ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಮುಷ್ಕರ: ಸಂಧಾನ ಸಭೆ ಮತ್ತೆ ವಿಫಲ

Last Updated 19 ಮಾರ್ಚ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಕಾರ್ಮಿಕ ನ್ಯಾಯಾಲಯದಲ್ಲಿ ಸೋಮವಾರ ನಡೆದ ಎರಡನೇ ಸಂಧಾನ ಸಭೆಯೂ ವಿಫಲವಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇದೇ 22ರಂದು ಮುಷ್ಕರ ನಡೆಸಲು ನಿಗಮದ ಸಿಬ್ಬಂದಿ ನಿರ್ಧರಿಸಿದ್ದಾರೆ. ಈ ಸಂಬಂಧ ಶುಕ್ರವಾರ ನಡೆದಿದ್ದ ಸಭೆಯೂ ವಿಫಲವಾಗಿತ್ತು.

ಮುಷ್ಕರ ಹಿಂಪಡೆದು ಮಾತುಕತೆಗೆ ಬಂದರೆ ಮಾತ್ರ ಬೇಡಿಕೆ ಈಡೇರಿಸಲು ಚಿಂತಿಸಲಾಗುತ್ತದೆ. ಅದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಅಧಿಕಾರಿಗಳು ಪಟ್ಟು ಹಿಡಿದರು. ಅದಕ್ಕೆ ಬಿಎಂಆರ್‌ಸಿಎಲ್‌ ನೌಕರರ ಸಂಘದ ಸದಸ್ಯರು ಒಪ್ಪಲಿಲ್ಲ. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2ಗಂಟೆವರೆಗೂ ಸಭೆ ನಡೆದರೂ ಮಾತುಕತೆ ಫಲಿಸಲಿಲ್ಲ.

‘ಸಂಘಕ್ಕೆ ಮಾನ್ಯತೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಇದಕ್ಕೆ ಸಮ್ಮತಿ ಸಿಗುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. ಹೀಗಾಗಿ, ಮಾತುಕತೆ ಮುರಿದು ಬಿದ್ದಿದೆ. 22ರಂದು ಮುಷ್ಕರ ನಡೆಸುವುದು ನಿಶ್ಚಿತ’ ಎಂದು ಬಿಎಂಆರ್‌ಸಿಎಲ್‌ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣಮೂರ್ತಿ ತಿಳಿಸಿದರು.

ಸಂಘಕ್ಕೆ ಮಾನ್ಯತೆ ನೀಡುವುದನ್ನು ಹೊರತುಪಡಿಸಿ ಉಳಿದೆಲ್ಲ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ಸಭೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಸಭೆ ಅಂತ್ಯದ ವೇಳೆಗೆ ಅವರು ಉಲ್ಟಾ ಹೊಡೆದರು ಎಂದು ಹೇಳಿದರು.

‘ನಿಗಮದ ಉನ್ನತಾಧಿಕಾರಿಗಳು ಸಂಧಾನ ಸಭೆಗೆ ಬರುತ್ತಿಲ್ಲ. ಹೀಗಾಗಿ, ಸಭೆಯಲ್ಲಿ ಒಮ್ಮತ ಮೂಡುತ್ತಿಲ್ಲ. ಇದೇ 21ರಂದು ಮತ್ತೊಮ್ಮೆ ಸಭೆ ಕರೆಯುವುದಾಗಿ ಕೆಲ ಅಧಿಕಾರಿಗಳು ಹೇಳಿದ್ದಾರೆ. ಆ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ಸಭೆ ಕರೆದರೂ ನಮ್ಮ ನಿಲುವು ಬದಲಾಗುವುದಿಲ್ಲ. ಬೇಡಿಕೆ ಈಡೇರಿಸುವ ಸಂಬಂಧ ಖಚಿತ ಭರವಸೆ ನೀಡಿದರೆ ಮಾತ್ರ ಮುಷ್ಕರ ಹಿಂಪಡೆಯುತ್ತೇವೆ’ ಎಂದು ಸಂಘದ ಸದಸ್ಯ ಉಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT