ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪಾಕ್ಷನ ಸನ್ನಿಧಿಗೆ ಭಕ್ತಸಾಗರ

ಶ್ರಾವಣ ಸೋಮವಾರ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿಶೇಷ ಪೂಜೆ
Last Updated 26 ಆಗಸ್ಟ್ 2019, 9:11 IST
ಅಕ್ಷರ ಗಾತ್ರ

ಹೊಸಪೇಟೆ: ಶ್ರಾವಣ ಮಾಸದ ನಾಲ್ಕನೇ ಸೋಮವಾರ ನಗರ ಸೇರಿದಂತೆ ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯಿತು.

ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ವಿರೂಪಾಕ್ಷೇಶ್ವರ, ಪಂಪಾಂಬಿಕೆಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿಶೇಷ ರೀತಿಯಲ್ಲಿ ಅಲಂಕರಿಸಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ರಾಯಚೂರು, ಗದಗ, ದಾವಣಗೆರೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ದೇವರಿಗೆ ಕಾಯಿ, ಕರ್ಪೂರ, ಹೂ, ನೈವೇದ್ಯ ಸಮರ್ಪಿಸಿ, ದರ್ಶನ ಪಡೆದರು.

ನದಿ ತಟದಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಬುತ್ತಿ ಬಿಚ್ಚಿಕೊಂಡು ಮಧ್ಯಾಹ್ನದ ಊಟ ಮಾಡುತ್ತಿರುವ ದೃಶ್ಯ ಕಂಡು ಬಂತು. ಬಳಿಕ ಹಂಪಿಯ ಪರಿಸರದಲ್ಲಿ ಓಡಾಡಿ, ಎದುರು ಬಸವಣ್ಣ ಮಂಟಪ, ಚಕ್ರತೀರ್ಥ, ರಾಮ–ಲಕ್ಷ್ಮಣ, ಯಂತ್ರೋದ್ಧಾರಕ, ಬಡವಿಲಿಂಗ, ಉಗ್ರನರಸಿಂಹ, ಸಾಸಿವೆಕಾಳು, ಕಡಲೆಕಾಳು, ಗಜಶಾಲೆ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ವಿಜಯ ವಿಠಲ ದೇವಸ್ಥಾನಕ್ಕೆ ಹೋಗಿ ಕಲ್ಲಿನ ರಥ ಸೇರಿದಂತೆ ಇತರೆ ಸ್ಮಾರಕಗಳನ್ನು ಕಣ್ತುಂಬಿಕೊಂಡರು.

ಶ್ರಾವಣ ಸೋಮವಾರದ ನಿಮಿತ್ತ ಭಕ್ತರು ಹಾಗೂ ಹೊರಗಿನಿಂದ ಪ್ರವಾಸಿಗರು ಬಂದದ್ದರಿಂದ ಎಂದಿಗಿಂತ ಹಂಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ಕಂಡು ಬಂತು. ವಾಹನ ನಿಲುಗಡೆ ಜಾಗ ಸಂಪೂರ್ಣ ಭರ್ತಿಯಾಗಿದ್ದರಿಂದ ಎದುರು ಮಂಟಪ ಎದುರು ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಭಾಗಗಳಿಂದ ಬಂದಿದ್ದ ಪ್ರವಾಸಿಗರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ನಗರದ ಸಾಯಿಬಾಬಾ ದೇವಸ್ಥಾನ, ಮಾರ್ಕಂಡೇಶ್ವರ ದೇವಸ್ಥಾನ, ವಡಕರಾಯ ದೇವಸ್ಥಾನ, ವೇಣುಗೋಪಾಲ, ಪಾದಗಟ್ಟೆ ಆಂಜನೇಯ, ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT