ಲಿ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಶುಕ್ರವಾರ (ಮೇ 14) ಒಂದೇ ದಿನ ಬಸವ ಜಯಂತಿ, ಈದ್‌–ಉಲ್‌–ಫಿತ್ರ ಹಬ್ಬ ಬಂದಿರುವುದರಿಂದ ಗುರುವಾರ ನಗರದ ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಜನ ಬಂದಿದ್ದರು.

ನಗರದ ಬಹುತೇಕ ದಿನಸಿ ಮಳಿಗೆಗಳ ಎದುರು ಗುರುವಾರ ಉದ್ದನೆಯ ಸಾಲು ಕಂಡು ಬಂತು. ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆ ಆರರಿಂದ ಹತ್ತು ಗಂಟೆಯ ವರೆಗೆ ಕಾಲಾವಕಾಶ ಇರುವುದರಿಂದ ಜನ ಏಳು ಗಂಟೆಗೆಲ್ಲ ಅಂಗಡಿಗಳ ಎದುರು ಬಂದು ನಿಂತಿದ್ದರು. ಮಳಿಗೆಗಳ ಬಾಗಿಲು ತೆರೆಯುತ್ತಿದ್ದಂತೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು. ಹೊತ್ತು ಏರುತ್ತಿದ್ದಂತೆ ಜನದಟ್ಟಣೆ ಹೆಚ್ಚಾಯಿತು. ಸಾಲು ಕೂಡ ಬೆಳೆಯಿತು.

ನಗರದ ಎಪಿಎಂಸಿ ಕ್ರಾಸ್‌, ರಾಮ ಟಾಕೀಸ್‌, ಗಾಂಧಿ ವೃತ್ತ, ಮೇನ್‌ ಬಜಾರ್‌, ಪುಣ್ಯಮೂರ್ತಿ ವೃತ್ತ, ಬಳ್ಳಾರಿ ರಸ್ತೆ ವೃತ್ತ, ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿಯ ಮಾರುಕಟ್ಟೆ ಬಳಿ ಅಧಿಕ ಜನದಟ್ಟಣೆ ಇತ್ತು. ಜನ ತರಕಾರಿ, ಹಣ್ಣು, ಹೂ, ಕಾಯಿ, ಶಾವಿಗೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.

ಕೆಲವು ಮಳಿಗೆಯವರು ಹತ್ತು ಗಂಟೆಯ ನಂತರವೂ ಬಾಗಿಲು ಮುಚ್ಚಿಕೊಂಡು ವ್ಯವಹಾರ ನಡೆಸಿದರು. ಅದನ್ನು ಕಂಡು ಪೊಲೀಸರು ಎಚ್ಚರಿಕೆ ನೀಡಿ ಬಂದ್‌ ಮಾಡಿಸಿದರು. ಮಳಿಗೆಯೊಳಗೆ ಸೇರಿದ್ದ ಜನರನ್ನು ಕಳುಹಿಸಿದರು. ಕೆಲವು ಬಟ್ಟೆ ಮಳಿಗೆಯವರು ಗ್ರಾಹಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಮನೆಗಳಿಗೆ ಕರೆಸಿಕೊಂಡು ಅಲ್ಲಿಯೇ ವ್ಯಾಪಾರ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.