ಶನಿವಾರ, ಫೆಬ್ರವರಿ 27, 2021
20 °C

ಶಾಸನ ಸಭೆ ಜನಪರವಾಗಲಿ: ಸಿದ್ದಲಿಂಗಯ್ಯ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಶಾಸನಗಳನ್ನು ರೂಪಿಸುವ ವಿಧಾನಸಭೆ ಹಾಗೂ ವಿಧಾನ ಪರಿಷತ್‍ ರಾಜಕೀಯ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ಜನಪರವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದು ಕವಿ ಡಾ.ಸಿದ್ಧಲಿಂಗಯ್ಯ ಪ್ರತಿಪಾದಿಸಿದರು.

ಸಿರಿಗೇರಿ ಅನ್ನಪೂರ್ಣ ಪ್ರಕಾಶನವು ನಗರದ ಶ್ರೀಗುರು ತಿಪ್ಪೇರುದ್ರ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲೇಖಕ ಸಿರಿಗೇರಿ ಎರಿಸ್ವಾಮಿ ಅವರ ಸಂಪಾದನೆಯ `ಬೆಳಕಿಲ್ಲದ ದಾರಿ-ಕನಸಿಲ್ಲದ ಹಾದಿ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ವಿಧಾನ ಪರಿಷತ್‌ನಲ್ಲಿ ನಾನು ಹಲವು ಬಾರಿ ದುಡಿವ ಜನರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಿರುವೆ. ರೈತರು, ಕೃಷಿ ಕಾರ್ಮಿಕರು, ಮಹಿಳೆಯರ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಿದೆ. ಶಾಸನ ಸಭೆಗಳು ಶೋಷಿತ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಮಾಡಬೇಕು’ ಎಂದರು.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಅಜಲು ಪದ್ಧತಿಯನ್ನು (ಮೇಲ್ವರ್ಗದವರಿಗೆ ಕಾಯಿಲೆ ಬಂದರೆ ಅವರ ಕೂದಲು, ಉಗುರುಗಳನ್ನು ಅನ್ನದಲ್ಲಿ ಕಲಿಸಿ ದಲಿತರಿಗೆ ಉಣ್ಣಿಸುವುದು) ನಿಷೇಧಿಸಬೇಕು ಎಂದು ಒತ್ತಾಯಿಸಿದ್ದೆ. ಅಂದು ಸಚಿವರಾಗಿದ್ದ ಸಮಾಜವಾದಿ ಹಿನ್ನಲೆಯ ಕಾಗೋಡು ತಿಮ್ಮಪ್ಪ ಅವರು ಕೂಡಲೇ ಅದನ್ನು ರದ್ದುಗೊಳಿಸಿದರು’ ಎಂದು ಸ್ಮರಿಸಿದರು.

‘ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಬೇಕು. ಹಾಗೆ ಮದುವೆಯಾದವರನ್ನು ಕೊಲ್ಲಬಾರದು. ಅಂತರ್ಜಾತಿ ವಿವಾಹವಾದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 5 ರಷ್ಟು ಮೀಸಲಾತಿ ನೀಡಬೇಕು ಎಂದು ನಾನು ಮಸೂದೆ ಮಂಡಿಸಿದೆ. ಸರ್ಕಾರ ಅದನ್ನು ಒಪ್ಪಿಕೊಂಡಿತ್ತು. ಆದರೆ, ಕಾರ್ಯರೂಪಕ್ಕೆ ಬರಲಿಲ್ಲ’ ಎಂದು ವಿಷಾದಿಸಿದರು.

ಲೇಖಕ ಸಿರಿಗೇರಿ ಎರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ.ನಾಗರಾಜಗೌಡ ಉಪಸ್ಥಿತರಿದ್ದರು.

ನಂತರ ನಡೆದ, ಕರ್ನಾಟಕ ರಾಜಕೀಯ ಇತಿಹಾಸ ಅವಲೋಕ ಕುರಿತ ವಿಚಾರಸಂಕಿರಣದಲ್ಲಿ ಮಾಜಿ ಉಪಸಭಾಪತಿ ಡೇವಿಡ್‌ ಸೈಮನ್‌ ಹೈದರಾಬಾದ್‌ ಕರ್ನಾಟಕ ರಾಜಕಾರಣ ಕುರಿತು ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು