ಭಾನುವಾರ, ಸೆಪ್ಟೆಂಬರ್ 25, 2022
21 °C

ಬಳ್ಳಾರಿ ಗುಡ್ಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಬಲೆಗೆ ಬೀಳದ ಚಿರತೆ ಸಂಜಯಗಾಂಧಿ ನಗರದ ಪಾರ್ಕ್‌ಗೆ ಹೊಂದಿಕೊಂಡಿರುವ ಬಳ್ಳಾರಿ ಗುಡ್ಡದ ಮೇಲೆ ಸೋಮವಾರ ಪ್ರತ್ಯಕ್ಷವಾಗಿದೆ.

ಚಿರತೆ ಬಂಡೆಯೊಂದರ ಮೇಲೆ ಕುಳಿತಿರುವ ದೃಶ್ಯವನ್ನು ಚಿತ್ರೀಕರಿಸಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದರಿಂದಾಗಿ ಗುಡ್ಡದ ಸುತ್ತಮುತ್ತಲ ನಿವಾಸಿಗಳು ಇನ್ನಷ್ಟು ಆತಂಕಗೊಂಡಿದ್ದಾರೆ.

ಗುಡ್ಡದ ಮೇಲೆ ಶುಕ್ರವಾರ ಸಂಜೆ ಮೊದಲ ಸಲ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ಡಿಎಫ್‌ಒ ಸಂದೀಪ್‌ ರಾವ್‌ ಸೂರ್ಯವಂಶಿ, ಆರ್‌ಎಫ್‌ಒ ಮಂಜುನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆಗೆ ಅರಣ್ಯ ಸಿಬ್ಬಂದಿ ತಂಡ ರಚಿಸಿದರು. ಈ ತಂಡ ನಾಲ್ಕು ದಿನಗಳಿಂದ  ಶೋಧ ನಡೆಸಿದೆ. ರಾತ್ರಿ ಹೊತ್ತಿನಲ್ಲಿ ಕಾಣುವ ಕ್ಯಾಮರಾ ತರಿಸಲಾಗಿದೆ. ಡ್ರೋಣ್‌ ಕ್ಯಾಮರಾ ನೆರವೂ ಪಡೆಯಲಾಗಿದೆ.

’ಸೋಮವಾರ ಸಂಜೆ ಚಿರತೆ ಕಾಣಿಸಿಲ್ಲ. ಭಾನುವಾರ ಡ್ರೋಣ್‌ ಕ್ಯಾಮರಾದಲ್ಲಿ ಅದರ ಚಿತ್ರ ಸೆರೆಯಾಗಿದೆ. ಗುಡ್ಡದಲ್ಲಿ ಅದು ವೇಗವಾಗಿ ಓಡುವುದರಿಂದ ಸುತ್ತುವರಿದು ಸೆರೆ ಹಿಡಿಯುವುದು ಕೊಂಚ ಕಷ್ಟವಾಗಿದೆ. ಕಾರ್ಯಾಚರಣೆ ನಡೆಸುತ್ತಿರುವ ತಂಡದಲ್ಲಿ ಪರಿಣಿತರಿದ್ದಾರೆ. ಅರಿವಳಿಕೆ ಮದ್ದು ಕೊಟ್ಟು ಅದನ್ನು ಸೆರೆ ಹಿಡಿಯಬೇಕಿದೆ. ಭಾನುವಾರ ನಾನೇ ಸ್ವತಃ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದೆ‘ ಎಂದು ಸೂರ್ಯವಂಶಿ ಸ್ಪಷ್ಟಪಡಿಸಿದರು.

’ಚಿರತೆ ಸೆರೆಗೆ ಎಲ್ಲ ತಂತ್ರ ಅನುಸರಿಸಲಾಗುತ್ತಿದೆ. ಎರಡು ಬೋನ್‌ ತರಿಸಲಾಗಿದೆ. ಸ್ಥಳೀಯ ಜನ ಇಲಾಖೆ ಜತೆ ಸಹಕರಿಸಬೇಕು ‘ಎಂದು ಸೂರ್ಯವಂಶಿ ಮನವಿ ಮಾಡಿದರು. ’ರಭವವಾಗಿ ಬೀಸುತ್ತಿರುವ ಶ್ರಾವಣದ ಗಾಳಿ ಮತ್ತು ಮಳೆಯಿಂದಾಗಿ ಡ್ರೋಣ್‌ ಕ್ಯಾಮರಾ ನಿಯಂತ್ರಣ ಕಷ್ಟವಾಗಿದೆ‘ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

’ರಾತ್ರಿ ವೇಳೆ ದೀಪಗಳನ್ನು ಆರಿಸುವುದರಿಂದ ಹತ್ತು ಗಂಟೆ ಬಳಿಕ ಮನೆಗೆ ಬರುವವರಿಗೆ ತೊಂದರೆ ಆಗಿದೆ. ಚಿರತೆ ಪುನಃ ಪ್ರತ್ಯಕ್ಷವಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ತಕ್ಷಣ ಹೊರಗಡೆಯಿಂದ ಪರಿಣಿತರನ್ನು ಕರೆಸಿ ಅದನ್ನು ಸೆರೆ ಹಿಡಿಯಬೇಕು ಎಂದು ನಿವೃತ್ತ ರೈಲ್ವೆ ಉದ್ಯೋಗಿ ವಿಜಯಕುಮಾರ್‌ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು